of your HTML document.

ಪತಿವ್ರತೆ ದ್ರೌಪದಿ ಕೂಡಾ ಪತಿಗೆ ವಂಚಿಸಿದ್ದಳು- ಅದೊಂದು ವಿಶೇಷ ಕಾರಣಕ್ಕೆ ಆಕೆ ಸ್ವರ್ಗ ಸೇರಲಿಲ್ಲ!

ದ್ರೌಪದಿ ಮಹಾಭಾರತದ ಹೀರೋಯಿನ್. ಮಹಾಭಾರತವು ಮಣ್ಣಿಗಾಗಿ ನಡೆಯಿತು, ರಾಮಾಯಣವು ಹೆಣ್ಣಿಗಾಗಿ ನಡೆದಿತ್ತು ಅನ್ನುವ ಮಾತಿದೆ. ಆದರೆ, ಮಹಾಭಾರತದಲ್ಲಿ ಕೂಡಾ ಸ್ತ್ರೀಯ ಪಾತ್ರ ಮಹತ್ತರವಾದದ್ದು. ಅದು ಕಥಾ ನಾಯಕಿ ದ್ರೌಪದಿಯ ಪಾತ್ರ! ಕೆಲವು ಕಥೆಗಳಲ್ಲಿ ಮಹಾಭಾರತದಂತಹ ಘೋರ ಯುದ್ಧ ನಡೆಯುವುದಕ್ಕೆ ದ್ರೌಪದಿಯೇ ಕಾರಣ ಎಂದು ಹೇಳಲಾಗಿದೆ.

ಮಹಾಭಾರತದಲ್ಲಿನ ಎಷ್ಟೇ ಕಥೆಗಳನ್ನು ಓದಿದರೂ ಪದೇ ಪದೇ ಓದಬೇಕೆನಿಸುತ್ತದೆ. ಅಂತಹಾ ಒಂದು ಘಟನೆ ದ್ರೌಪದಿ ಮರಣ ಹೇಗಾಯಿತು ಎಂದು ನಿರೂಪಿಸುವ ಈ ಕತೆ. ಮಹಾಭಾರತದ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬಳಾದ ದ್ರೌಪದಿ ಮರಣ ಹೊಂದಿದ್ದು ಹೇಗೆ? ಮಹಾಭಾರತ ಯುದ್ಧದ ಕೊನೆಯಲ್ಲಿ ದ್ರೌಪದಿಗೆ ಏನಾಯಿತು? ದ್ರೌಪದಿ ತನ್ನ ಹಿಂದಿನ ಜನ್ಮದಲ್ಲಿ ಏನಾಗಿದ್ದಳು? ಈ ಎಲ್ಲಾ ಪ್ರಶ್ನೆಗಳೂ ಅವುಗಳಿಗೆ ಸಿಗುವ ಉತ್ತರಗಳೂ ಕುತೂಹಲಕಾರಿಯಾಗಿವೆ.

*ಹಿಂದಿನ ಜನ್ಮದಲ್ಲಿ ಋಷಿ ಪತ್ನಿ*

ದ್ರೌಪದಿ ತನ್ನ ಹಿಂದಿನ ಜನ್ಮದಲ್ಲಿ ಮುದ್ಗಲ ಋಷಿಯ ಪತ್ನಿಯಾಗಿದ್ದಳು ಎಂದು ಹೇಳಲಾಗುತ್ತದೆ. ಈ ಜನ್ಮದಲ್ಲಿ ದ್ರೌಪದಿಯನ್ನು ಮುದ್ಗಲಿ ಎಂದು ಕರೆಯಲಾಗುತ್ತಿತ್ತು. ಆದರೆ, ದ್ರೌಪದಿಯ ಪತಿಯಾದ ಮುದ್ಗಲನು ತನ್ನ ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಿದ್ದ. ಅಂತಹ ಸಂದರ್ಭದಲ್ಲಿ ಮುದ್ಗಲಿ ಅಂದರೆ ದ್ರೌಪದಿ ಶಿವನನ್ನು ಒಲಿಸಿಕೊಳ್ಳಲು ತೀವ್ರವಾದ ತಪಸ್ಸನ್ನು ಮಾಡಿದಳು. ಶಿವನು ಆಕೆಯ ತಪಸ್ಸಿಗೆ ಸಂತುಷ್ಟನಾಗಿ ಮುದ್ಗಲಿಯ ಮುಂದೆ ಬಂದು ನಿಲ್ಲುತ್ತಾನೆ. ಆಗ ಶಿವನು ಮದ್ಗಲಿಯನ್ನು ಕುರಿತು, ನೀನು ನನ್ನನ್ನು ಕುರಿತು ತಪಸ್ಸನ್ನು ಮಾಡಲು ಕಾರಣವೇನು? ನಿನಗೆ ಏನು ವರಬೇಕು ಎಂದು ಕೇಳುತ್ತಾನೆ. ಆಗ ದ್ರೌಪದಿ ತನಗೆ ಸಕಲ ಸದ್ಗುಣಗಳುಳ್ಳ ಪತಿ ಬೇಕು ಎಂದು ಶಿವನಿಗೆ ಐದು ಬಾರಿ ಹೇಳಿದಳು. ಆಗಲೇ ಮುಂದಿನ ಜನ್ಮದಲ್ಲಿ ಐವರು ಗಂಡಂದಿರನ್ನು ಅಂದರೆ ಪಂಚ ಪಾಂಡವರನ್ನು ಪತಿಯಾಗಿ ಪಡೆದಳು.

*ದ್ರೌಪದಿ ಮರಣ ಹೊಂದಿದ್ದು ಹೇಗೆ?*

ಮಹಾಭಾರತ ಯುದ್ಧ ಮುಗಿದ ನಂತರ ಪಾಂಡವರು ಮತ್ತು ದ್ರೌಪದಿ ಒಬ್ಬರನ್ನೊಬ್ಬರು ಬಿಟ್ಟಿರಲಿಲ್ಲ. ಒಬ್ಬಳ ಪತ್ನಿ ಮತ್ತು ಐದು ಜನ ಪತಿಯರ ಜೊತೆ ಸಂಸಾರ ಚೆನ್ನಾಗಿ ನಡೆಯುತ್ತಿತ್ತು. ಇನ್ನೇನು ತಮ್ಮ ಕಾಲ ಸಮೀಪಿಸಿದ ಅನುಭವ ಪಾಂಡವರಿಗೆ ಆಗುತ್ತೆ. ತಮ್ಮ ಕೊನೆಯ ಪ್ರಯಾಣದ ಮೊದಲು, ಯುಧಿಷ್ಠಿರನು ಪರೀಕ್ಷಿತನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡಿದ. ಪಂಚಪಾಂಡವರು, ದ್ರೌಪದಿ ಮತ್ತು ಅವರ ನಾಯಿಯೊಂದಿಗೆ ತಮ್ಮ ಜೀವನದ ಕೊನೆಯ ಪ್ರಯಾಣಕ್ಕೆ ಹೊರಟರು. ಇಂದ್ರನ ರಥವು ಪಾಂಡವರು ಮತ್ತು ದ್ರೌಪದಿಯನ್ನು ಕರೆದೊಯ್ಯಲು ಬಂದಿತು. ಆದರೆ ಅವರ ಜೊತೆ ಒಂದು ನಾಯಿ ಕೂಡ ಇದ್ದು, ಅದನ್ನು ಇಂದ್ರನ ರಥದಲ್ಲಿ ಕರೆದೊಯ್ಯಲು ಅದ್ಯಾಕೋ ಅವರಿಗೆ ಅಂಜಿಕೆಯಾಗಿತ್ತು. ಹಾಗಾಗಿ ಅವರು ಆ ರಥವನ್ನು ಖಾಲಿ ಕಳುಹಿಸಿ ಕಾಲ್ನಡಿಗೆಯಲ್ಲೇ ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಾರೆ.

*ಸ್ವರ್ಗ ಪ್ರಯಾಣದ ಮಧ್ಯೆ ಕುಸಿದು ಸತ್ತ ದ್ರೌಪದಿ*

ಆರಂಭದಲ್ಲಿ ದ್ರೌಪದಿ ಸಹಿತ ಪಂಚಪಾಂಡವರು ದಕ್ಷಿಣದ ಕಡಲ ತೀರಗಳನ್ನು ತಲುಪಿದರು. ನಂತರ ತೀರ್ಥಯಾತ್ರೆ ಗೈಯುತ್ತಾ ಋಷಿಕೇಶ ಮತ್ತು ಬಳಿಕ ಹಿಮಾಲಯದ ಕಡೆಗೆ ಕಾಲ್ನಡಿಗೆಯಲ್ಲೇ ಸಂಚಾರವನ್ನು ಪ್ರಾರಂಭಿಸಿದರು. ಅವರು ಹಿಮಾಲಯದ ಮೂಲಕ ಸ್ವರ್ಗದ ಕಡೆಗೆ ತೆರಳುವ ಯೋಚನೆಯಲ್ಲಿದ್ದರು. ಆದರೆ ದಾರಿ ಮಧ್ಯೆ ದ್ರೌಪದಿ ಹಠಾತ್ತನೆ ಬಿದ್ದು ಮರಣ ಹೊಂದುತ್ತಾಳೆ. ಅದಕ್ಕೆ ಮಹಾಭಾರತ ಕೊಡುವ ಕಾರಣ ಕೂಡ ಆಸಕ್ತಿಕರವಾಗಿದೆ. ಕಾರಣ ಕೇಳಿದಾಗ, ಯುಧಿಷ್ಠಿರನು ಸ್ವರ್ಗದ ದಾರಿಯಲ್ಲಿ ದ್ರೌಪದಿ ಭೂಮಿಯಲ್ಲಿಯೇ ಸಾವನ್ನಪ್ಪಲು ಕಾರಣ ಹೇಳುತ್ತಾನೆ.

ದ್ರೌಪದಿಯು ನಮ್ಮ ಐದು ಮಂದಿ ಪಾಂಡವರ ಪತ್ನಿಯಾಗಿದ್ದರೂ, ಅವಳು ತನ್ನ ಸತಿ ಧರ್ಮವನ್ನು ಶ್ರದ್ಧೆಯಿಂದ ಪೂರೈಸಲಿಲ್ಲ. ನಮ್ಮ ಐದೂ ಜನರಲ್ಲಿ ಅವಳ ಹೃದಯದಲ್ಲಿ ಯಾವಾಗಲೂ ಅರ್ಜುನನ ಮೇಲೆ ಅಪಾರವಾದ ಪ್ರೀತಿ ಇತ್ತು. ಹಾಗಾಗಿ, ದ್ರೌಪದಿಗೆ ಸ್ವರ್ಗವನ್ನು ಸೇರುವ ಅರ್ಹತೆ ಇರಲಿಲ್ಲ. ಅವಳು ನರಕವನ್ನು ಸೇರ ಬೇಕಾಗಿತ್ತು. ಆದ್ದರಿಂದ ಅವಳು ಮಾರ್ಗ ಮಧ್ಯದಲ್ಲೇ ತನ್ನ ಪ್ರಾಣವನ್ನು ಕಳೆದುಕೊಂಡಳು ಎಂದು ಯುಧಿಷ್ಠಿರನು ಹೇಳುತ್ತಾನೆ. ದ್ರೌಪದಿ ಪಾಂಡವರ ಪತ್ನಿಯಾಗಿ ಅವರಿಗೆ ಮಾಡಿದ ಮೋಸದಿಂದ, ಪಂಚ ಪಾಂಡವರ ಮಧ್ಯೆ ಭೇದಭಾವದಿಂದ ನೋಡಿದ ಕಾರಣದಿಂದ, ಒಬ್ಬನನ್ನೇ ಅತಿಯಾಗಿ ಪ್ರೀತಿಸಿದ ಪರಿಣಾಮವಾಗಿ ದ್ರೌಪದಿ ಸ್ವರ್ಗವನ್ನು ತಲುಪದೇ ನರಕಕ್ಕೆ ಹೋಗುತ್ತಾಳೆ. ಉಳಿದ ಪಂಚಪಾಂಡವರು ಸ್ವರ್ಗದ ಕಡೆ ನಡೆಯುತ್ತಾರೆ. ಅವರು ಸ್ವರ್ಗ ತಲುಪಿದರಾ, ದಾರಿ ಮಧ್ಯೆ ಮತ್ತೆ ಕೆಲವು ಪಾಂಡವರು ತೀರಿಕೊಂಡರಾ? ಸ್ವರ್ಗದ ಕಡೆ ಹೊರಟಾಗ ಜೊತೆಯಲ್ಲಿದ್ದ ನಾಯಿ ಕೂಡ ಸ್ವರ್ಗವನ್ನು ಸೇರಿತಾ ? ಈ ಬಗ್ಗೆ ಮುಂದಿನ ವಾರ ಆಸಕ್ತಿಕರ ಕಥೆ.

Comments are closed.