Akshaya Tritiya 2024: 23 ವರ್ಷದ ಬಳಿಕ ಈ ಅಕ್ಷಯ ತೃತೀಯದಂದು ಒಂದು ಶುಭಕಾರ್ಯಕ್ಕೆ ಫಲವಿಲ್ಲವಂತೆ !
Akshaya Tritiya 2024: ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಅಕ್ಷಯ ತೃತೀಯವೂ (Akshaya Tritiya 2024) ಒಂದು. ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಈ ದಿನಕ್ಕೆ ಅಪಾರ ಮಹತ್ವವಿದೆ. ಅಕ್ಷಯ ತೃತೀಯ ಹಬ್ಬವು ಮುಖ್ಯವಾಗಿ ಅದೃಷ್ಟದ ಹಬ್ಬ ಎನ್ನಲಾಗುತ್ತದೆ. ಈ ದಿನ ಗಳಿಸಿದ ಪುಣ್ಯ ಎಂದಿಗೂ ಮುಗಿಯುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗೆಯೇ, ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಮಾಡಬಹುದು.
ಇನ್ನು ಅಕ್ಷಯ ತೃತೀಯ ಹಬ್ಬವನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ದಿನದಂದು ಆಚರಿಸಲಾಗುತ್ತದೆ. ಅದೇ ರೀತಿ ಅಕ್ಷಯ ತೃತೀಯ ಈ ವರ್ಷ ಮೇ 10 ರಂದು ಶುಕ್ರವಾರ ಈ ಬಾರಿ ಆಚರಿಸಲಾಗುತ್ತಿದೆ. 2024 ರ ಅಕ್ಷಯ ತೃತೀಯ ಪೂಜೆ ಮುಹೂರ್ತವು ಬೆಳಗ್ಗೆ 5:33 ರಿಂದ ಮಧ್ಯಾಹ್ನ 12:18 ರವರೆಗೆ ಇರುತ್ತದೆ. ತೃತೀಯಾ ತಿಥಿಯು ಮೇ 10 ರಂದು ಬೆಳಗ್ಗೆ 4:17 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಮೇ 11 ರಂದು 2:50 AM ಕ್ಕೆ ಅಕ್ಷಯ ತೃತೀಯ ಮುಗಿಯುತ್ತದೆ.
ಅಕ್ಷಯ ತೃತೀಯವು ಮಂಗಳಕರವಾದ ದಿನವಾಗಿದ್ದು, ಚಿನ್ನವನ್ನು ಖರೀದಿಸುವುದು, ಹೊಸ ವ್ಯವಹಾರಗಳನ್ನು ಪ್ರಾರಂಭಿಸುವುದು ಮತ್ತು ಮದುವೆ ಮುಂತಾದ ಶುಭ ಕಾರ್ಯಗಳನ್ನು ಮಾಡಿದರೆ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ಈ ದಿನ ಮದುವೆಯನ್ನ ಸಹ ಮಾಡಬಹುದು ಎನ್ನುವ ನಂಬಿಕೆ ಇದೆ. ಆದರೆ ಈ ವರ್ಷದ ಅಕ್ಷಯ ತೃತೀಯ ಹಬ್ಬದ ದಿನ ಯಾವುದೇ ಮದುವೆಯ ಮುಹೂರ್ತವಿಲ್ಲ ಎನ್ನಲಾಗುತ್ತಿದೆ.
ಈ ವರ್ಷ, ಅಂದರೆ 2024 ರ ಅಕ್ಷಯ ತೃತೀಯವು ಶುಭ ಕಾರ್ಯಗಳಿಗೆ, ವಿಶೇಷವಾಗಿ ಮದುವೆಗಳಿಗೆ ಸೂಕ್ತವಲ್ಲ ಎನ್ನಲಾಗುತ್ತದೆ. ಕಳೆದ 23 ವರ್ಷಗಳಲ್ಲಿ ಈ ರೀತಿ ಎಂದೂ ಆಗಿರಲಿಲ್ಲ ಎನ್ನುತ್ತಾರೆ ಪಂಡಿತರು. ಮುಖ್ಯವಾಗಿ ಶುಕ್ರ ಮತ್ತು ಗುರುಗಳು ವಿಶೇಷ ಸ್ಥಾನದಲ್ಲಿರುವುದು ಇದಕ್ಕೆ ಕಾರಣ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಈ ವರ್ಷ, ಮೇ 10 ರಂದು ಗುರು ಮತ್ತು ಶುಕ್ರನ ಸ್ಥಾನ ಒಂದೇ ರಾಶಿಯಲ್ಲಿ ಇರುತ್ತದೆ ಹಾಗೂ ಅಸ್ತಮಿಸುತ್ತದೆ. ಅಂದರೆ ಗುರು ಗ್ರಹವು ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಸಂಬಂಧ ಹೊಂದಿದೆ. ಶುಕ್ರವು ಪ್ರೀತಿ ಮತ್ತು ವೈವಾಹಿಕ ಸಂತೋಷದ ಗ್ರಹ ಎನ್ನಲಾಗುತ್ತದೆ. ಈ ಎರಡು ಗ್ರಹಗಳು ಒಂದೇ ಸಮಯದಲ್ಲಿ ಅಸ್ತಮಿಸುವುದು ಒಳ್ಳೆಯ ಫಲ ಅಲ್ಲ . ಆದರೆ ಈ ಗ್ರಹಗಳು ಒಂದೇ ಸಮಯದಲ್ಲಿ ಉದಯಿಸಿದರೆ, ಮದುವೆಯು ಮಂಗಳಕರವೆಂದು ಹೇಳಲಾಗುತ್ತದೆ.