Olympics Medal: ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಗೆದ್ದ ಪದಕವನ್ನು ಕಚ್ಚುವ ಸೀಕ್ರೆಟ್ ಏನು ಗೊತ್ತಾ!?
Olympics medal: ಒಲಿಂಪಿಕ್ಸ್ ವಿಜೇತ ಕ್ರೀಡಾಪಟುಗಳು ಮೆಡಲ್ ಕಚ್ಚಿ ಫೋಟೋ ಪೋಸ್ ನೀಡಿರುವುದು ನೀವು ನೋಡಿರಲೇ ಬೇಕು. ಹಾಗಾದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರು ಅದನ್ನು ಯಾಕೆ ಕಚ್ಚುತ್ತಾರೆ ಅನ್ನೋದು ನಿಮಗೆ ಗೊಂದಲ ಇದ್ದೇ ಇರುತ್ತೆ. ಬನ್ನಿ ನಿಮ್ಮ ಗೊಂದಲಕ್ಕೆ ಇಲ್ಲಿ ಉತ್ತರ ತಿಳಿಯೋಣ.
ಸಹಜವಾಗಿಯೇ ಕ್ರೀಡಾಪಟುಗಳ ಕನಸು ಒಂದೇ, ಅದು ಒಲಿಂಪಿಕ್ಸ್ ಪದಕ (Olympics medal) ಗೆಲ್ಲುವುದು. ಈ ಕನಸು ನನಸಾಗಿಸಲು ಸಾಕಷ್ಟು ಅಭ್ಯಾಸ , ಬದ್ಧತೆ, ದೃಢಸಂಕಲ್ಪ ಮತ್ತು ಸ್ವಲ್ಪ ಅದೃಷ್ಟವೂ ಬೇಕಾಗುತ್ತದೆ. ಹೀಗೆ ವಿಜೇತರಾಗುವ ಕ್ರೀಡಾಪಟುಗಳು ವೇದಿಕೆಯಲ್ಲಿ ಪದಕ ಕೊರಳಿಗೆ ಬಿದ್ದ ಪದಕವನ್ನು ಕಚ್ಚುವುದನ್ನು ನೀವು ಹೆಚ್ಚಾಗಿ ಕಂಡಿರಬಹುದು. ಪ್ಯಾರಿಸ್ ಒಲಿಂಪಿಕ್ಸ್ ನಲ್ಲೂ ಹೆಚ್ಚಿನ ಪದಕ ವಿಜೇತ ಕ್ರೀಡಾಪಟುಗಳು ಮೆಡಲ್ ಕಚ್ಚಿ ಫೋಟೋ ಪೋಸ್ ನೀಡಿದ್ದಾರೆ.
ಮಾಹಿತಿ ಪ್ರಕಾರ ಆಧುನಿಕ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ನೀಡುವ ಪದ್ಧತಿ ಮೊದಲ ಘಟ್ಟದಲ್ಲಿ ಇರಲಿಲ್ಲ. 1896ರಲ್ಲಿ ಒಲಿಂಪಿಕ್ಸ್ ಆರಂಭಗೊಂಡಾಗ ಮೊದಲ ಸ್ಥಾನ ಪಡೆದವರಿಗೆ ಚಿನ್ನದ ಪದಕ ನೀಡಲಾಗಿತ್ತು ಮತ್ತು 2ನೇ ಸ್ಥಾನ ಪಡೆದವರಿಗೆ ಕಂಚಿನ ಪದಕ ನೀಡಲಾಗಿತ್ತು. ಆಗ 3ನೇ ಸ್ಥಾನ
ಪಡೆದವರಿಗೆ ಪದಕ ನೀಡಿರಲಿಲ್ಲ. ನಂತರ 1904ರ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಅಗ್ರ 3 ಸ್ಥಾನ ಪಡೆದವರಿಗೆ ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚಿನ ಪದಕ ನೀಡುವ ಪದ್ಧತಿಯನ್ನು ಆರಂಭಿಸಲಾಯಿತು. ಆಗ ಸಂಪೂರ್ಣ ಚಿನ್ನದಿಂದಲೇ ಮಾಡಿದ ಪದಕವನ್ನು ನೀಡಲಾಗಿತ್ತು. 1912ರ ಸ್ಟಾಕ್‌ಹೋಮ್ ಒಲಿಂಪಿಕ್ಸ್ ವರೆಗೂ ಇದು ಸಾಗಿತ್ತು. ಆದರೆ ಆಗ ಮೊದಲ ಮಹಾಯುದ್ಧ ನಡೆದಾಗ ಚಿನ್ನದ ಬೆಲೆ ಗಗನಕ್ಕೇರಿತು.
ಇದರಿಂದಾಗಿ ಚಿನ್ನದ ಪದಕದಲ್ಲಿ ಚಿನ್ನದ ಪ್ರಮಾಣ ಕಡಿಮೆ ಮಾಡಲಾಯಿತು. ನಂತರದಲ್ಲಿ ಈಗಿನ ಪ್ಯಾರಿಸ್ ಒಲಿಂಪಿಕ್ಸ್‌ವರೆಗೂ ಚಿನ್ನದ ಪದಕದಲ್ಲಿ ಕೇವಲ 6 ಗ್ರಾಮ್ ಮಾತ್ರ ಚಿನ್ನವಿರುತ್ತದೆ. ಉಳಿದೆಲ್ಲವೂ ಬೆಳ್ಳಿ ಆಗಿರುತ್ತದೆ. ಕಂಚಿನ ಪದಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಾಮ್ರ ಇರುತ್ತದೆ.
ಒಟ್ಟಿನಲ್ಲಿ ಒಲಿಂಪಿಯನ್‌ಗಳು ಪದಕ ಕಚ್ಚುವ ಕ್ರಮ ಯಾವಾಗ ಶುರುವಾಯಿತು ಎಂದು ನಿಖರವಾಗಿ ಯಾರಿಗೂ ಗೊತ್ತಿಲ್ಲದಿದ್ದರೂ, ಒಲಿಂಪಿಕ್ಸ್‌ನಲ್ಲಿ ಸಂಪೂರ್ಣ ಚಿನ್ನದಿಂದ ಮಾಡಿದ ಪದಕ ನೀಡಲು ಶುರು ಮಾಡಿದಂದಿನಿಂದ ಆರಂಭಗೊಂಡಿರಬಹುದು ಎನ್ನಲಾಗುತ್ತದೆ. ಯಾಕೆಂದರೆ, ಚಿನ್ನದ ಕ್ವಾಲಿಟಿ ಪತ್ತೆ ಮಾಡಲು ಕಚ್ಚಿ ನೋಡುವುದು ಕೂಡ ಒಂದು ಕ್ರಮವಾಗಿದೆ. ಉದಾಹರಣೆಗೆ ಚಿನ್ನ ಮೆದು ಲೋಹವಾಗಿದ್ದು, ಅದನ್ನು ಕಚ್ಚಿದಾಗ ಅದರಲ್ಲಿ ಹಲ್ಲಿನ ಗುರುತು ಮೂಡಿದರೆ ಅದನ್ನು ಶುದ್ಧ ಚಿನ್ನ, ಇಲ್ಲದಿದ್ದರೆ ನಕಲಿ ಚಿನ್ನ ಎನ್ನಲಾಗುತ್ತದೆ. ಹೀಗಾಗಿ ಸಂಪೂರ್ಣ ಚಿನ್ನದ ಪದಕಗಳನ್ನು ನೀಡಿದಾಗ ಕ್ರೀಡಾಪಟುಗಳು ಅದರ ಶುದ್ಧತೆ ಪರೀಸಲು ಕಚ್ಚಿರಬಹುದು. ನಂತರ ಅದನ್ನು ಕ್ರೀಡಾಪಟುಗಳು ಫಾಲೋ ಮಾಡಿರಬಹುದು ಎನ್ನಲಾಗುತ್ತದೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸ್ಟಾರ್ ಕ್ರೀಡಾಪಟುಗಳು ಪದಕ ವೇದಿಕೆ ಏರಿದಾಗ ಈ ರೀತಿ ಪದಕವನ್ನು ಕಚ್ಚಿ ಪೋಸ್ ನೀಡಿರುವ ದೃಶ್ಯ ಹಲವಿದೆ. ಅದನ್ನೇ ನಂತರದಲ್ಲಿ ಬಂದ ಕ್ರೀಡಾಪಟುಗಳು ಅನುಸರಿಸಿರಬಹುದು.
ಇದರ ಹೊರತು ಮತ್ತೊಂದು ಪ್ರಮುಖ ಕಾರಣ ಮತ್ತು ಈಗಲೂ ಅದು ಮುಂದುವರಿಯಲು ಪ್ರಮುಖ ಕಾರಣಕರ್ತರು ಒಲಿಂಪಿಕ್ಸ್ ಫೋಟೋ ಗ್ರಾಫರ್ ಗಳು. ಹೌದು, ಕ್ರೀಡಾಪಟುಗಳು ಪದಕ ವೇದಿಕೆ ಏರಿ ಫೋಟೋ ಪೋಸ್ ನೀಡುವಾಗ, ಫೋಟೋ ಗ್ರಾಫರ್ ಗಳು ವಿಶೇಷವಾದ ಡಿಫರೆಂಟ್ ಫೋಟೋ ಸಿಗಬೇಕೆಂದು ಬಯಸುತ್ತಾರೆ. ಹೀಗಾಗಿ ಹಲವು ಸಂದರ್ಭಗಳಲ್ಲಿ ಫೋಟೋ ಗ್ರಾಫರ್ ಗಳೇ ಕ್ರೀಡಾಪಟುಗಳಿಗೆ ಪದಕವನ್ನು ಕಚ್ಚಿ ಪೋಸ್ ನೀಡಲು ಪ್ರೇರೇಪಿಸುತ್ತಾರೆ ಎನ್ನಲಾಗುತ್ತದೆ. “ಸ್ಟೈಲ್ ಫೀಸ್’ ಎನ್ನುವ ಛಾಯಾಗ್ರಾಹಕರು ಜತೆಯಲ್ಲೇ, “ಬೈಟ್ ಯುವರ್ ಮೆಡಲ್’ ಎಂದೂ ಹೇಳುತ್ತಾರೆ ಎಂದು ಕೆಲ ಕ್ರೀಡಾಪಟುಗಳು ತಿಳಿಸಿದ್ದಾರೆ.