Dharmasthala : ಭಕ್ತರೇ ಗಮನಿಸಿ – ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ತಿರುಪತಿ ಮಾದರಿ ಕ್ಯೂ ಸಿಸ್ಟಮ್ ಜಾರಿ !!
Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳ(Dharmasthala) ನಾಡಿನ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದು. ದಿನನಿತ್ಯವೂ ಸಾವಿರಾರು ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಹಗಲು- ರಾತ್ರಿ ಎನ್ನದೆ, ಮಳೆ-ಬಿಸಿಲೆನ್ನದೆ ಸರತಿ ಸಾಲಿನಲ್ಲಿ ನಿಂತು ಸ್ವಾಮಿಯನ್ನು ಕಂಡು ಸಂತೋಷ ಪಡುತ್ತಾರೆ. ಹೀಗಾಗಿ ಈ ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದ ಆಡಳಿತ ಮಂಡಳಿ ದೇಶದ ಪ್ರಮುಖ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ತಿರುಪತಿ ದೇವಸ್ಥಾನದ ಮಾದರಿಯಲ್ಲೇ ಧರ್ಮಸ್ಥಳದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಿದೆ. ಇದಕ್ಕಾಗಿ ನಿರ್ಮಿಸಿರುವ ಕಟ್ಟಡ ನಾಳೆ (ಜ. 7) ಉದ್ಘಾಟನೆಗೊಳ್ಳಲಿದೆ. ಇಲ್ಲಿ ಭಕ್ತರ ಕ್ಯೂ ವ್ಯವಸ್ಥೆ ತಿರುಪತಿ ದೇವಸ್ಥಾನದಲ್ಲಿರುವಂತೆ ಇರಲಿದೆ.
ಹೌದು, ಸರತಿಯಲ್ಲಿ ನಿಲ್ಲುವ ಭಕ್ತರ ಅನುಕೂಲಕ್ಕಾಗಿ ತಿರುಪತಿ ಮಾದರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಸಾನ್ನಿಧ್ಯ ಎಂಬ ಸಂಕೀರ್ಣವನ್ನು ಹೊಸದಾಗಿ ನಿರ್ಮಿಸಲಾಗಿದ್ದು ಇದರ ಉದ್ಘಾಟನೆಯು ಇದೇ ಜನವರಿ 7ರಂದು ಮಧ್ಯಾಹ್ನ 2 ಗಂಟೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಉದ್ಘಾಟಿಸಲಿದ್ದಾರೆ.
ಅಂದಹಾಗೆ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಭಕ್ತರು ವಿಶ್ರಾಂತಿ ಕೊಠಡಿ (ಭವನಗಳಲ್ಲಿ) ಗಂಟೆ ಗಟ್ಟಲೆ ಕಾದು ದೇವರ ದರ್ಶನ ಪಡೆಯುತ್ತಾರೆ. ಇದಕ್ಕೆಂದೆ ಪ್ರತ್ಯೇಕ ಕೊಠಡಿಗಳು, ಮೂಲ ಸೌಕರ್ಯ, ಊಟ, ತಿಂಡಿ ಹೀಗೆ ಎಲ್ಲ ವ್ಯವಸ್ಥೆ ಅಲ್ಲಿದೆ. ಕರ್ನಾಟಕದಲ್ಲಿ ಇಂತಹ ವ್ಯವಸ್ಥೆ ಇರಲಿಲ್ಲ. ಬದಲಾಗಿ ಸರತಿ ಸಾಲಿನಲ್ಲಿ ನಿಂತು ಜನರು ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಇತ್ತು. ಸರತಿ ಸಾಲಿನಲ್ಲಿ ನಿಲ್ಲುವ ಪದ್ಧತಿಗಿಂತಲೂ ಮತ್ತಷ್ಟು ಅನುಕೂಲಕರ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ತಿರುಪತಿ ಮಾದರಿಯಲ್ಲಿ ಸುಸಜ್ಜಿತ ಮೂಲಸೌಕರ್ಯಗಳನ್ನು ಒಳಗೊಂಡ ವ್ಯವಸ್ಥೆ ಜಾರಿಗೆ ಮಾಡಲಾಗುತ್ತಿದೆ. ಇದಕ್ಕಾಗಿ ನೂತನ ಸಂಕೀರ್ಣವನ್ನು ನಿರ್ಮಿಸಲಾಗಿದೆ.
ಈ ಶ್ರೀ ಸಾನ್ನಿಧ್ಯ ಕಟ್ಟಡದ ವಿಶೇಷತೆ ಏನು?
ಬರೋಬ್ಬರಿ 2.75ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಈ ಸಂಕೀರ್ಣವನ್ನು ನಿರ್ಮಿಸಲಾಗಿದೆ. ದೇವಾಲಯದ ಹಿಂಭಾಗದಲ್ಲಿಯೇ ಈ ಕಟ್ಟಡ ತಲೆಯೆತ್ತಿದೆ. ವೃತ್ತಾಕಾರದಲ್ಲಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ. ಇದು ಎರಡು ಅಂತಸ್ತು ಹೊಂದಿದ್ದು ಆಧುನಿಕ ತಂತ್ರಜ್ಞಾನ ಬಳಸಿ ಭಕ್ತರ ಅನುಕೂಲಕ್ಕೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಲ್ಲಿರುವ 16 ವಿಶಾಲ ಸಭಾಭವನಗಳಲ್ಲಿ ಭಕ್ತರು ವಿಶ್ರಾಂತಿ ಪಡೆಯಬಹುದಾಗಿದೆ.
ಪ್ರತಿ ಸಭಾಭವನದಲ್ಲಿ 800 ಮಂದಿ ವಿಶ್ರಾಂತಿ ಪಡೆದುಕೊಳ್ಳಲು ಅವಕಾಶವಿದೆ. ಮಕ್ಕಳ ಆರೈಕೆ ಕೊಠಡಿ, ಶೌಚಾಲಯ, ಕ್ಯಾಂಟೀನ್ ಸೌಲಭ್ಯವೂ ಇದೆ. ಸೂಚನಾಫಲಕಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳೂ ಇವೆ. ಸಂಕೀರ್ಣದ ಪ್ರವೇಶದ್ವಾರದ ಎದುರು ಧರ್ಮಸ್ಥಳದ ಇತಿಹಾಸ ಮತ್ತು ಪರಂಪರೆಯನ್ನು ಬಿಂಬಿಸುವ ಆಕರ್ಷಕ ಕಲಾಕೃತಿಗಳನ್ನು ಇರಿಸಲಾಗಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
Comments are closed, but trackbacks and pingbacks are open.