CM Siddaramaiah : ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟು ಕೊಡುವ ವಿಚಾರ – ಸಿಎಂ ಸಿದ್ದರಾಮಯ್ಯ ಹೇಳಿದ್ದಷ್ಟು!!
CM Siddaramaiah : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಆಗಾಗ ಚರ್ಚೆಗೆ ಬರುತ್ತದೆ. ಒಮ್ಮೊಮ್ಮೆ ದೊಡ್ಡ ಮಟ್ಟದಲ್ಲಿ ಇದು ಚರ್ಚೆಯನ್ನು ಹುಟ್ಟಾಕಿ, ಹಾಗೆ ತಣ್ಣಗಾಗಿಬಿಡುತ್ತದೆ. ಇದೀಗ ಕಾಂಗ್ರೆಸ್ ಹಾಸನದಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಿದ ಬೆನ್ನಲ್ಲೇ ಮತ್ತೆ ಸಿಎಂ ಬದಲಾವಣೆ ವಿಚಾರ ಮುನ್ನಡೆಗೆ ಬಂದಿದೆ. ಇದೀಗ ಈ ಬಗ್ಗೆ ಸಿಎಂ ಸಿದ್ದರಾಮಯ್ಯ(Cm Siddaramaiah)ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಹೌದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆರಂಭದಲ್ಲಿ ಎರಡುವರೆ ವರ್ಷ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಕಾರ್ಯ ನಿರ್ವಹಿಸುತ್ತಾರೆ, ನಂತರ ಎರಡುವರೆ ವರ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಸುದ್ದಿ ರಾಜ್ಯಾದ್ಯಂತ ಹರಿದಾಡಿತ್ತು. ಬಳಿಕ ರಾಜ್ಯದಲ್ಲಿ ಎರಡು ಬಣಗಳಾಗಿ ಈ ಚರ್ಚೆಯನ್ನು ಆಗಾಗ ಮುನ್ನಡೆಗೆ ತರುತ್ತಿದ್ದವು. ಅಂತೆಯೇ ಇದೀಗ ಈ ಚರ್ಚೆ ಮುನ್ನಡೆಗೆ ಬಂದಿದ್ದು ಸಿಎಂ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುತ್ತಾರೆ, ಅವರ ನಡುವೆ ಒಪ್ಪಂದ ಆಗಿದೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಇದೀಗ ಸಿಎಂ ಸ್ಥಾನ ಹಂಚಿಕೆ ವಿಚಾರದ ಬಗ್ಗೆ ಸಿದ್ದರಾಮಯ್ಯ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬಂಡಬೋಯಿನಹಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಒಪ್ಪಂದ ಆಗಿಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನ ಎಂಬುದಾಗಿ ಅವರು ಉತ್ತರ ನೀಡಿದ್ದಾರೆ. ಆದರೆ ಅನುಮಾನವೆಂದರೆ ಅವರು ನಾನು ಪೂರ್ಣಾವಧಿಯ ಸಿಎಂ ಆಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳದಿರುವುದು. ಅಂದರೆ ಸಿದ್ದರಾಮಯ್ಯ ಅವರಿಗೂ ಕೂಡ ಎಲ್ಲೋ ಒಂದು ಕಡೆ ತನ್ನ ಸ್ಥಾನ ಹೋಗುತ್ತದೆ ಎಂಬ ಅನುಮಾನ ಇರುವ ಕಾರಣ, ಮುಂದೆ ನಾನು ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ಬಿಟ್ಟು ಕೊಡಬೇಕಾದ ಸಂದರ್ಭ ಎದುರಾಗಬಹುದು ಎಂಬ ಅರಿವಿರುವ ಕಾರಣ ಅವರು ತೇಲಿಕೆಯ ಉತ್ತರವನ್ನು ನೀಡಿದ್ದಾರೆ ಎಂದು ನಾವು ಅಂದಾಜಿಸಬಹುದು.
ಇನ್ನು ಸಿಎಂ ಹುದ್ದೆ ವಿಚಾರವಾಗಿ ಯಾವುದೇ ಒಪ್ಪಂದವಾಗಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾಧ್ಯಮಗಳ ಜೊತೆಗೆ ಡಿ ಕೆ ಶಿವಕುಮಾರ್ ಮಾತನಾಡಿ, ನಾನು ಸಿಎಂ ಕುರ್ಚಿ ಹಾಗೂ ಪಕ್ಷಕ್ಕೆ ಸದಾ ನಿಷ್ಠನಾಗಿರುತ್ತೇನೆ. ಮುಖ್ಯಮಂತ್ರಿಗಳು ಹೇಳಿದ ಮೇಲೆ ಅದೇ ಅಂತಿಮ. ಅದರ ಬಗ್ಗೆ ಮರುಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ಹೇಳಿದ ಮೇಲೆ ಯಾವುದೇ ತಕರಾರು ಇಲ್ಲ. ಅವರು ಹೇಳಿದ್ದೇ ಅಂತಿಮ. ಅವರ ಹೇಳಿಕೆ ನಂತರ ಈ ವಿಚಾರವಾಗಿ ಯಾವುದೇ ವಾದ, ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.