Amith Shah-Narendra Modi: ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ದೋಸ್ತಿಗಳಾಗಿದ್ದು ಹೇಗೆ? ಇಬ್ಬರ ಮೋದಲ ಭೇಟಿ ಆಗಿದ್ದು ಎಲ್ಲಿ, ಸ್ನೇಹ ಗಟ್ಟಿ ಆಗಿದ್ದೆಲ್ಲಾ ಹೇಗೆ?
Amith Shah- Narendra Modi: ಭಾರತದ ರಾಜಕೀಯ ಇತಿಹಾಸವನ್ನು ತೆರೆದು ನೋಡಿದಾಗ ಅಲ್ಲಲ್ಲಿ ಒಂದೊಂದು ರಾಜಕೀಯ ಸ್ನೇಹ ಜೋಡಿಗಳನ್ನು ಅಥವಾ ಪ್ರಬಲ ಜೋಡೆತ್ತುಗಳನ್ನು ನೋಡಬಹುದು. ಉದಾಹರಣೆಗೆ ಜವಾಹರಲಾಲ್ ನೆಹರು ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್(Neharu-Patel), ನಂತರದಲ್ಲಿ ವಾಜಪೇಯಿ ಮತ್ತು ಅಡ್ವಾಣಿ(Vajpayee-Advani) . ಇತ್ತ ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ. ಹೀಗೆ ಕೆಲವು ಜೋಡಿಗಳು ಅಲ್ಲಲ್ಲಿ ಕಾಣುತ್ತವೆ. ಅಂತೆಯೇ ಇದೀಗ ಪ್ರಸ್ತುತ ದೇಶದ ಹೆಚ್ಚಿನ ಜನ ಕೊಂಡಾಡುವ, ದೇಶವೇ ಮೆಚ್ಚಿದ ರಾಜಕೀಯದ ಮತ್ತೊಂದು ಸ್ನೇಹ ಜೋಡಿ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ(Amith Shah-Narendra Modi) ಅವರದ್ದು. ಹಾಗಿದ್ರೆ ಈ ಇಬ್ಬರು ಕ್ಲೋಸ್ ಆಗಿದ್ದು ಹೇಗೆ? ಇಬ್ಬರ ಪರಿಚಯ ಎಲ್ಲಾಯಿತು? ಯಾವಾಗಿನಿಂದ ಇಬ್ಬರೂ ತುಂಬಾ ಹತ್ತಿರವಾದರೂ? ಎಂಬ ವಿಚಾರ ನಿಮಗೇನಾದರೂ ಗೊತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್.
ಮೊದಲ ಭೇಟಿ:
80ರ ದಶಕದ ಆರಂಭದಲ್ಲಿ ಮೋದಿ ಹಾಗೂ ಶಾ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಸೈದ್ಧಾಂತಿಕ ಹಿನ್ನೆಲೆಯಲ್ಲಿ ಭೇಟಿಯಾದರು. ಆಗ ಅಮಿತ್ ಶಾ ಯುವ ಕಾರ್ಯಕರ್ತ ಮತ್ತು ನರೇಂದ್ರ ಮೋದಿ ಸಂಘದ ಪ್ರಚಾರಕ. 1984 ರಲ್ಲಿ ನರೇಂದ್ರ ಮೋದಿ ಅವರನ್ನು ಅಹಮದಾಬಾದ್ ಜಿಲ್ಲೆಯ ಪ್ರಚಾರಕರನ್ನಾಗಿ ಮಾಡಲಾಯಿತು ಮತ್ತು ಅಮಿತ್ ಶಾ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾದರು. ಇದಾದ ನಂತರ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು. ಇಲ್ಲಿ ಅಮಿತ್ ಶಾ ಅವರ ಸಮಸ್ಯೆಗಳು ಮತ್ತು ಸಲಹೆಗಳ ತಿಳಿವಳಿಕೆ ನರೇಂದ್ರ ಮೋದಿಯವರ ಮೇಲೆ ಹೆಚ್ಚು ಪ್ರಭಾವ ಬೀರಿತು. 1986ರಲ್ಲಿ ನರೇಂದ್ರ ಮೋದಿ ಅವರನ್ನು ಗುಜರಾತ್ ಬಿಜೆಪಿ ಕಾರ್ಯದರ್ಶಿಯನ್ನಾಗಿ ಮಾಡಿದ ನಂತರ ಅಮಿತ್ ಶಾ ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಯಿತು.
ಗುಜರಾತ್(Gujarath)ಚುನಾವಣೆ ವೇಳೆ ಬೆಸೆದ ಬಂಧ:
ಅದು 1995ನೇ ಇಸವಿ, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳ ಪೈಕಿ 121 ಸ್ಥಾನಗಳನ್ನು ಗೆದ್ದಿತ್ತು. ಪಕ್ಷದ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ ಅವರ ದಣಿವರಿಯದ ಪರಿಶ್ರಮವು ಈ ಗೆಲುವಿನಲ್ಲಿ ಪ್ರತಿಫಲ ನೀಡಿತ್ತು. ಹೀಗಾಗಿ ಹಿರಿಯ ನಾಯಕ ಕೇಶುಭಾಯಿ ಪಟೇಲ್ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೆ ಸಿಎಂ ಸ್ಥಾನದ ಮತ್ತೋರ್ವ ಆಕಾಂಕ್ಷಿ ಶಂಕರ್ ಸಿಂಗ್ ವಘೇಲಾ ಅವರಿಗೆ ಈ ನಿರ್ಧಾರ ಇಷ್ಟವಾಗಲಿಲ್ಲ. ಅವರು ಬಂಡೆದ್ದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಕಂಡು ಬಿಜೆಪಿಯ ಕೇಂದ್ರ ನಾಯಕತ್ವ ಕಾರ್ಯೋನ್ಮುಖವಾಗಿತ್ತು.
ಈ ಸಂದರ್ಭದಲ್ಲಿ 1995ರಲ್ಲಿ ನರೇಂದ್ರ ಮೋದಿ ಅವರನ್ನು ಗುಜರಾತ್‌ನಿಂದ ದೆಹಲಿಗೆ ಕರೆಸಲು ನಿರ್ಧರಿಸಲಾಗಿತ್ತು. ಒಂದು ರೀತಿಯಲ್ಲಿ ಇದು ರಾಜಕೀಯ ವನವಾಸ. ಈ ಕಷ್ಟದ ಸಮಯದಲ್ಲಿ, ಪಕ್ಷದ ಹೈಕಮಾಂಡ್‌ನಿಂದ ಹಿಡಿದು ಅನೇಕ ಸಹೋದ್ಯೋಗಿಗಳವರೆಗೆ ಎಲ್ಲರೂ ನರೇಂದ್ರ ಮೋದಿಯನ್ನು ತೊರೆದಿದ್ದರೂ, ಒಬ್ಬ ವ್ಯಕ್ತಿ ಯಾವಾಗಲೂ ಅವರೊಂದಿಗೆ ಇದ್ದರು, ಅವರೇ ಅಮಿತ್ ಶಾ. ಇಲ್ಲಿಂದ ಅವರ ಸ್ನೇಹ ಮತ್ತಷ್ಟು ಗಾಢವಾಯಿತು.
ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್:
2010ನೇ ಇಸವಿಯಲ್ಲಿ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಆರೋಪದಿಂದಾಗಿ ಅಮಿತ್ ಶಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಳಿಕ CBI ಅವರನ್ನು ಬಂಧಿಸಿ ಸುಮಾರು ಮೂರು ತಿಂಗಳು ಜೈಲಿನಲ್ಲಿ ಇಟ್ಟಿತು. ಮಾಧ್ಯಮ ವರದಿಗಳ ಪ್ರಕಾರ, ಶಾ ಜೈಲಿಗೆ ಹೋದ ನಂತರ, ಅವರನ್ನು ಜೈಲಿನಿಂದ ಹೊರತರಲು ಪ್ರಯತ್ನಿಸಿದರು. ಈ ಅವಧಿಯಲ್ಲಿ ಮೋದಿ ಅವರು ಶಾ ಅವರ ಕುಟುಂಬದ ಸಂಪೂರ್ಣ ಕಾಳಜಿ ವಹಿಸಿದ್ದರು. ಅಲ್ಲದೆ ಜೈಲಿನಿಂದ ಹೊರಬಂದ ನಂತರವೂ ಅಮಿತ್ ಶಾ ಗುಜರಾತ್ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಅಮಿತ್ ಶಾಗೆ ಕ್ಲೀನ್ ಚಿಟ್ ಸಿಕ್ಕಿತ್ತು. ಈ ಎರಡು ಘಟನೆಗಳು ಮೋದಿ ಮತ್ತು ಶಾ ನಡುವಿನ ಸ್ನೇಹಕ್ಕೆ ಸಾಕ್ಷಿಯಾಗಿದೆ.
ಮೋದಿ ಇನ್ನಿಂಗ್ಸ್ ಆರಂಭದ ವೇಳೆ ಹತ್ತಿರ:
2001ರಲ್ಲಿ ಗುಜರಾತ್‌ನ ರಾಜಕೀಯ ನೆಲದಲ್ಲಿ ಮೋದಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಮೋದಿ ಮುಖ್ಯಮಂತ್ರಿಯಾದ ನಂತರ, 38 ವರ್ಷದ ಅಮಿತ್ ಶಾ ಅವರು 17 ಪ್ರಮುಖ ಕ್ಯಾಬಿನೆಟ್ ಖಾತೆಗಳನ್ನು ನೀಡಿದ ಮೊದಲ ಯುವ ನಾಯಕರಾದರು. 2003ರಲ್ಲಿ ಗುಜರಾತ್ನಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ರಚನೆಯಾದಾಗ ಅಮಿತ್ ಶಾ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿ ಗೃಹ ಖಾತೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನೀಡಲಾಗಿತ್ತು. ಆ ನಂತರ ಅಮಿತ್ ಶಾ ಬಹುಬೇಗ ನರೇಂದ್ರ ಮೋದಿಯವರಿಗೆ ಹತ್ತಿರವಾದರು.
ಚುನಾವಣಾ ತಂತ್ರಗಾರ ಅಮಿತ್ ಶಾ:
2014ರಲ್ಲಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. 2014 ರ ಉತ್ತರ ಪ್ರದೇಶ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಪ್ರಮುಖ ತಂತ್ರಗಾರರಾಗಿ ಅಮಿತ್ ಶಾ ಹೊರಹೊಮ್ಮಿದರು. ಚುನಾವಣೆಯಲ್ಲಿ ಗೆದ್ದ ನಂತರ ಮೋದಿ ಮತ್ತೊಮ್ಮೆ ಶಾ ಅವರಲ್ಲಿ ವಿಶ್ವಾಸ ವ್ಯಕ್ತಪಡಿಸಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರು. ನಂತರ 2019ರಲ್ಲಿ ಗೆದ್ದ ಮೋದಿ ಶಾಗೆ ಅವರಿಗೆ ಗೃಹ ಖಾತೆ ನೀಡಿದರು. ಹ್ಯಾಟ್ರಿಕ್ ಭಾರಿಸಿದಾಗಲೂ ಗೃಹ ಸಚಿವರಾಗಿಯೇ ಮುಂದುವರಿಸಿದರು.
ಹೀಗೆ ವೈಯಕ್ತಿಕವಾಗಿ, ರಾಜಕೀಯವಾಗಿ ಸದಾ ಒಬ್ಬರಿಗೊಬ್ಬರು ಹೆಗಲಾಗುತ್ತಾ 35 ವರ್ಷಗಳ ತಮ್ಮ ಸ್ನೇಹದ ಏರಿಳಿತಗಳ ಮೂಲಕ ಇಬ್ಬರೂ ಪರಸ್ಪರ ಪೂರಕವಾಗಿ ಉಳಿದರು. ಸದ್ಯ ದೇಶದ ರಾಜಕೀಯದಲ್ಲಿ ಪ್ರಬಲ ಜೋಡಿಗಳಾಗಿ ಉಳಿದಿದ್ದಾರೆ.