Vishal : ನಡುಗುತ್ತಾ, ತೊದಲುತ್ತಾ ಮಾತನಾಡಿದ ನಟ ವಿಶಾಲ್ ಗೆ ಏನಾಗಿದೆ? ಕೊನೆಗೂ ವೈದ್ಯರಿಂದ ಹೊರ ಬಿತ್ತು ನಿಜ ವಿಚಾರ
Vishal: ಕಾಲಿವುಡ್ ನಟ ವಿಶಾಲ್(Vishal) ಅವರು ಇತ್ತೀಚೆಗೆ ಇವೆಂಟ್ (Event) ಒಂದರಲ್ಲಿ ಕಾಣಿಸಿಕೊಂಡಾಗ ಅವರ ಕೈ ಸಂಪೂರ್ಣವಾಗಿ ನಡುಗುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿದ ಅವರ ಅಭಿಮಾನಿಗಳು ಆತಂಕಗೊಂಡಿದ್ದರು. ಇದೀಗ ಈ ಕುರಿತು ವೈದ್ಯರು ಸ್ಪಷ್ಟೀಕರಣ ನೀಡಿದ್ದಾರೆ.
ತಮಿಳಿನಲ್ಲಿ ಮಾಸ್ ಸಿನಿಮಾಗಳನ್ನು ನೀಡಿದ ವಿಶಾಲ್ ಇದೀಗ ತಮ್ಮದೇ ಅಭಿನಯದ ‘ಮದ ಗಜ ರಾಜ’ ಸಿನಿಮಾ ರಿಲೀಸ್ ಸಂಭ್ರಮದಲ್ಲಿದ್ದಾರೆ. ಇದೇ ಸಿನಿಮಾದ ಪ್ರಮೋಷನ್ ಕಾರ್ಯಕ್ರಮಕ್ಕೆ ಅವರು ಬಂದಿದ್ದರು. ವೇದಿಕೆಯಲ್ಲಿ ಅವರನ್ನು ಕರೆದು ಮಾತನಾಡಲು ಮೈಕ್ ನೀಡಿದಾಗ ವಿಶಾಲ್ ಅಕ್ಷರಶಃ ನಡುಗುತ್ತಿದ್ದರು. ಕೊನೆಗೆ ಅವರು ಎದ್ದು ನಿಲ್ಲಲೂ ಆಗುತ್ತಿಲ್ಲ ಎಂದಾಗ ಸಹಾಯಕರು ಬಂದು ಅವರನ್ನು ಸೋಫಾ ಮೇಲೆ ಕೂರಿಸಿದರು. ಬಳಿಕ ಕುಳಿತುಕೊಂಡೇ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವೈರಲ್ ಆದ ವಿಡಿಯೋದಲ್ಲಿ ಸಿನಿಮಾದ ಬಗ್ಗೆ ಮಾತನಾಡುವಾಗ ಅವರ ಕೈಗಳು ನಡಗುತ್ತಿರುವುದು ಹಾಗೂ ಮಾತನಾಡಲು ತೊದಲಿದ್ದಾರೆ. ಅಲ್ಲದೆ ತೀವ್ರವಾಗಿ ಆಯಾಸ ಹಾಗೂ ನಿಶಕ್ತರಾಗಿರುವಂತೆ ವಿಡಿಯೋದಲ್ಲಿ ಇದೆ. ಅವರು ಸ್ಟೇಜ್ ಮೇಲೆ ಮಾತನಾಡುವುದಕ್ಕೆ ಕಷ್ಟಪಡುತ್ತಿರುವುದನ್ನು ನೋಡಿರುವ ನಿರೂಪಕರು ಸ್ಟೇಜ್ ಮೇಲೆ ಸಂವಾದವನ್ನು ಮಾಡುವಂತೆ ಕಾರ್ಯಕ್ರಮವನ್ನು ತುಸು ಬದಲಾಯಿಸಿದ್ದರು. ಅವರು ಕುಳಿತುಕೊಳ್ಳುವಾಗಲೂ ತಮಿಳಿನ ಇನ್ನೊಬ್ಬ ನಟರು ಸಹಾಯ ಮಾಡಿರುವುದು ವಿಡಿಯೋದಲ್ಲಿ ಇದೆ. ಇದನ್ನು ನೋಡಿ ಅಭಿಮಾನಿಗಳು ವಿಶಾಲ್ ಗೆ ನಿಜವಾಗಿಯೂ ಏನಾಗಿದೆ? ಯಾಕೆ ಅವರು ಹೀಗೆ ನಡುಗುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು.
ಸದ್ಯ ಚೆನ್ನೈನ ಅಪೋಲೋ ಆಸ್ಪತ್ರೆ ವಿಶಾಲ್ ಆರೋಗ್ಯದ ಬಗ್ಗೆ ವರದಿ ನೀಡಿದೆ. ಅದರ ಪ್ರಕಾರ ನಟ ವಿಶಾಲ್ಗೆ ವೈರಲ್ ಜ್ವರ ಇರುವುದು ದೃಢಪಟ್ಟಿದೆ. ಸೂಕ್ತ ಚಿಕಿತ್ಸೆ ಹಾಗೂ ಸಂಪೂರ್ಣ ವಿಶ್ರಾಂತಿಯನ್ನು ಪಡೆಯಲು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆಂದು ಅಪೋಲೋ ಆಸ್ಪತ್ರೆ ವರದಿಯಲ್ಲಿ ತಿಳಿಸಲಾಗಿದೆ. ವಿಶಾಲ್ ಅವರಿಗೆ ಗಂಭೀರವಾದ ಸಮಸ್ಯೆ ಏನಿಲ್ಲ. ಜ್ವರದಿಂದ ಮಾತ್ರ ಬಳಲುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿಯೂ ಬಳಲಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ತಿಳಿದ ಅಭಿಮಾನಿಗಳು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
Comments are closed, but trackbacks and pingbacks are open.