Naxalite: ಶರಣಾಗತಿ ಆದ್ರೂ ನಕ್ಸಲೆಟ್ಸ್ ಶಸ್ತ್ರಾಸ್ತ್ರಗಳನ್ನು ಮುಚ್ಚಿಟ್ಟಿದ್ದೇಕೆ ಗೊತ್ತಾ? ಬಯಲಾಯಿತು ಸತ್ಯ

Naxalite: ಇತ್ತೀಚೆಗೆ ಆರು ಜನ ನಕ್ಸಲೆಟ್ ಗಳು ತಮ್ಮೆಲ್ಲ ಕೃತ್ಯಗಳನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಶರಣಾಗತಿಯಾಗಿ ಬಂಧನಕೊಳಗಾದರು. ಆದರೆ ಅವರು ಶಸ್ತ್ರಾಸ್ತ್ರ ರಹಿತರಾಗಿ ಬಂದು ಸೆರೆಂಡರ್ ಆದರು. ಈ ಬೆನ್ನಲ್ಲೇ ಅವರು ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ಏನು ಮಾಡಿದರು ಎಂಬ ಪ್ರಶ್ನೆ ದೊಡ್ಡದಾಗಿ ಕಾಡುತ್ತಿತ್ತು. ಇದೀಗ ಹಲವು ಅನುಮಾನಗಳಿಗೆ ಉತ್ತರ ಸಿಕ್ಕಿದೆ

 

ಹೌದು, ಹೋರಾಟದ ಹಾದಿ ತೊರೆದು ಆರು ಮಂದಿ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾದರೂ ತಮ್ಮ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿರಲಿಲ್ಲ. ಈ ನಡೆ ಹಲವರಲ್ಲಿ ಅನುಮಾನ ಮೂಡಿಸಿತ್ತು. ಆದರೆ ಈಗ ಇದಕ್ಕೆ ಉತ್ತರ ಸಿಕ್ಕಿದ್ದು ಭವಿಷ್ಯದಲ್ಲಿ ಕಾನೂನು ಸಂಕಷ್ಟಕ್ಕೆ ಸಿಲುಕಬಹುದೆಂಬ ಆತಂಕದಿಂದ ಶಸ್ತ್ರಾಸ್ತ್ರಗಳನ್ನು ಅವರು ಕಾಡಿನಲ್ಲೇ ಅಡಗಿಸಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

ಅಂದಹಾಗೆ ಶಸ್ತ್ರಾಸ್ತ್ರಗಳ ಕುರಿತು ಶರಣಾಗತ ನಕ್ಸಲರು ಇದೀಗ ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್ನೆರೆಡು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ದಟ್ಟ ಕಾನನದಲ್ಲಿ ಹುದುಗಿಸಿಟ್ಟಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯಲಿದೆ. ಈ ನಕ್ಸಲರ ಬಳಿ ಪಿಸ್ತೂಲ್ ಮಾತ್ರವಲ್ಲದೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಆದರೆ ಅವು ಯಾವ ಮಾದರಿಯವು ಎಂಬುದು ಮಹಜರ್‌ ನಂತರವೇ ಖಚಿತವಾಗಲಿದೆ.

ಇನ್ನು ಎರಡು ತಿಂಗಳ ಹಿಂದೆ ಉಡುಪಿ ಜಿಲ್ಲೆ ಹೆಬ್ರಿಯ ಕಬ್ಬಿನಾಲೆ ಪೀತಬೈಲು ಸಮೀಪ ನಕ್ಸಲ್ ನಾಯಕ ವಿಕ್ರಂಗೌಡನನ್ನು ನಕ್ಸಲ್ ನಿಗ್ರಹ ಪಡೆ ಎನ್‌ಕೌಂಟರ್ ಮಾಡಿತ್ತು. ಆಗ ಆತನ ಬಳಿ ಮಷಿನ್ ಗನ್‌ ಪತ್ತೆಯಾಗಿತ್ತು. ಹೀಗಾಗಿ ಶರಣಾಗತಿಗೆ ಒಪ್ಪಿದ್ದ ಮೃತ ವಿಕ್ರಂ ಗೌಡನ ಸಂಗಡಿಗರಾದ ಚಿಕ್ಕಮಗಳೂರು ಜಿಲ್ಲೆಯ ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಕುತ್ಲೂರು, ರಾಯಚೂರು ಜಿಲ್ಲೆ ಮಾರೆಪ್ಪ ಅರೋಲಿ, ಕೇರಳ ರಾಜ್ಯದ ಜಿಶಾ ಹಾಗೂ ತಮಿಳುನಾಡು ರಾಜ್ಯದ ವೆಲ್ಲೂರಿನ ಕೆ.ವಸಂತ್‌ ಬಳಿ ಸಹ ಆಧುನಿಕ ಶಸ್ತ್ರಾಸ್ತ್ರಗಳಿರಬಹುದು ಎಂಬ ಮಾಹಿತಿ ಇದೆ.

Comments are closed, but trackbacks and pingbacks are open.