V Somanna-Dr Manjunath: ಅಡ್ವಾಣಿ ತೀರಿದರೆಂದು ಶ್ರದ್ಧಾಂಜಲಿ ಸಲ್ಲಿಸಿ ಪೇಚಿಗೆ ಸಿಲುಕಿದ ಸಚಿವ ವಿ ಸೋಮಣ್ಣ ಮತ್ತು ಡಾ ಮಂಜುನಾಥ್ !!

V Simanna -Dr Manjunath: ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ(L K Advani) ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಅವರು ಚೇತರಿಸಿಕೊಂಡಿದ್ದು ಡಿಸ್‌ಚಾರ್ಜ್ ಆಗಿದ್ದಾರೆ. ಆದರೆ ಇದನ್ನು ಗೊಂದಲವಾಗಿಸಿಕೊಂಡ ಕೇಂದ್ರ ಸಚಿವ ವಿ. ಸೋಮಣ್ಣ(V Somanna) ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಸಂಸದ ಡಾ.ಸಿ.ಎನ್. ಮಂಜುನಾಥ್(Dr Manjunath) ಅಡ್ವಾಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

 

 

ಹೌದು, ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಸಂಸದ ಡಾ.ಸಿ.ಎನ್. ಮಂಜುನಾಥ್ ಶನಿವಾರ ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ ನಿಧನರಾಗಿದ್ದಾರೆ ಎಂದು ಘೋಷಿಸಿ, ಕಾರ್ಯಕರ್ತರ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಸುದ್ದಿ ಸುಳ್ಳು ಎಂದು ಗೊತ್ತಾದ ನಂತರ ತಮ್ಮಿಂದ ಆದ ಈ ಅಚಾತುರ್ಯಕ್ಕೆ ಇಬ್ಬರೂ ಕ್ಷಮೆ ಕೋರಿದಂತ ಪ್ರಸಂಗ ನಡೆದಿದೆ.

 

ಅಂದಹಾಗೆ ಗುಬ್ಬಿ(Gubbi)ಯಲ್ಲಿ ಶನಿವಾರ ಬಿಜೆಪಿ(BJP) ಮತ್ತು ಜೆಡಿಎಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರು ನಿಧನರಾಗಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ತಿಳಿಸಿರುವುದಾಗಿ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿ ತಾವು ತಕ್ಷಣ ದಿಲ್ಲಿಗೆ ಪ್ರಯಾಣಿಸಬೇಕಿದ್ದು, ಈ ಕಾರ್ಯಕ್ರಮ ಮುಂದೂಡಬೇಕಿದೆ. ಎಲ್ಲರೂ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಬಹಿರಂಗ ಸಭೆಯಲ್ಲಿಯೇ ವಿ ಸೋಮಣ್ಣ ತಿಳಿಸಿದ್ದರು. ಬಳಿಕ ನಿಜ ಸಂಗತಿ ತಿಳಿದು ಪೇಚಿಗೆ ಸಿಲುಕಿ ವಿಷಾದ ವ್ಯಕ್ತಪಡಿಸಿದರು.

 

ಇನ್ನು ಇತ್ತ ಕುಣಿಗಲ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮಾರಂಭದಲ್ಲಿ ಡಾ ಮಂಜುನಾಥ್ ಅವರಿಗೆ ಅಡ್ವಾಣಿ ಅವರ ನಿಧನದ ಬಗ್ಗೆ ಸುಳ್ಳು ಮಾಹಿತಿ ಬಂದಿತ್ತು. ಸಭೆ ಪ್ರಾರಂಭವಾಗಿ ಸ್ವಾಗತ ಭಾಷಣ ಮಾಡುತ್ತಿದ್ದ ಬಿಜೆಪಿ ಮುಖಂಡ ದೇವರಾಜು, ನಮ್ಮ ಮಾಜಿ ಉಪಪ್ರದಾನಿ ಎಲ್‌.ಕೆ ಅಡ್ವಾಣಿ ಅವರು ಇಹಲೋಕ ತ್ಯಜಿಸಿದ್ದಾರೆ. ಒಂದು ನಿಮಿಷ ಮೌನ ಅಚರಣೆ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಪ್ರಕಟಣೆ ಮಾಡಿದ್ದರು. ಎಲ್ಲರೂ ಮೌನಾಚರಣೆ ಮಾಡಿದರು. ಆದರೆ ವಾಸ್ತವ ಸಂಗತಿ ತಿಳಿದ ಬಳಿಕ ಸಂಸದ ಮಂಜುನಾಥ್ ಅವರು ಸ್ಪಷ್ಟನೆ ನೀಡಿ ಕ್ಷಮೆ ಕೋರಿದರು.

Leave A Reply

Your email address will not be published.