C M Siddaramiah : ಸಿಎಂ ಸಿದ್ದರಾಮಯ್ಯನವರ 50 ಅಡಿ ಎತ್ತರದ ಪ್ರತಿಮೆ ನಿರ್ಮಾಣ..!! ಯಾವಾಗ, ಎಲ್ಲಿ, ತಗಲುವ ವೆಚ್ಚ ಎಷ್ಟು?
C M Siddaramiah : ಇತ್ತೀಚೆಗೆ ಮೈಸೂರಿನಲ್ಲಿ (Mysore) ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯರ ಹೆಸರು ಇಡೋ ಬಗ್ಗೆ ನಿರ್ಧರಿಸಲಾಗಿತ್ತು. ಇದು ರಾಜಕೀಯ ಸ್ವರೂಪ ಪಡೆದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಈ ಬೆನ್ನಲ್ಲೇ ಸಿದ್ದರಾಮಯ್ಯರ 50 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಪ್ಲಾನ್ ನಡೆದಿದೆ ಎಂಬ ಬಗ್ಗೆ ವರದಿಯಾಗಿದೆ! ಹಾಗಿದ್ರೆ ಎಲ್ಲಿ ಪ್ರತಿಮೆ ನಿರ್ಮಾಣವಾಗುತ್ತೆ? ಯಾರು ಅದನ್ನ ನಿರ್ಮಿಸುತ್ತಾರೆ? ಎಷ್ಟು ವೆಚ್ಚವಾಗುತ್ತದೆ? ನೋಡೋಣ ಬನ್ನಿ
ಹೌದು, ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 50 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ಸರ್ವೋದಯ ಮುಖಂಡ ಪಂಚಾಕ್ಷರಯ್ಯ ನೀಲಕಂಠಯ್ಯ ಗುಣಾಚಾರಿ ಎಂಬುವವರು ಮಾಹಿತಿ ನೀಡಿದ್ದಾರೆ.
ಅವರು ಸಿದ್ದರಾಮಯ್ಯ ಅವರ ಪ್ರತಿಮೆ ನಿರ್ಮಾಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೊಂಡಾಡಿದ್ದಾರೆ. ಸಮಕಾಲೀನ ಸಮಾಜ ಗಾಂಧಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ. ಸಿದ್ದರಾಮಯ್ಯ ಮಹಾತ್ಮ ಗಾಂಧೀಜಿ ಕನಸಿನ ಭಾರತವನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ, ಸರ್ವೋದಯ ಸಮಾಜ ರಚನೆಯ ಹರಿಕಾರ ಎಂದು ಹೇಳಿದರು.ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರ ಪ್ರತಿಮೆ ನಿಲ್ಲಿಸಲು ಇದು ಸಕಾಲವಾಗಿದೆ. ಅದಕ್ಕಾಗಿ 1 ಕೋಟಿ ವೆಚ್ಚದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರತಿಮೆ ಪ್ರತಿಷ್ಠಾಪಿಸುವ ಸ್ಥಳ ಇನ್ನೂ ಅಂತಿಮಗೊಂಡಿಲ್ಲ, ಶೀಘ್ರವೇ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.