Hampi: ಹಂಪಿಯಲ್ಲಿ ಆತ್ಮಹತ್ಯೆ ಪ್ರಯತ್ನ: ಒಬ್ಬರು ಮೃತ, ಮೂವರು ಗಂಭೀರ

Hampi: ಸಾಲದ ಒತ್ತಡದಿಂದ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಹಂಪಿಯ ಸ್ನಾನಘಟ್ಟದ ಬಳಿ ನಡೆದಿದೆ. ಈ ಘಟನೆಯಲ್ಲಿ ಕುಟುಂಬದ ಮುಖ್ಯಸ್ಥ ಚಂದ್ರಯ್ಯ (42) ಮೃತಪಟ್ಟಿದ್ದಾರೆ. ಅವರ ಪತ್ನಿ ಸೌಮ್ಯ (35) ಮತ್ತು ಇಬ್ಬರು ಮಕ್ಕಳಾದ ಭವಾನಿ (12) ಮತ್ತು ಶಿವಕುಮಾರ್ (10) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ನಿವಾಸಿಯಾಗಿದ್ದ ಚಂದ್ರಯ್ಯ, 6 ವರ್ಷಗಳಿಂದ SBI ಸೇವಾ ಕೇಂದ್ರವನ್ನು ನಡೆಸುತ್ತಿದ್ದರು. ಅವರು 10 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಸಾಲದ ಬಾಕಿಯನ್ನು ಹೊಂದಿದ್ದರು. ಸಾಲಗಾರರ ಕಿರುಕುಳ ಮತ್ತು ಆರ್ಥಿಕ ಒತ್ತಡದಿಂದಾಗಿ ಅವರು ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದರು. ಇದರ ಪರಿಣಾಮವಾಗಿ, ಮಾರ್ಚ್ 18 ರಂದು ಅವರು ತಮ್ಮ ಕುಟುಂಬದೊಂದಿಗೆ ಹಂಪಿಗೆ ಪ್ರವಾಸಕ್ಕೆ ಬಂದಿದ್ದರು.
ಮಾರ್ಚ್ 19 ರಂದು, ಹಂಪಿಯ (hampi )ಸ್ನಾನಘಟ್ಟದ ಬಳಿಯ ಸರಸ್ವತಿ ದೇವಸ್ಥಾನದ ಪ್ರದೇಶದಲ್ಲಿ ಚಂದ್ರಯ್ಯ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಘಟನೆಯ ನಂತರ, ಅವರನ್ನು ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಡುವೆ ಚಂದ್ರಯ್ಯ ಮೃತಪಟ್ಟರೆ, ಅವರ ಕುಟುಂಬದ ಇತರ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.