‘ರಿಪ್ಪನ್ ಸ್ವಾಮಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಶ್ವಿನಿ ಚಂದ್ರಶೇಖರ್
ಚಂದನವನದಲ್ಲಿ ವಿಭಿನ್ನ ರೀತಿಯ ಕಥಾನಕ ಚಿತ್ರಗಳ ನಿಟ್ಟಿನಲ್ಲಿ ಇದೀಗ ಚಿನ್ನಾರಿ ಮುತ್ತ ವಿಜಯರಾಘವೇಂದ್ರ ನಟನೆಯ ಮಾಸ್ ಕಥೆಯನ್ನು ಒಳಗೊಂಡಿರುವ “ರಿಪ್ಪನ್ ಸ್ವಾಮಿ” ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿ ಭಾರೀ ಸದ್ದನ್ನು ಮಾಡಿತ್ತು.
ಈ ಸಿನಿಮಾದ ನಾಯಕಿಯ ಪೋಸ್ಟರ್ ರಿಲೀಸ್ ಆಗಿದೆ. ಹೌದು, ಯುವ ನಿರ್ದೇಶಕ ಕಿಶೋರ್ ಮೂಡುಬಿದ್ರೆ ಸಾರಥ್ಯದಲ್ಲಿ ಮೂಡಿಬರುತ್ತಿರುವ ವಿಶೇಷ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಅಶ್ವಿನಿ ಚಂದ್ರಶೇಖರ್ ಅವರು ನಾಯಕಿಯಾಗಿದ್ದಾರೆ. ಮಂಗಳ ಎನ್ನುವ ಪಾತ್ರ ನಿಭಾಯಿಸಲಿದ್ದಾರೆ. ಮಂಗಳ ಪಾತ್ರಧಾರಿ ಈ ಕಥೆಯಲ್ಲಿ ರಿಪ್ಪನ್ ಸ್ವಾಮಿ ಹೆಂಡತಿಯ ಪಾತ್ರ ಮಾಡಲಿದ್ದಾರೆ ಅಶ್ವಿನಿ ಚಂದ್ರಶೇಖರ್.
ನಟಿ ಅಶ್ವಿನಿ ಚಂದ್ರಶೇಖರ್ ಮೂಲತಃ ಶಿವಮೊಗ್ಗದವರು. ಓದಿದ್ದೆಲ್ಲ ಬೆಂಗಳೂರಿನಲ್ಲಿ. ಅಶ್ವಿನಿ ಅವರು ಇಂಜಿನಿಯರಿಂಗ್ ಮುಗಿಸಿದ್ದು, ನಂತರ ಚಿತ್ರೋದ್ಯಮಕ್ಕೆ ಮುಖ ಮಾಡಿದರು. ತನ್ನ ನಟನಾ ಕೌಶಲ್ಯದಿಂದ ಕನ್ನಡ, ತಮಿಳು, ತೆಲುಗು ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ಅಶ್ವಿನಿ ಅವರು ಒಳ್ಳೆಯ ನೃತ್ಯಪಟು ಕೂಡಾ ಹೌದು. ಇವರು ಡ್ಯಾನ್ಸ್‌ನಲ್ಲಿ ವಿದ್ವತ್ ಮುಗಿಸಿದ್ದಾರೆ.
ರಿಪ್ಪನ್ ಸ್ವಾಮಿ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಅಶ್ವಿನಿ ಚಂದ್ರಶೇಖರ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ತಮಿಳಿನಲ್ಲಿ ಎರಡು ಸಿನಿಮಾ ರಿಲೀಸ್‌ಗೆ ರೆಡಿ ಇದೆ. ಮಲಯಾಳಂ ನಲ್ಲಿ ಎರಡು ಸಿನಿಮಾ ಮಾಡಿದ್ದು, ಕನ್ನಡದಲ್ಲಿ ರಿಪ್ಪನ್ ಸ್ವಾಮಿ ತೆರೆಗೆ ಬರಬೇಕಿದೆ.
ಕನ್ನಡದಲ್ಲಿ ಪ್ರೇಮ ಪಲ್ಲಕ್ಕಿ, ಒಂದು ರೋಮ್ಯಾಂಟಿಕ್ ಪ್ರೇಮ ಕತೆ, ಅಕ್ಟೋಪಸ್ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ತೆಲುಗಿನಲ್ಲಿ ಪ್ರೇಮ್ ಕಹಾನಿ, ಮಧ್ಯಲೋ ಪ್ರಭಾಸ್ ಪಳ್ಳಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಮೆರ್ಲಿನ್, ಪರಂಜು ಸೆಲ್ಲವ, ಕಾಲ್ ಟ್ಯಾಕ್ಸ್, ಜಿವಿ2 ಸಿನಿಮಾದಲ್ಲಿ ಇವರು ನಟಿಸಿದ್ದಾರೆ. ಜಿವಿ2 ಸಿನಿಮಾದಲ್ಲಿ ಇವರಿಗೆ ಬೆಸ್ಟ್ ಡಿಬೇಟ್ ಅವಾರ್ಡ್ ಕೂಡಾ ದೊರಕಿದೆ.
ʼರಿಪ್ಪನ್ ಸ್ವಾಮಿ ʼಈ ಸಿನಿಮಾ ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಸೇರಿ ನಿರ್ಮಾಣ ಮಾಡುತ್ತಿದ್ದು, ಇದು ಈ ಸಂಸ್ಥೆಯ ಮೊದಲ ಚಿತ್ರ. ಈ ಹಿಂದೆ ಮಾಲ್ಗುಡಿ ಡೇಸ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಕಿಶೋರ್ ಮೂಡುಬಿದ್ರೆ ʼ ರಿಪ್ಪನ್ ಸ್ವಾಮಿʼ ಮೂಲಕ ಒಂದು ಮಾಸ್ ಕಥೆ ಹೇಳಲು ಹೊರಟಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, 48 ದಿನಗಳ ಕಾಲ ಕೊಪ್ಪ, ಕಳಸ, ಬಾಳೆ ಹೊನ್ನೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.