Malpe: ಮಸೀದಿ ಶೌಚಾಲಯದಲ್ಲಿ ನವಜಾತ ಶಿಶು ಶವ ಪತ್ತೆ ಪ್ರಕರಣ – ಪೊಲೀಸರಿಂದ ತಾಯಿಯ ಬಂಧನ !!

Malpe: ಮಸೀದಿಗೆ ಸಂಬಂಧಿಸಿದ ಕಟ್ಟಡವೊಂದರ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆ ಬೀಚ್ ಬಳಿ ನಡೆದಿತ್ತು. ಇದೀಗ ಪೊಲೀಸರು ಈ ಪ್ರಕರಣದ ಅಸಲಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಮಸೀದಿಯ ವ್ಯವಸ್ಥಾಪಕ ಸುಹೇಲ್ ಅವರು ನಿನ್ನೆ ಶೌಚಾಲಯಕ್ಕೆ ಹೋದಾಗ ನವಜಾತ ಶಿಶು ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿತ್ತು. ತಕ್ಷಣವೇ ಅವರು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲಿಸಿದ್ದರು. ಅಲ್ಲದೆ ಮಗುವಿನ ಜನನವನ್ನು ಮರೆಮಾಚಲು ಯತ್ನಿಸಿರುವ ಸಾಧ್ಯತೆಯಿದೆಂದು ತಿಳಿಸಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತನಿಖೆ ಮುಂದುವರೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಗುವಿನ ತಾಯಿಯನ್ನು ಪತ್ತೆ ಹಚ್ಚಿದ್ದು, ತಾಯಿಯ ವಿರುದ್ದ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
“ಪ್ರಥಮವಾಗಿ ಈ ಮಗು ಸ್ಥಳೀಯರಾಗಿರುವ ಆಫ್ರಿನಾ ಎಂಬವರದ್ದು ಎಂಬುದು ತಿಳಿದುಬಂದಿದೆ. ಈಗಾಗಲೇ ಅವರಿಗೆ ಒಂದು ಮಗು ಇದ್ದು, ಇನ್ನೊಂದು 7-8 ತಿಂಗಳ ಗರ್ಭವನ್ನು, ಗರ್ಭಪಾತ ಮಾಡಿಸಿಕೊಳ್ಳಲು ಯಾವುದೇ ವೈದ್ಯಕೀಯ ನೆರವನ್ನು ಪಡೆದು ಕೊಳ್ಳದೆ, ಇವರೇ ಸ್ವತಹ ಪ್ರಯತ್ನಿಸಿದ್ದರು. ಈ ಬಗ್ಗೆ ತೀರ ಹೊಟ್ಟೆ ನೋವಿನಿಂದ ಬಳಲಿ ಮಲ್ಪೆ ಮಸೀದಿ ಕಟ್ಟಡದಲ್ಲಿರುವ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದರು” ಎಂದು ಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ.
ಅಲ್ಲದೆ “ಬಳಿಕ ಆಕೆ ಮಗುವನ್ನು ಅಲ್ಲಿಯೇ ಬಿಟ್ಟು ತೆರಳಿರುವುದಾಗಿ ಅವರ ಸ್ವಇಚ್ಛಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಮಗು ಬೇರೆಯವರದ್ದೆಂದು ಹೇಳುವ ಕೆಲವೊಂದು ಅನುಮಾನಾಸ್ಪದ ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ರೀತಿ ಯಾರೂ ಕೂಡ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಈ ರೀತಿಯಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದರು.
Comments are closed.