RSS and Modi: ಮೋದಿ ಮತ್ತು ಆರೆಸ್ಸೆಸ್‌ ನಡುವಿನ ಸೀಕ್ರೆಟ್ ಏನದು?

RSS and Modi: ಸದ್ಯಕ್ಕೆ ಮೋದಿ ಅವರಿಗೆ ಆರ್‌ಎಸ್‌ಎಸ್‌ ನ್ನು ಕಿತ್ತು ಹಾಕದ  ಪರಿಸ್ಥಿತಿ ಆಗಿದೆ. ಯಾಕೆಂದರೆ ಅವರೇ ಬೆಳೆಸಿದ ಗಿಡ ಇಂದು ಮರವಾಗಿ ಬೆಳೆದಿದೆ. ಅದರಲ್ಲೂ ಈ ನಡುವೆ ಆರ್‌ಎಸ್‌ಎಸ್‌ ಹಾಗೂ ಸಂಘಪರಿವಾರದ ನಾಯಕರು (RSS and modi ) ”ಮೋದಿ ಪರಿವಾರದ ಬಿಜೆಪಿ”ಯನ್ನು ಕಟುವಾಗಿ ಟೀಕಿಸಿದ ಸುದ್ದಿಗಳನ್ನು ಓದಿರುತ್ತೀರಿ. ಆದ್ರೆ ವಾಸ್ತವ ಏನೆಂದರೆ, ಮೋದಿ ಅವರಿಗೆ, ಈಗ ಆರ್‌ಎಸ್‌ಎಸ್‌ನ ಎಲ್ಲ ಆದ್ಯತೆಗಳನ್ನು ಈಡೇರಿಸುವ ಅವಕಾಶಗಳಿಲ್ಲ.

ಒಟ್ಟಾರೆ ಹೇಳುವುದಾದರೆ ರಾಷ್ಟ್ರೀಯ ರಾಜಕೀಯ ಹಾಗೂ ಜಾಗತಿಕ ರಾಜಕೀಯವನ್ನೂ ನಿಭಾಯಿಸುವ ಅನಿವಾರ್ಯತೆ ಇದೆ. ಹಾಗಾಗಿ ‘ಆರ್‌ಎಸ್‌ಎಸ್‌ ಏನಾದರೂ ಸಲಹೆ ಕೊಡಲಿ, ಆದರೆ ಅದು ಹೇಳಿದ್ದೆಲ್ಲವನ್ನೂ ಕೇಳಲೇಬೇಕು ಅನ್ನುವ ಸ್ಥಿತಿಯಲ್ಲಿ ನಾನಿಲ್ಲ’ ಎಂದು ಅನ್ನಿಸುತ್ತಿದೆ. ಸದ್ಯಕ್ಕೆ ಆರ್‌ಎಸ್‌ಎಸ್‌ ಪ್ರಮುಖರಿಗೆ, ‘ಮೋದಿ ಕ್ಲೀನ್ ಇದ್ದಾರೆ. ಹಿಂದುತ್ವಕ್ಕೆ ಬದ್ಧರಾಗಿದ್ದಾರೆ. ಆದರೆ ಅವರಿಗೆ ಸಂಘವನ್ನೂ ಮೀರಿದ ವ್ಯಕ್ತಿಪೂಜೆ ಹೆಚ್ಚಾಗುತ್ತಾ ಹೋದರೆ ಮುಂದೆ ದೀರ್ಘಕಾಲದಲ್ಲಿ ಮೋದಿ-ರಹಿತ ಸಂಘದ ಪ್ರಸ್ತುತತೆ ಉಳಿಯೋದು ಹೇಗೆ’ ಎಂದು ಅನ್ನಿಸುತ್ತಿದೆ.

ಇನ್ನು ಗಡ್ಕರಿ, ಯೋಗಿ ಆದಿತ್ಯನಾಥ್‌, ಸಂತೋಷ್‌ ವಿಷಯದಲ್ಲಿ ಕೊಂಚ ಏರುಪೇರಾಗಿದ್ದ ಮೋದಿ-ಆರೆಸ್ಸೆಸ್‌ ಸಂಬಂಧ ಮುಂದೆ ಜೆ.ಪಿ.ನಡ್ದಾ ತೆರವುಗೊಳಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರು ಬರುತ್ತಾರೆ ಅನ್ನುವುದರಲ್ಲಿ ಕಾಣಲಿದೆ. ಜೊತೆಗೆ ಮೋದಿ ಮತ್ತು ಆರ್‌ಎಸ್‌ಎಸ್‌ ಸಂಬಂಧ ಕೆಲವು ಘಟನೆಗಳನ್ನು ಇಲ್ಲಿ ವಿವರಿಸಲಾಗಿದೆ.

ಚುನಾವಣೆಗೆ ಮುಂಚೆ ನಡೆದ ದಿಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಒಂದು ಪ್ರದರ್ಶಿನಿ ಇದ್ದಾಗ, ಆರ್‌ಎಸ್‌ಎಸ್‌(RSS)ನ ಅನೇಕ ಹಿರಿಯ ಪ್ರಚಾರಕರು ಅದನ್ನು ನೋಡಲು ಹೋಗಿದ್ದಾರೆ. ಹಾಕಿದ 2000 ಫೋಟೋಗಳಲ್ಲಿ ಒಂದೊಂದು ಮಾಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಫೋಟೋ ಬಿಟ್ಟರೆ ಹೆಚ್ಚಿನೆಲ್ಲ ಫೋಟೋಗಳು ಮೋದಿ(PM Modi) ಅವರದ್ದೇ ಇತ್ತಂತೆ.

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ(JP Nadda) ‘ಇನ್ನು ಬಿಜೆಪಿಗೆ ಆರ್‌ಎಸ್‌ಎಸ್‌ ಸಹಾಯದ ಅವಶ್ಯಕತೆ ಇಲ್ಲ’ ಎಂದು ಹೇಳಿದ್ದು. ಇದು ನಡ್ದಾ ಬಾಯಲ್ಲಿ ಆಕಸ್ಮಿಕವಾಗಿ ಬಂದಿದ್ದಾ ಅಥವಾ ಮುದ್ದಾಂ ಬರಿಸಿದ್ದಾ ಅನ್ನುವ ಚರ್ಚೆ ಸಂಘ ಪರಿವಾರದಲ್ಲಿ ಜೋರಾಗಿಯೇ ನಡೆದಿದೆ.

ಮುಖ್ಯವಾಗಿ ಲೋಕಸಭಾ ಚುನಾವಣೆ(Lok sabha election 2024)ಯಲ್ಲಿ ಸ್ಥಾನಗಳಿಕೆ ಕಡಿಮೆಯಾಗಲು ಕೆಲ ಬಿಜೆಪಿಯ ನಾಯಕರು ಅಹಂಕಾರ ತೋರಿಸಿದ್ದೇ ಕಾರಣ ಎಂದು ಆರ್‌ಎಸ್‌ಎಸ್‌ ನಾಯಕರು ಇತ್ತೀಚೆಗೆ ಬಹಿರಂಗವಾಗಿ ಟೀಕಿಸಿದ್ದರು. ಸದ್ಯಕ್ಕೆ ಮೋದಿ ಮತ್ತು ಸಂಘದ ನಡುವೆ ಏನಾಗುತ್ತಿದೆ ಅನ್ನುವುದು ತಿಳಿಯಲು ಈ ಮೂರು ಘಟನೆಗಳು ಸಾಕು.

ಮೊದಲ ಅವಧಿಯಲ್ಲಿ ಆರ್‌ಎಸ್‌ಎಸ್‌ ಮತ್ತು ಮೋದಿ(RSS and Modi) ನಡುವೆ ಸಂಬಂಧಗಳು ಆತ್ಮೀಯವಾಗೇ ಇದ್ದವು. ಮೋದಿಯವರು ಬಹುತೇಕ ನಿರ್ಣಯ ತೆಗೆದುಕೊಳ್ಳುವಾಗ ಸಂಘದ ಹಿರಿಯರ ಬಳಿಗೆ ಅಮಿತ್ ಶಾ(Amit shah)ರನ್ನು ಕಳುಹಿಸುತ್ತಿದ್ದರು. ಸಂಘ ಹೇಳಿದ ಭಾಗಶ ಕೆಲಸ ಪಕ್ಕಾ ಆಗುತ್ತಿದ್ದವು. ಆದರೆ 2017ರಲ್ಲಿ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿ ಮಾಡುವುದು ಅಮಿತ್ ಶಾಗೆ ಇಷ್ಟ ಇರಲಿಲ್ಲವಂತೆ. ಅವರಿಗೆ ಕೇಶವ ಪ್ರಸಾದ ಮೌರ್ಯರನ್ನು ಮಾಡಬೇಕಿತ್ತು. ಆದರೆ ಸಂಘ ಅದನ್ನು ವೀಟೊ ಮಾಡಿದ್ದೂ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿದ್ದೂ ಎಲ್ಲರಿಗೂ ಗೊತ್ತೇ ಇದೆ.

ಇನ್ನು ಅಧ್ಯಕ್ಷರಾಗಿ ಅಮಿತ್ ಶಾ ಅವಧಿ ಮುಗಿದ ಮೇಲೆ ಭೂಪೇಂದ್ರ ಯಾದವ್‌ರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಮಾಡುವ ಮನಸ್ಸು ಮೋದಿ ಮತ್ತು ಶಾ ಅವರಿಗಿತ್ತು. ಆದರೆ ಆರ್‌ಎಸ್‌ಎಸ್‌ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಿ, ಸರ್ವಸಮ್ಮತವಾಗಿ ಜೆ.ಪಿ.ನಡ್ದಾ ರಾಷ್ಟ್ರೀಯ ಅಧ್ಯಕ್ಷರಾದರು. ಒಟ್ಟಾರೆ ಮೋದಿ ಮತ್ತು ನಾಗ್ಪುರದ ಆರ್‌ಎಸ್‌ಎಸ್‌ ಸಂಬಂಧಗಳು ‘ಒಬ್ಬರಿಗೊಬ್ಬರು ಕಷ್ಟ ಹೌದು, ಇಲ್ಲದೇ ಇದ್ರೆ ಇನ್ನೂ ಕಷ್ಟ’ ಎನ್ನುವ ಸ್ಥಿತಿಗೆ ಬಂದು ನಿಂತಂತೇ ಕಾಣುತ್ತಿವೆ.

ಇತಿಹಾಸವನ್ನು ಕೆದಕಿದಾಗ, 1925ರಿಂದ ಹೆಚ್ಚುಕಡಿಮೆ 1948ರ ವರೆಗೂ ಆರ್‌ಎಸ್‌ಎಸ್‌ಗೆ ತಮ್ಮದೊಂದು ರಾಜಕೀಯ ಪಾರ್ಟಿ ಅಥವಾ ಯಾವುದೇ ನಿಲುವು ಇರಲಿಲ್ಲ, ಆದರೆ ಗಾಂಧಿ ಹತ್ಯೆ ನಂತರ ಸಂಘದ ನಿಷೇಧ ಆಯಿತೋ ಆಗ ಆರ್‌ಎಸ್‌ಎಸ್‌ನ ಎರಡನೇ ಸರ ಸಂಘ ಚಾಲಕರಾಗಿದ್ದ ಗುರೂಜಿ ಗೋಳವಳ್ಕರ್‌ರಿಗೆ ಕಾಂಗ್ರೆಸ್ ವಿರುದ್ಧ ಒಂದು ಹಿಂದುತ್ವದ ವಿಚಾರ ಹೇಳುವ ಹೊಸ ಪಾರ್ಟಿ ಬೇಕು ಎಂದು ಮನವರಿಕೆ ಆಗಿದೆ, ನಂತರ ಪಂಡಿತ್ ದೀನದಯಾಳ್ ಉಪಾಧ್ಯಾಯ, ನಾನಾಜಿ ದೇಶಮುಖ್‌, ಅಟಲ್ ಬಿಹಾರಿ ವಾಜಪೇಯಿ, ಬಲರಾಜ್ ಮುಧೋಕ್, ಲಾಲ್‌ಕೃಷ್ಣ ಅಡ್ವಾಣಿ ಹೀಗೆ ಸಂಘದ ಕೆಲ ಸ್ವಯಂಸೇವಕರನ್ನು ಹಂತಹಂತವಾಗಿ ಜನಸಂಘಕ್ಕೆ ಕಳುಹಿಸಲಾಯಿತು. ಇದೆಲ್ಲ ಆಗಿ 20 ವರ್ಷ ಮೂರ್ಖರಾಗಿ 1967ರ ಸುಮಾರಿಗೆ ಜನಸಂಘಕ್ಕೆ 100 ಸೀಟು ಸಿಕ್ಕು, ಚೌಧರಿ ಚರಣ್ ಸಿಂಗ್‌ರನ್ನು ಕಾಂಗ್ರೆಸ್ ಒಡೆದು ಬರುವಂತೆ ಮಾಡಿ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಮಾಡಲಾಯಿತು. ನಂತರ ಶುರುವಾಗಿದ್ದು ಬಲರಾಜ್ ಮುಧೋಕ್ ವರ್ಸಸ್ ಅಟಲ್ ಬಿಹಾರಿ ವಾಜಪೇಯಿ ಕಿತ್ತಾಟ. ಅದರಲ್ಲಿ ಆರ್‌ಎಸ್‌ಎಸ್‌ ವಾಜಪೇಯಿ ಜೊತೆಗೆ ಇತ್ತು. ಇದೇ ಕಾರಣದಿಂದ ನಾನಾಜಿ ದೇಶಮುಖ್‌ ಜನಸಂಘ ಬಿಟ್ಟು ಹೋಗಿ ಚಿತ್ರಕೂಟ ಸೇರಿಕೊಂಡರು. ಆಮೇಲೆ 1984ರ ಸೋಲಿನ ನಂತರ ಆರ್‌ಎಸ್‌ಎಸ್‌ ಅಟಲ್‌ಗಿಂತ ಜಾಸ್ತಿ ಅಡ್ವಾಣಿಯವರನ್ನು ಎತ್ತಿ ಹಿಡಿಯತೊಡಗಿತ್ತು. 1999ರಲ್ಲಂತೂ ವಾಜಪೇಯಿ ಜಸ್ವಂತ ಸಿಂಗ್‌ರನ್ನು ಇನ್ನೇನು ಹಣಕಾಸು ಸಚಿವರಾಗಿ ಮಾಡಬೇಕು ಅನ್ನುವಾಗ ಆಗಿನ ಸರ ಸಂಘಚಾಲಕ ಕೆ.ಸಿ.ಸುದರ್ಶನ್ ಅದನ್ನು ತಡೆದು ಯಶವಂತ ಸಿನ್ಹಾರನ್ನು ಹಣಕಾಸು ಸಚಿವ ಮಾಡಿದರು. ಆಗ ಕೆಟ್ಟ ವಾಜಪೇಯಿ ಹಾಗೂ ಸುದರ್ಶನ್ ಸಂಬಂಧ ಆರ್‌ಎಸ್‌ಎಸ್‌ ಸರ ಸಂಘಚಾಲಕರು ಸಂದರ್ಶನ ಕೊಟ್ಟು ವಾಜಪೇಯಿಯನ್ನು ಟೀಕಿಸುವ ಮಟ್ಟಕ್ಕೆ ಹೋಯಿತು. 2002ರ ಗುಜರಾತ್ ದಂಗೆಗಳ ನಂತರ ಮೋದಿ ಅವರನ್ನು ವಾಜಪೇಯಿ ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಲು ಹೊರಟಾಗ ಅಡ್ವಾಣಿ ಮೂಲಕ ಅದನ್ನು ತಡೆದದ್ದೇ ಆರ್‌ಎಸ್‌ಎಸ್‌. ಆದರೆ ಈಗ 22 ವರ್ಷಗಳ ನಂತರ ಮೋದಿ ಮತ್ತು ಆರ್‌ಎಸ್‌ಎಸ್‌ ಸಂಬಂಧಗಳು ಏರಿಳಿತ ಕಾಣುತ್ತಿವೆ. ಒಟ್ಟಾರೆ ಆರ್‌ಎಸ್‌ಎಸ್‌ಗೆ ಮೋದಿ ಅನಿವಾರ್ಯ ಎಂದು ಗೊತ್ತಿದೆ, ಆದರೆ ಸ್ವಲ್ಪ ಹಿಡಿತ ಸಾಧಿಸುವ ಛಲ ಇದೆ ಅಷ್ಟೇ.

ಸದ್ಯ ಮೋದಿಗೂ ಸಂಘ ಪರಿವಾರ ಬೇಕು, ಜೊತೆಗೆ ಅಧಿಕಾರದ ಮಹತ್ವ ಅರಿತಿರುವ ಪರಿವಾರಕ್ಕೂ ಮೋದಿ ಬೇಕು. ಒಟ್ಟಿನಲ್ಲಿ ಮೋದಿ ಅವರಿಗೆ 75 ತುಂಬಿದಾಗ ಮುಂದೆ ಏನು, ಮೋದಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗಳ ಗೊಂದಲವೇ ಎಲ್ಲರಲ್ಲೂ ಹೆಚ್ಚಾಗಿ ಕಾಡಿರುವುದು ಎದ್ದು ಕಾಣುತ್ತಿದೆ.

Bank Services: ಇಂದು ದೇಶದ ಎರಡು ಪ್ರಮುಖ ಖಾಸಗಿ ಬ್ಯಾಂಕ್‌ಗಳ ಸೇವೆಯಲ್ಲಿ ವ್ಯತ್ಯಯ; 13 ತಾಸು ಸೇವೆ ಬಂದ್‌

Leave A Reply

Your email address will not be published.