HD Revanna: ಹೆಚ್.ಡಿ.ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡ; ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು
HD Revanna: ಕರ್ನಾಟಕದಾದ್ಯಂತ ಇತ್ತೀಚೆಗೆ ಪೆನ್‌ಡ್ರೈವ್ ಪ್ರಕರಣದ ಸುದ್ದಿಯೇ ತುಂಬಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಹೆಚ್‌ಡಿ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ದಾಖಲಾಗಿದ್ದು, ತನಿಖೆಯ ಮುಂದುವರಿದ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು ಇಂದು ಹೊಳೆನರಸೀಪುರದ ನಿವಾಸಕ್ಕೆ ಸ್ಥಳ ಮಹಜರು ಮಾಡಲು ಹೋಗಿದ್ದು, ಈ ಸಂದರ್ಭದಲ್ಲಿ ಸಂತ್ರಸ್ತೆ ಕೂಡಾ ಸ್ಥಳದಲ್ಲಿ ಇದ್ದರು.
ಮಹಿಳೆಯ ಅಪಹರಣ ಆರೋಪ, ಲೈಂಗಿಕ ಕಿರುಕುಳದ ಆರೋಪದಲ್ಲಿ ಸಿಲುಕಿರುವ ಹೆಚ್‌ಡಿ ರೇವಣ್ಣ ಅವರ ಮನೆಯ ಅಡುಗೆ ಕೋಣೆ, ಬೆಡ್‌ರೂಂ, ಹಾಗೂ ಸ್ಟೋರ್ ರೂಂ ನಲ್ಲಿ ಪೊಲೀಸರು ಸಂತ್ರಸ್ತೆಯ ಸಮ್ಮುಖದಲ್ಲಿ ಸ್ಥಳ ಮಹಜರು ಕಾರ್ಯ ಮಾಡಿದ್ದಾರೆ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಇಲ್ಲದ ಸಮಯದಲ್ಲಿ ಈ ಮೂರು ಕಡೆಗಳಲ್ಲಿ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.
ಡಿವೈಎಸ್‍ಪಿ ಸತ್ಯ ನಾರಾಯಣ್ ಸಿಂಗ್, ಸುಮರಾಣಿ ನೇತೃತ್ವದ ಎಸ್‍ಐಟಿ ತಂಡ ಪರಿಶೀಲನೆ ನಡೆಸುತ್ತಿದೆ. ಮನೆಯಲ್ಲಿ ಹೆಚ್.ಡಿ ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಇದ್ದು, ಮನೆಯ ಬಳಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಪೊಲೀಸರು, ಇನ್ಸ್‌ಪೆಕ್ಟರ್ ಸುರೇಶ್‍ಕುಮಾರ್ ಹಾಗೂ ಸಬ್‍ಇನ್ಸ್‍ಪೆಕ್ಟರ್ ಅಜಯ್‍ಕುಮಾರ್ ಸ್ಥಳ ಮಹಜರು ಸಂದರ್ಭ ಎಸ್‍ಐಟಿ ತಂಡಕ್ಕೆ ಸಹಕಾರ ನೀಡಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸರು ಮನೆಯಲ್ಲಿದ್ದ ಸಿಪಿಯು, ಮಾನೀಟರ್, ಪ್ರಿಂಟರ್ ಇತ್ಯಾದಿಗಳನ್ನೂ ವಶಕ್ಕೆ ಪಡೆದಿದ್ದಾರೆ.