RSS-BJP ಸಂಬಂಧ ಮುಂದುವರೆಯುತ್ತಾ ಇಲ್ವಾ? RSS ಪ್ರಧಾನ ಕಾರ್ಯದರ್ಶಿಯಿಂದ ಅಚ್ಚರಿ ಹೇಳಿಕೆ

RSS-BJP ಒಂದು ಮರದ ಎರಡು ಕೊಂಬೆಗಳು ಇದ್ದಂತೆ. ಒಂದು ಹಂತದಲ್ಲಿ ನೋಡುವುದಾದರೆ RSS, ಬಿಜೆಪಿಯ ಮಾತೃ ಸಂಸ್ಥೆ ಎಂದು ಹೇಳಬಹುದು. ಆದರೆ ಲೋಕಸಭಾ ಚುನಾವಣೆಯ ಬಳಿಕ ಈ ಎರಡು ಸಂಸ್ಥೆಗಳ ಸಂಬಂಧ ಹಳಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಎರಡು ಸಂಸ್ಥೆಗಳ ಮುಖ್ಯಸ್ಥರು ನೀಡುತ್ತಿದ್ದ ಹೇಳಿಕೆಗಳು, ಒಬ್ಬರ ಮೇಲೆ ಒಬ್ಬರು ಮೇಲೆ ಮಾಡುತ್ತಿದ್ದ ಪರೋಕ್ಷ ವಾಗ್ದಾಳಿಗಳು ಸಾಕ್ಷಿಯಾಗಿದ್ದವು. ಹೀಗಾಗಿ ಆರ್ಎಸ್ಎಸ್ ಮತ್ತು ಬಿಜೆಪಿ ಸಂಬಂಧ ಮುಂದುವರೆಯುತ್ತ ಇಲ್ವಾ ಎಂಬುದು ಎಲ್ಲರ ಪ್ರಶ್ನೆ ಆಗಿತ್ತು. ಆದರೀಗ RSS ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅವರೇ ಈ ಗೊಂದಲಕ್ಕೆ ಉತ್ತರ ನೀಡಿದ್ದಾರೆ.

 

ಹೌದು, ಮಥುರಾದಲ್ಲಿ ನಡೆದ ಎರಡು ದಿನಗಳ ರಾ‍ಷ್ಟ್ರೀಯ ಸ್ವಯಂ ಸೇವಕ ಸಂಘದ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರಿಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಆರೆಸ್ಸೆಸ್ ಕುರಿತು ನೀಡಿದ ಹೇಳಿಕೆಯ ನಂತರ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಬಿರುಕು ಮೂಡಿದೆ, ಇವೆರಡರ ಸಂಬಂಧ ಮುಂದುವರೆಯುತ್ತಾ?ಎಂಬ ಪ್ರಶ್ನೆಗೆ ಉತ್ತರಿಸಿದ ಹೊಸಬಾಳೆ ಅವರು, ‘ನಮ್ಮದು ಸಾರ್ವಜನಿಕ ಸಂಘಟನೆ. ನಮಗೆ ಯಾವುದೇ ಪಕ್ಷದೊಂದಿಗೆ ಯಾವುದೇ ಜಗಳವಿಲ್ಲ, ಖಂಡಿತವಾಗಿಯೂ ಬಿಜೆಪಿಯೊಂದಿಗೆ ಜಗಳ ಇಲ್ಲ, ಏಕೆಂದರೆ ನಾವು ಹಾಗೆ ಏನನ್ನೂ ಯೋಚಿಸುವುದಿಲ್ಲ. ನಾವು ಎಲ್ಲರನ್ನೂ ಭೇಟಿಯಾಗುತ್ತೇವೆ. ನಾವು ಯಾರಿಗೂ ತಾರತಮ್ಯ ಮಾಡುವುದಿಲ್ಲ’ ಎಂದು ಹೇಳಿದರು. ಈ ಮೂಲಕ ಹೊಸಬಾಳೆ ಅವರು ಆರ್ ಎಸ್ ಎಸ್ ಮತ್ತು ಬಿಜೆಪಿ ಸಂಬಂಧ ಯಾವುದೇ ಕಾರಣಕ್ಕೂ ಮುರಿಯುವುದಿಲ್ಲ, ಏನೆ ಗೊಂದಲಗಳಿದ್ದರೂ ಸರಿಪಡಿಸಿಕೊಂಡು ಮುಂದುವರೆಯುತ್ತೇವೆ ಎಂಬುದಾಗಿ ಪರೋಕ್ಷವಾಗಿ ಹೇಳಿದಂತಿದೆ.

Leave A Reply

Your email address will not be published.