Belthangady: ಅಸಾಮಾನ್ಯ ಶ್ರಮಜೀವಿಯ ಸಾವಿಗೆ ಮರುಗಿದ ಬೆಳ್ತಂಗಡಿ – ತೆಂಗಿನ ಕಾಯಿ ಕೀಳುವಾಗ ಏಣಿ ಜಾರಿ ಬಿದ್ದಿದ್ದ ವಿಶ್ವನಾಥ್ ಗೌಡ ಇನ್ನಿಲ್ಲ !

Belthangady: ಬೆಳಾಲು; ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಪುಚ್ಚೆಹಿತ್ಲು ನಿವಾಸಿ ವೃತ್ತಿಪರ ಆಟೋ ಚಾಲಕರಾಗಿದ್ದ, ಕೃಷಿ ಕಾರ್ಮಿಕರು ಕೂಡ ಆಗಿದ್ದ ವಿಶ್ವನಾಥ್ ಗೌಡ ನಿಧನರಾಗಿದ್ದಾರೆ. 42 ವರ್ಷ ಪ್ರಾಯದ ವಿಶ್ವನಾಥ್ ಪುಚ್ಚೆಹಿತ್ತಿಲು ಅವರು ಜೂ.12ರಂದು ತೆಂಗಿನ ಕಾಯಿ ಕೀಳುವ ಸಂದರ್ಭ ಆಕಸ್ಮಿಕವಾಗಿ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು (ಜೂ.17ರಂದು ಬೆಳಗಿನ ಜಾವ) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅತ್ಯಂತ ಶ್ರಮಜೀವಿಯಾಗಿದ್ದ ವಿಶ್ವನಾಥ್ ಗೌಡರ ಅಕಾಲಿಕ ಸಾವು ಮನೆಯವರನ್ನು ಮತ್ತು ಇಡೀ ಊರನ್ನು ಮೌನವಾಗಿಸಿದೆ.

 

ಮೃತರು ಪತ್ನಿ ದಮಯಂತಿ, ಮಕ್ಕಳಾದ ಅಭಿಜ್ಞಾ, ಅಭಯ್ ಹಾಗೂ ತಂದೆ ಲೋಕಯ್ಯ ಗೌಡ, ತಾಯಿ ಲೋಕಮ್ಮ ಸಹೋದರ ಶ್ರೀನಿವಾಸ ಗೌಡ, ಸಹೋದರಿಯರಾದ ಜಾನಕಿ, ಸುರೇಖಾರವರನ್ನು ಅಗಲಿದ್ದಾರೆ.

ಅಡಿಕೆ ಮರಕ್ಕೆ ಏಣಿ ಇಟ್ಟು ಕಟ್ಟಿ ಅಲ್ಲಿಂದ ತೆಂಗಿನ ಕಾಯಿ ಕೀಳಲು ಹೋದಾಗ ಏಣಿಯ ಹಗ್ಗ ಕಳಚಿಕೊಂಡಾಗ ಅವರು ಕೆಳಗೆ ಬಿದ್ದು ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದರು. ಸೂಕ್ತ ಛತ್ರ ಚಿಕಿತ್ಸೆ ಕೈಗೊಂಡರೂ ಅದು ಫಲಕಾರಿಯಾಗದೆ ಇದೀಗ ಅವರು ಮೃತಪಟ್ಟಿದ್ದಾರೆ. ತೀರಾ ಶ್ರಮಜೀವಿಯಾಗಿದ್ದ ಅವರ ಅತ್ಯಂತ ವೇಗದ ಕೆಲಸವೇ ಅವರಿಗೆ ಮುಳುವಾಯಿತೇ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಇದೀಗ ಅವರ ಬಂಧು ವರ್ಗದವರು ಕಣ್ಣೀರು ಹಾಕುತ್ತಿದ್ದಾರೆ.

Leave A Reply

Your email address will not be published.