Mangaluru: ಕೋಡಿ ಬೀಚ್‌ನಲ್ಲಿ ಇಬ್ಬರು ಸಹೋದರರು ಸಮುದ್ರ ಪಾಲು!

Mangaluru: ಸಮುದ್ರಕ್ಕೆ ಈಜಲು ಇಳಿದಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಉಡುಪಿ ಜಿಲ್ಲೆ (Mangaluru) ಕುಂದಾಪುರದ ಕೋಡಿ ಬೀಚ್ ನಲ್ಲಿ ನಡೆದಿದೆ. ಧನರಾಜ್(23), ದರ್ಶನ್(18) ನೀರು ಪಾಲಾದ ಸಹೋದರರು ಆಗಿದ್ದು, ಮತ್ತೊಬ್ಬ ಸೋದರ ಧನುಷ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿ ಪ್ರಕಾರ ಸಂಜೆ ವೇಳೆ ಈ ಮೂವರು ಸಹೋದರರು ಕುಟುಂಬದವರೊಂದಿಗೆ ಕೋಡಿ ಬೀಚ್‌ಗೆ ಬಂದಿದ್ದು, ಅಲ್ಲಿ ಇವರು ಸಮುದ್ರಕ್ಕೆ ಇಳಿದು ನೀರಿನಲ್ಲಿ ಈಜುತ್ತಿದ್ದರೆನ್ನಲಾಗಿದೆ. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಮೂವರು ಕೂಡ ನೀರಿನಲ್ಲಿ ಕೊಚ್ಚಿ ಕೊಂಡು ಹೋದರೆಂದು ತಿಳಿದುಬಂದಿದೆ.

ನಾಪತ್ತೆಯಾಗಿರುವ ದರ್ಶನ್ ಗಾಗಿ ಹುಡುಕಾಟ ಮುಂದುವರೆದಿದೆ. ಧನರಾಜ್ ಪ್ರಭು ವಿಪ್ರೋದಲ್ಲಿ ಕೆಲಸ ಮಾಡುತ್ತಿದ್ದರೆ, ದರ್ಶನ್ ಕುಂದಾಪುರ ಜ್ಯೂನಿಯರ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದುಬಂದಿದೆ. ಧನುಷ್ ಸುರತ್ಕಲ್ ಎನ್‌ಐಟಿಕೆ ಕಾಲೇಜಿನ ವಿದ್ಯಾರ್ಥಿ. ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.