Siddaramaiah: ಸಿಎಂ ವಿರುದ್ಧ ‘ಗೋ ಬ್ಯಾಕ್’ ಚಳುವಳಿ! ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

Siddaramaiah: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಮೈಸೂರು ಲೋಕಾಯುಕ್ತಕ್ಕೆ ವಿಚಾರಣೆಗೆ ಹಾಜರಾಗುತ್ತಿದ್ದಂತೆ ಇತ್ತ ಬಿಜೆಪಿ ಪ್ರತಿಭಟನೆಗೆ ಇಳಿದಿದೆ.
ಹೌದು, ಮೈಸೂರಿನ ರಾಮಸ್ವಾಮಿ ಸರ್ಕಲ್ ಬಳಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಬಿಜೆಪಿ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆ ಪರಿಣಾಮ, ಪ್ರತಿಭಟನಾಕಾರರ ವಾಹನವನ್ನು ಕೂಡ ಸೀಜ್ ಮಾಡಿದ್ದು, ಪೊಲೀಸರು ಹಾಗೂ ಶಾಸಕ ಶ್ರೀವತ್ಸ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಲೋಕಾಯುಕ್ತ ತನಿಖೆಯಿಂದ ಏನೂ ಆಗಲ್ಲ. ಸಿದ್ದರಾಮಯ್ಯ ಪ್ರಮಾಣಿಕರಾಗಿದ್ದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೇಸರಿಪಡೆ ಆಗ್ರಹಿಸಿದೆ. ಸಿಎಂ ನನ್ನದು ತೆರೆದ ಪುಸ್ತಕ ಅಂತಾರೆ. ಹಾಗಾಗಿ ಸಿಬಿಐ ತನಿಖೆಗೆ ಕೊಡಲಿ. ಸತ್ಯಾಸತ್ಯತೆ ಹೊರಗೆ ಬರಲಿ ಅಂತಾ ಪಟ್ಟು ಹಿಡಿದಿದ್ದಾರೆ.
ಅಷ್ಟೇ ಅಲ್ಲದೇ ಇವರೇ ಮೊದಲೇ ಟೈಮ್ ಫಿಕ್ಸ್ ಮಾಡಿಕೊಂಡು ವಿಚಾರಣೆಗೆ ಹೋಗಿದ್ದಾರೆ. ಇದೇನು ಮ್ಯಾಚ್ ಫಿಕ್ಸಿಂಗ್ ಕೇಸಾ? ತನಿಖಾಧಿಕಾರಿಗಳು ಎಷ್ಟು ಹೊತ್ತು ವಿಚಾರಣೆ ನಡೆಸುತ್ತಾರೆ ಅಂತ ಇವರಿಗೆ ಗೊತ್ತಾ? ಎಂದು ಬಿಜೆಪಿ ನಾಯಕರು ಟಾಂಗ್ ನೀಡಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮುಡಾ ದಂಗಲ್ ತಾರಕಕ್ಕೇರಿದೆ. ಬಿಜೆಪಿ ನಾಯಕರು ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದು ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ.