Rajyasabha : ರಾಜ್ಯಸಭೆಯಲ್ಲಿ ಅಂಬೇಡ್ಕರ್ ಬಗ್ಗೆ ನಿಜಕ್ಕೂ ಅಮಿತ್ ಶಾ ಹೇಳಿದ್ದೇನು? ಇಲ್ಲಿದೆ ಅಸಲಿ ವಿಡಿಯೋ
Rajyasabha: ಸಂಸತ್‌ನಲ್ಲಿ ಬಿ ಆರ್ ಅಂಬೇಡ್ಕರ್ ಅವರ ವಿಚಾವಾಗಿ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆ ಭಾರೀ ಸಂಚಲನ ಸೃಷ್ಟಿಸುತ್ತಿದೆ. ಇದು ಆಡಳಿತರೂಢ ಎನ್ಡಿಎ ಸದಸ್ಯರು ಹಾಗೂ ವಿಪಕ್ಷ ಸದಸ್ಯರ ನಡುವೆ ದೊಡ್ಡ ಮೊಟ್ಟದ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ನೂಕಾಟ ತಳ್ಳಾಟದಿಂದ ಇಬ್ಬರು ಸಂಸದರ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ನೋಡುಗರಿಗೆ ಹೊಲಸು ರಾಜಕೀಯದ ನಿಜ ದರ್ಶನ ಮಾಡಿಸುತ್ತಿದ್ದಾರೆ ನಮ್ಮ ನಾಯಕ ಪ್ರಭುಗಳು. ಹಾಗಿದ್ರೆ ರಾಜ್ಯಸಭೆ(Rajyasabha)ಯಲ್ಲಿ ಅಮಿತ್ ಶಾ(Amith Shah) ಅವರು ಹೇಳಿದ್ದೇನು? ಅಂಬೇಡ್ಕರ್ ವಿಚಾರವಾಗಿ ಅವರು ಏನು ಮಾತಾಡಿದ್ರು? ಇಲ್ಲಿದೆ ನೋಡಿ ನಿಜಸಂಗತಿ.
ಅಮಿತ್ ಶಾ ಹೇಳಿದ್ದೇನು?
ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ನಡೆದ ಚರ್ಚೆಯ ವೇಳೆ ರಾಜ್ಯಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿ, ʼʼಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಈಗ ಫ್ಯಾಷನ್ ಆಗಿದೆ. ಇಷ್ಟು ಬಾರಿ ದೇವರ ಹೆಸರನ್ನು ಜಪ ಮಾಡಿದ್ದರೆ 7 ಜನ್ಮದಲ್ಲಿ ನಿಮಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼʼ ಎಂದು ಹೇಳಿದ್ದರು. ಮುಂದುವರಿದು, “ಅವರ ಹೆಸರನ್ನು 100 ಸಲ ಬೇಕಿದ್ದರೂ ಹೇಳಿ. ಆದರೆ ಅವರ ಬಗ್ಗೆ ನಿಮ್ಮ ಭಾವನೆ ಏನು ಎಂದು ನಾನು ಹೇಳಲು ಬಯಸುತ್ತೇನೆ. ಜವಾಹರ್‌ಲಾಲ್ ನೆಹರೂ ನೇತೃತ್ವದ ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯದಿಂದ ಅವರು ಮೊದಲ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಗ್ಗೆ ನಡೆದುಕೊಳ್ಳುವ ರೀತಿಯ ಬಗ್ಗೆ ತೃಪ್ತಿ ಇಲ್ಲ ಎಂದು ಅಂಬೇಡ್ಕರ್ ಅವರೇ ಹಲವು ಬಾರಿ ಹೇಳಿದ್ದರು. ಸರ್ಕಾರದ ವಿದೇಶಾಂಗ ನೀತಿಗಳ ಬಗ್ಗೆ, ಆರ್ಟಿಕಲ್ 370ರ ಬಗೆಗಿನ ನಿಲುವಿನ ಬಗ್ಗೆ ಅಂಬೇಡ್ಕರ್ ಅಸಮಾಧಾನ ಹೊಂದಿದ್ದರು. ಅವರಿಗೆ ನೀಡಿದ್ದ ಭರವಸೆಯನ್ನು ಈಡೇರಿಸದ ಕಾರಣ ಅವರು ರಾಜೀನಾಮೆ ನೀಡಿದ್ದರು,” ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
PIB fact check refutes misleading social media claims, exposing the deliberate misrepresentation of Union Minister #AmitShah‘s parliamentary remarks on Dr. BR Ambedkar through selectively edited video clips designed to distort the original context and intent.@AmitShah @HMOIndia… pic.twitter.com/Aksue94wc2
— DD News (@DDNewslive) December 18, 2024
ಈ ಹೇಳಿಕೆಯನ್ನು ತಿರುಚಿದ ವಿಡಿಯೊವನ್ನು ಕಾಂಗ್ರೆಸ್ ರಿಲೀಸ್ ಮಾಡಿದೆ. ಅದರಲ್ಲಿ ʼʼಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಈಗ ಫ್ಯಾಷನ್ ಆಗಿಬಿಟ್ಟಿದೆ. ನೀವೇನಾದರೂ ಇಷ್ಟು ಬಾರಿ ದೇವರ ಹೆಸರನ್ನು ಹೇಳಿದ್ದರೆ 7 ಜನ್ಮದಲ್ಲಿ ನಿಮಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼʼ ಎಂದಿರುವುದಷ್ಟೇ ಕಂಡು ಬಂದಿದೆ.
ಅಲ್ಲದೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡ ಕಾಂಗ್ರೆಸ್ ʼʼಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ಅಪಾರ ದ್ವೇಷವಿದೆ ಎಂಬುದನ್ನು ಇದು ತೋರಿಸುತ್ತದೆ. ಇವರ ಪೂರ್ವಜರು ಬಾಬಾ ಸಾಹೇಬರ ಪ್ರತಿಕೃತಿಯನ್ನು ದಹಿಸುತ್ತಿದ್ದರು. ಬಾಬಾ ಸಾಹೇಬರು ನೀಡಿದ ಸಂವಿಧಾನವನ್ನು ಬದಲಾಯಿಸುವ ಬಗ್ಗೆಯೂ ಇವರು ಮಾತನಾಡಿದ್ದಾರೆ. ಈಗ ಇವರು ಬಾಬಾ ಸಾಹೇಬರ ಹೆಸರು ಹೇಳುವವರ ವಿರುದ್ಧ ಕಿಡಿಕಾರಿದ್ದಾರೆ. ಇದು ಅವಮಾನಕರ. ಅಮಿತ್ ಶಾ ಇದಕ್ಕಾಗಿ ದೇಶದ ಜನರ ಕ್ಷಮೆಯಾಚಿಸಬೇಕು” ಎಂದು ಹೇಳಿದೆ.