Dr G Parameshwar : ‘ಒಪ್ಪಂದ ಆಗಿದ್ರೆ ಅವರಿಬ್ಬರೇ ರಾಜಕೀಯ ಮಾಡಿಕೊಳ್ಳಲಿ, ನಾವೆಲ್ಲಾ ಯಾಕೆ? – ಸಿದ್ದರಾಮಯ್ಯ ಮತ್ತು ಡಿಕೆಶಿ ವಿರುದ್ಧ ಸಿಡಿದೆದ್ದ ಪರಮೇಶ್ವರ್
Dr G Parameshwar : ರಾಜ್ಯದಲ್ಲಿ ಸಿಎಂ ಸ್ಥಾನ ಹಂಚಿಕೆ ವಿಚಾರ ಬಾರಿ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನದ ಹಂಚಿಕೆ ಕುರಿತು ಒಪ್ಪಂದ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೀಗ ಈ ಕುರಿತು ಗೃಹ ಸಚಿವ ಪರಮೇಶ್ವರ್(Dr G Parameshwar ) ಅವರು ಬಹಳ ಕಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು, ರಾಜ್ಯದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದ ಆಗಿರುವ ವಿಚಾರ ನನಗೆ ಗೊತ್ತಿಲ್ಲ. ಒಪ್ಪಂದ ಆಗಿದೆ ಎನ್ನುವುದಾದರೆ ನಾವೆಲ್ಲ ಯಾಕಿರಬೇಕು?. ಅವರಿಬ್ಬರೇ ರಾಜಕಾರಣ ನಡೆಸಲಿ. ಬೇರೆಯವರು ಇರುವುದೇ ಬೇಡವೇ?. ಆ ರೀತಿ ಒಪ್ಪಂದ ಆಗಿರಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಸಚಿವ ಜಿ.ಪರಮೇಶ್ವರ್ ಸೂಚ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಜಿ.ಪರಮೇಶ್ವರ್, ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಒಪ್ಪಂದವಾಗಿಲ್ಲ. ಹಾಗೇನಾದರೂ ಅವರೇ ರಾಜಕೀಯ ಮಾಡಿಕೊಳ್ಳಲಿ. ನಾವ್ಯಾಕೆ..? ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದವಾಗಲು ಸಾಧ್ಯವೇ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವು ತಲೆ ಬಾಗುತ್ತೇವೆ. ಹೈಕಮಾಂಡ್ ಬಿಟ್ಟು ನಾವು ಹೋಗುವುದಿಲ್ಲ. ಒಪ್ಪಂದ ಆಗಿದ್ದೇ ಆದಲ್ಲಿ, ಬೇರೆ ನಾಯಕರ ಅವಶ್ಯಕತೆ ಇಲ್ಲವೇ..? ನಾನು ಈ ಬಗ್ಗೆ ಹೈಕಮಾಂಡ್‌ನಲ್ಲಿ ಕೇಳಿದ್ದೇನೆ. ಅಲ್ಲಿ ಯಾರೂ ರಾಜ್ಯದಲ್ಲಿ ಸಿಎಂ ಸ್ಥಾನದ ಬಗ್ಗೆ ಒಪ್ಪಿಗೆಯಾಗಿದೆ ಎಂದು ಹೇಳಲಿಲ್ಲ. ಡಿಕೆಶಿಯವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಯಾವ ಒಪ್ಪಿಗೆಯೂ ಆಗಿಲ್ಲವೆಂದು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಅಲ್ಲದೆ ನಾವು ರಾಜ್ಯದ ಜನತೆಗೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯವಾಗಿ ಏನೆಲ್ಲ ಮಾತನಾಡಿದ್ದೇವೆ, ಅದೆಲ್ಲವನ್ನು ನಾವು ಜನಗಳಿಗೆ ಹೇಳಬೇಕು. ಸರ್ಕಾರದ ಕಾರ್ಯಕ್ರಮಗಳಲ್ಲಿ ಅನೇಕ ರಾಜಕೀಯ ವಿಚಾರಗಳನ್ನು ಪ್ರಸ್ತಾಪ ಮಾಡಲು ಆಗುವುದಿಲ್ಲ. ಅದಕ್ಕಾಗಿ ಈ ಸಮಾವೇಶದಲ್ಲಿ ರಾಜಕೀಯ ವಿಚಾರಗಳನ್ನು ಪ್ರಸ್ತಾಪ ಮಾಡುತ್ತೇವೆ. ಜನಗಳಿಗೆ ಸತ್ಯಾಂಶ ಗೊತ್ತಾಗಬೇಕು. ಅನೇಕ ವಿಚಾರದಲ್ಲಿ ಪ್ರತಿಪಕ್ಷದವರು ಮಾಡುವ ಆಪಾದನೆಗಳಿಗೆ ರಾಜಕೀಯವಾಗಿ ಉತ್ತರ ಕೊಡುತ್ತೇವೆ ಎಂದು ಪ್ರತಿಕ್ರಿಯಿಸಿದರು.