Puttur: ಪಥ ಬದಲಿಸಿದ ಕಾಡಾನೆ : ಕುಚ್ಚೆಜಾಲಿನಲ್ಲಿ ಕೃಷಿ ಹಾನಿಗೈದು ಸವಣೂರಿಗೆ ಎಂಟ್ರಿ !

Puttur: ಸವಣೂರು: ಕೆಲವು ತಿಂಗಳುಗಳ ಹಿಂದೆ ಕೊಳ್ತಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗದ್ದಲ ಎಬ್ಬಿಸಿರುವ ಒಂಟಿ ಸಲಗ ತನ್ನ ಪ್ರಯಾಣವನ್ನು ಪುಣ್ಚಪ್ಪಾಡಿ ಗ್ರಾಮದಿಂದ ಹೊರಟು ಸವಣೂರು ಕಡೆಗೆ ಬಂದಿದೆ.

ಜೂ.7ರಂದು ಪುಣ್ಚಪ್ಪಾಡಿ ಗ್ರಾಮದ ಬೆದ್ರಂಪಾಡಿ ಅರಣ್ಯದಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಪುಣ್ಚಪ್ಪಾಡಿ ಗ್ರಾಮದ ಕುಚ್ಚೆಜಾಲು ಮೂಲಕ ಸವಣೂರು ಗ್ರಾಮಕ್ಕೆ ಬಂದಿದೆ ಎನ್ನಲಾಗಿದೆ. ಸವಣೂರಿನ ಕೊಂಬಕೆರೆಗೆ ಆನೆ ಬಂದ ಹೆಜ್ಜೆ ಗುರುತು ಇದ್ದು,ರೈಲ್ವೇ ಹಳಿಯಲ್ಲಿ ಆನೆಯ ಲದ್ದಿ ಕಾಣಿಸಿದೆ.

ಪುಣ್ಚಪ್ಪಾಡಿ ಗ್ರಾಮದ ಬೆದ್ರಂಪಾಡಿ ಕಾಡಿನಲ್ಲಿ ಬೀಡು ಬಿಟ್ಟಿದ್ದ ಕಾಡಾನೆಯನ್ನು ಓಡಿಸಲು ಅರಣ್ಯ ಇಲಾಖೆಯ ಸಿಬಂದಿಗಳು ಕಾಡಿನಲ್ಲಿ ತೆರಳಿ ಸಿಡಿಮದ್ದು ,ಗರ್ನಾಲ್ ಸಿಡಿಸಿ ಪ್ರಯತ್ನಿಸಿದರೂ ಆನೆ ಕಾಡಿನಿಂದ ಕದಲದೆ ಬೈನೆ ಮರ ಹಾಗೂ ಇತರ ಮರಗಳನ್ನು ಮುರಿದು ಪುಡಿಮಾಡಿದೆ.ಅಲ್ಲದೆ ಕುಚ್ಚೆಜಾಲು ಸುತ್ತಮುತ್ತ ಬಾಳೆ ಗಿಡ ಹಾಗೂ ತೆಂಗಿನ ಗಿಡಗಳಿಗೆ ಹಾನಿ ಮಾಡಿದೆ.

ಜೂ.3ರಂದು ಪಾಲ್ತಾಡಿ ಗ್ರಾಮದ ಅಸಂತಡ್ಕ ,ಖಂಡಿಗೆಗೆ ಆಗಮಿಸಿದ ಆನೆ ಜೂ.4ರಂದು ರಾತ್ರಿ ಮಲೆಮಾಡಾವಿನಲ್ಲಿ ಕೃಷಿಕರ ತೋಟದಲ್ಲಿದ್ದ ಬಾಳೆ ಗಿಡ,ಹಲಸಿನ ಹಣ್ಣುಗಳನ್ನು ತಿಂದು,ಕೆಯ್ಯೂರು ಗ್ರಾಮದ ಬೊಳಿಕಳ ಮೂಲಕ ಪುಣ್ಚಪ್ಪಾಡಿ ಗ್ರಾಮದ ಅಂಜಯ,ನೂಜಾಜೆ,ನೆಕ್ರಾಜೆಗೆ ಬಂದು ಕೃಷಿ ಹಾನಿ ಮಾಡಿದೆ‌.
ಜೂ.6ರಂದು ಮುಂಜಾನೆ 3 ಗಂಟೆಯ ತನಕ ಅರಣ್ಯಾಧಿಕಾರಿಗಳು ನೂಜಾಜೆಯಲ್ಲಿ ಬೀಡು ಬಿಟ್ಟಿದ್ದರು.ಜೂ.6ರಂದು ಬೆಳಿಗ್ಗೆ ಕಾಡಾನೆ ಕೆಯ್ಯೂರು ಗ್ರಾಮದ ತೆಗ್ಗು ,ಎರಬೈಲು,ಓಲೆಮುಂಡೋವು ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು.

ಇದೀಗ ಜೂ.6ರಂದು ರಾತ್ರಿ ಪುಣ್ಚಪ್ಪಾಡಿ ಗ್ರಾಮಕ್ಕೆ ಮತ್ತೆ ಕಾಡಾನೆ ಬಂದು ಸಾರಕರೆಯಲ್ಲಿ ಕೃಷಿ ಹಾನಿ ಮಾಡಿತ್ತು.ಜೂ.7ರಂದು ರಾತ್ರಿಯವರೆಗೂ ಬೆದ್ರಂಪಾಡಿ ಕಾಡಿನಲ್ಲಿದ್ದ ಆನೆ ಬಂದ ಪಥ ಬದಲಿಸಿ ಸವಣೂರು ಕಡೆಗೆ ಬಂದಿದೆ.

Leave A Reply

Your email address will not be published.