ಮ್ಯಾನೇಜ್ಮೆಂಟ್ ಸ್ಟೋರಿ: ದ ವಿಂಡೋ!
ಪಕ್ಕದ ಮನೆಯವಳಿಗೆ ಬಟ್ಟೆ ಒಗೆಯಲು ಹೇಳಿಕೊಟ್ಟ ಗಂಡ!

ಇದು ಹಿಂದೆ ಅದೆಲ್ಲೋ ಕೇಳಿದ ಕಥೆ. ಅದೊಂದು ಊರು. ಅಲ್ಲೊಂದು ಮನೆ. ಮನೆಯಲ್ಲಿ ಒಂದು ಜೋಡಿ. ವಿಶೇಷ ಅಂದ್ರೆ ಅವರಿಬ್ಬರಿಗೆ ಇತ್ತೀಚೆಗೆ ತಾನೆ ಮದುವೆಯಾಗಿತ್ತು, ಸಹಜವಾಗಿ ಸುಖ ಸಂಸಾರ ಅವರದಾಗಿತ್ತು. ಪತ್ನಿ ಹೋಂ ಮೇಕರ್. ಗಂಡ ಪ್ರತಿದಿನ ಬೆಳಿಗ್ಗೆ ಬೇಗನೆ ಮನೆ ಬಿಡುತ್ತಿದ್ದ. ಆಫೀಸು ಒಂದಷ್ಟು ಹೆಚ್ಚಿಗೆ ದೂರ ಇರುವ ಕಾರಣ ಬೆಳಿಗ್ಗೆ ಎಂಟು ಗಂಟೆಗೆ ಆತ ಮನೆ ಬಿಡಬೇಕಾಗಿತ್ತು. ಸಂಜೆ ಬರುವಾಗ ಕೂಡ ಕನಿಷ್ಠ ಏಳು ಗಂಟೆ ಆಗುತ್ತಿತ್ತು. ಈ ಸಮಯದಲ್ಲಿ ಪತ್ನಿ ಒಬ್ಬಳೇ ಮನೆಯಲ್ಲಿ ಇರುತ್ತಿದ್ದಳು.
ಅದೊಂದು ದಿನ ಪತ್ನಿ ತನ್ನ ಅಡುಗೆ ಮನೆಯಿಂದ ಹೊರಕ್ಕೆ ಇಣುಕಿದಾಗ ಎದುರಿಗೆ ಮನೆಯ ಟೆರೇಸ್ ಕಂಡಿತ್ತು. ಅಲ್ಲಿ ಮಹಿಳೆಯೊಬ್ಬಳು ಒಗೆದ ಬಟ್ಟೆಗಳನ್ನು ಒಣ ಹಾಕುತ್ತಿದ್ದಳು. ಪತ್ನಿ ಸೂಕ್ಷ್ಮವಾಗಿ ಗಮನಿಸಿದಾಗ ಆ ಬಟ್ಟೆಗಳು ಒಗೆದ ಬಟ್ಟೆಗಳ ಥರ ಕಾಣಿಸುತ್ತಿರಲಿಲ್ಲ. ಒಂದಷ್ಟು ಕೆಂಪಾಗಿ, ಸರಿಯಾಗಿ ಮಣ್ಣು ಕೊಳೆ ಹೋಗದೆ ಗಲೀಜು ಬಟ್ಟೆಯ ಥರ ಅದು ಕಾಣಿಸುತ್ತಿತ್ತು. ಮತ್ತೊಂದಷ್ಟು ಕಾಲ ಸರಿಯಿತು. ಪ್ರತಿ ಬಾರಿ ಎದುರು ಮನೆಯ ಮಹಿಳೆ ಬಟ್ಟೆ ಒಗೆದು ಒಣಗಲು ಹಾಕುವಾಗ, ಒಗೆದ ಬಟ್ಟೆಯಲ್ಲಿ ಕೊಳೆ ಎದ್ದು ಕಾಣಿಸುತ್ತಿತ್ತು. ಇದ್ಯಾಕೆ ಹೀಗೆ? ಯಾಕೆ ಈಕೆಗೆ ಬಟ್ಟೆ ಒಗೆಯಲು ಸರಿಯಾಗಿ ಬರಲ್ಲ ಎನ್ನುವ ಪ್ರಶ್ನೆ ಪತ್ನಿಗೆ ಮೂಡುತ್ತಿತ್ತು. ಸಮಯ ಕಳೆದರೂ ಎದುರು ಮನೆ ಹೆಂಗಸಿನ ಬಟ್ಟೆ ಒಗೆಯುವ ವಿಧಾನ ಬದಲಾಗಲಿಲ್ಲ. ಅದೇ ಮಾಮೂಲಿ, ಕೊಳೆಯ, ಬಣ್ಣ ಕಟ್ಟಿದ ಬಟ್ಟೆಗಳು!!
ಒಂದು ದಿನ ಪತ್ನಿಯು ತನ್ನ ಪತಿ ಮನೆಗೆ ಬರೋದನ್ನೇ ಕಾಯುತ್ತಾ ಕೂತಿದ್ದು ಈ ವಿಷಯವನ್ನು ಹೇಳುತ್ತಾಳೆ. ಎದುರು ಮನೆಯ ಹೆಂಗಸಿಗೆ ಸರಿಯಾಗಿ ಬಟ್ಟೆ ಒಗೆಯಲು ಬರುವುದಿಲ್ಲ ಅಂದು ಗಂಡನಲ್ಲಿ ದೂರುತ್ತಾಳೆ ಪತ್ನಿ. ಆದರೆ ಪತಿ ಏನನ್ನೂ ಉತ್ತರಿಸುವುದಿಲ್ಲ. ತನ್ನ ಪಾಡಿಗೆ ತಾನು ಊಟ ಮಾಡಿ ಮಲಗುತ್ತಾನೆ. ಆದರೆ ಪತ್ನಿಗೆ ದಿನಂಪ್ರತಿ ಎದುರು ಮನೆಯ ಕೊಳೆ ಬಟ್ಟೆಗಳು ತೊಂದರೆ ಕೊಡುತ್ತಲೆ ಇರುತ್ತವೆ. ಆಗಾಗ ಗಂಡನಲ್ಲಿ ಆ ಹೆಂಗಸಿಗೆ ಬಟ್ಟೆ ಒಗೆಯಲು ಬರಲ್ಲ, ಸರಿಯಾಗಿ ಸೋಪು ಹಾಕದೆ ಬಟ್ಟೆ ಒಗೆಯುತ್ತಾಳೆಯೋ ಏನೋ, ಯಾರು ಅವಳಿಗೆ ಹೇಳೋದು? ಎಂದು ದೂರುತ್ತಲೇ ಇರುತ್ತಾಳೆ. ಗಂಡ ಕೇಳಿಯೂ ಕೇಳದಂತೆ ಸುಮ್ಮನಿರುತ್ತಾನೆ.
ಅದೊಂದು ಭಾನುವಾರ. ಪತಿ ಆಫೀಸಿಗೆ ಹೋಗಲು ಇಲ್ಲದ ಕಾರಣ ಪತ್ನಿ ಒಂದಷ್ಟು ಹೊತ್ತು ಹೆಚ್ಚೇ ಮಲಗಿದ್ದಳು. ಎದ್ದು ಇನ್ನೇನು ಫ್ರೆಶ್ ಆಗಿ ಟೀ ಮಾಡೋಣ ಎಂದು ಕಿಚನ್ ಗೆ ಹೋದರೆ ಆಕೆಗೆ ಆಶ್ಚರ್ಯ ಕಾದಿತ್ತು. ಎಂದಿನಂತೆ ಎದುರು ಮನೆ ಮಹಡಿಯಲ್ಲಿ ಮಹಿಳೆ ಬಟ್ಟೆ ಒಣ ಹಾಕುತ್ತಿದ್ದಳು. ಆದ್ರೆ ಇವತ್ತು ಆಕೆ ಒಗೆದಿದ್ದ ಬಟ್ಟೆಗಳಲ್ಲಿ ಹೊಳಪು, ಹೊಸ ಶೈನಿಂಗ್ ಎದ್ದು ಕಾಣುತ್ತಿತ್ತು. ಪತ್ನಿಗೆ ಸಖತ್ ಆಶ್ಚರ್ಯ! ಕೂಡಲೇ ಕೂಗಿ ಹಾಕಿ ಗಂಡನನ್ನು ಕರೆಯುತ್ತಾಳೆ. ಅದೇನೋ ಕೆಲಸ ಮಾಡುತ್ತಿದ್ದ ಗಂಡ ಓಡೋಡಿ ಬರುತ್ತಾನೆ.
“ನೋಡಿ, ನೋಡಿ.. ಆ ಮಹಿಳೆಗೆ ಈಗ ಒಳ್ಳೆಯ ರೀತಿಯಲ್ಲಿ ಬಟ್ಟೆ ಒಗೆಯಲು ಯಾರೋ ಹೇಳಿ ಕೊಟ್ಟಿರಬೇಕು. ಇವತ್ತು ಎಲ್ಲಾ ಬಟ್ಟೆಗಳೂ ಶುಭ್ರವಾಗಿವೆ” ಪತ್ನಿ ಎಕ್ಸೈಟೆಡ್ ಆಗಿ ಗಂಡನ ತೋಳು ಜಗ್ಗಿ ಹೇಳುತ್ತಾಳೆ.
ಆಗ ಗಂಡ ಮೆಲ್ಲನೆ ಹೆಂಡತಿಯ ಭುಜ ಹಿಡಿದು ಹೇಳುತ್ತಾನೆ: “ನಾನಿವತ್ತು ಬೆಳಿಗ್ಗೆ ಬೇಗ ಎದ್ದಿದ್ದೆ. ಎದ್ದವನೇ ನಮ್ಮ ಅಡುಗೆ ಮನೆಯ ಕಿಟಕಿಯ ಗ್ಲಾಸ್’ನ್ನು ಕ್ಲೀನ್ ಮಾಡಿದೆ”
ಬಹುಶಃ ಈ ಕಥೆಯ ನೀತಿ ನಿಮಗೆ ಈಗಾಗಲೇ ಸ್ಪಷ್ಟ ಆಗಿರಬಹುದು. ಬೇರೆಯವರ ತಪ್ಪನ್ನು ಹುಡುಕುವ ಮೊದಲು ನಿಮ್ಮ ತಪ್ಪು ನೋಡಿಕೊಳ್ಳಿ. ಜತೆಗೆ ನೋಡುವ ದೃಷ್ಟಿ ಸರಿ ಇರಲಿ. ಕಣ್ಣಿಗೆ ಕಂಡದ್ದು ಸತ್ಯವೇ ಆಗಿರಬೇಕಿಲ್ಲ – ಈ ರೀತಿ ಹಲವು ಸತ್ಯಗಳನ್ನು ಹೇಳುವ ಸಿಂಪಲ್. ಮ್ಯಾನೇಜ್ ಮೆಂಟ್ ಸ್ಟೋರಿ ಇದು. ನಿಮಗೆ ಇದು ಇಷ್ಟ ಆಯ್ತು ಅಂದುಕೊಂಡು ಇವತ್ತಿನ ಸಿಂಗಲ್ ಡೋಸ್ ಇಲ್ಲಿಗೆ ಮುಕ್ತಾಯ.
Comments are closed.