Mangalore: ತೊಕ್ಕೊಟ್ಟಿನ ರಸ್ತೆ ಗುಂಡಿಗೆ ಮಹಿಳೆ ಬಲಿ; ರೊಚ್ಚಿಗೆದ್ದ ಸ್ಥಳೀಯರಿಂದ ರಸ್ತೆ ತಡೆ ಪ್ರತಿಭಟನೆ

Ullala: ರಸ್ತೆ ಗುಂಡಿಗೆ ಸ್ಕೂಟರ್‌ ವಾಹನ ಬಿದ್ದ ಪರಿಣಾಮ ಹಿಂಬದಿ ಸವಾರೆ ಮಹಿಳೆ ರಸ್ತೆಗೆಸೆಯಲ್ಪಟ್ಟಿದ್ದು ಕಂಟೇನರ್‌ ಲಾರಿಯಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು ತೊಕ್ಕೊಟ್ಟು ಚೆಂಬುಗುಡ್ಡೆಯ ಸೇವಾ ಸೌಧದ ಬಳಿ ಶನಿವಾರ ಸಂಜೆ ನಡೆದಿದೆ. ಇದರ ಜೊತೆಗೆ ಶವ ಸಾಗಿಸಲು 108 ಸಿಬ್ಬಂದಿ ಒಪ್ಪದೇ ಇರುವುದನ್ನು ಕಂಡು ಮತ್ತು ರಸ್ತೆ ದುರವಸ್ಥೆಯ ವಿರುದ್ಧ ಜನರು ರೊಚ್ಚಿಗೆದ್ದ ಘಟನೆಯಿಂದ ಪ್ರತಿಭಟನೆ ಕೂಡಾ ನಡೆಯಿತು.

ಸುರತ್ಕಲ್‌ ಕುಳಾಯಿ ನಿವಾಸಿ ರೆಹಮತ್‌ (45) ಮೃತ ಪಟ್ಟ ಮಹಿಳೆ. ರೆಹಮತ್‌ ಅವರ ಪತಿ ರಶೀದ್‌ ಅವರು ಯೆನೆಪೋಯ ಆಸ್ಪತ್ರೆಯಲ್ಲಿ ಇಲೆಕ್ಟ್ರಿಕಲ್‌ ಮೆಂಟೆನೆನ್ಸ್‌ ಸಿಬ್ಬಂದಿಯಾಗಿದ್ದು, ಶನಿವಾರ ಸಂಜೆ ವೇಳೆ ಆಕ್ಟಿವಾ ಸ್ಕೂಟರ್‌ನಲ್ಲಿ ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆ ಬರುತ್ತಿದ್ದ ವೇಳೆ ಚೆಂಬುಗುಡ್ಡೆ ಎಂಬಲ್ಲಿ ಸ್ಕೂಟರ್‌ ಹದಗೆಟ್ಟ ರಸ್ತೆ ಗುಂಡಿಗೆ ಬಿದ್ದಿದೆ. ಈ ಸಂದರ್ಭದಲ್ಲಿ ರಶೀದ್‌ ಅವರ ಪತ್ನಿ ರಸ್ತೆಗೆಸೆಯಲ್ಪಟ್ಟಿದ್ದು, ಆಕೆಯ ಮೇಲೆ ಹಿಂದಿನಿಂದ ಬರುತ್ತಿದ್ದ ಮೆಡಿಕಲ್‌ ಸರಕಿನ ಕಂಟೇನರ್‌ ಹರಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮಹಿಳೆಯ ಶವ ರಸ್ತೆಯಲ್ಲೇ ಇದ್ದು, 108 ತುರ್ತು ಆಂಬುಲೆನ್ಸ್‌ ಸಿಬ್ಬಂದಿ ಶವ ಸಾಗಿಸಲು ತಾಂತ್ರಿಕ ಕಾರಣ ನೀಡಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹದಗೆಟ್ಟ ರಸ್ತೆಯ ಅವ್ಯವಸ್ಥೆಯಿಂದಾಗಿ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಡಿಸಿಪಿ ದಿನೇಶ್‌ ಕುಮಾರ್‌, ಸಂಚಾರಿ ವಿಭಾಗದ ಎಸಿಪಿ ನಜ್ಮ ಫಾರೂಕಿ, ಎಸಿಪಿ ಧನ್ಯನಾಯಕ್‌ ಭೇಟಿ ನೀಡಿದ್ದು ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ. ಜನರು ಪ್ರತಿಭಟನೆ ಮಾಡಿದ್ದರಿಂದ ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಯಿತು. ಕೊಣಾಜೆ, ಮುಡಿಪುಗೆ ತೆರಳುವ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

Leave A Reply

Your email address will not be published.