Dakshina Kannada: ಸೌಜನ್ಯ NOTA ಚಳವಳಿಗೆ ಇನ್ನೂ ಧುಮುಕದ ಒಕ್ಕಲಿಗರ ಸಂಘಗಳು; ನಾಯಕರೇ ಸಾವಾಗಿರೋದು ನಿಮ್ಮ ಮನೆಯಲ್ಲಿ !!!

Dakshina Kannada: ಕರಾವಳಿ ಹೊತ್ತಿಕೊಂಡು ಉರಿಯುತ್ತಿದೆ. ಆದರೆ ಕರಾವಳಿಯ ಒಕ್ಕಲಿಗರು ತಮಗೆ ಇದ್ಯಾವುದೂ ಸಂಬಂಧ ಇಲ್ಲವೆನ್ನುವಂತೆ ಗಾಢ ನಿದ್ದೆಗೆ ಬಿದ್ದಿದ್ದಾರೆ. ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಒಕ್ಕಲಿಗರಿದ್ದಾರೆಯೇ ಎಂದು ಕೇಳುವ ಹಾಗಿದೆ ಅವರ ಈ ಅಸಹನೀಯ ಮೌನ. ಕರಾವಳಿಯಲ್ಲಿ ಒಕ್ಕಲಿಗರದು ಬಹುದೊಡ್ಡ ಸಮುದಾಯ. ಜನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿ ಗೌಡರು ಯಾನೆ ಒಕ್ಕಲಿಗರಿದ್ದಾರೆ. ಹೋಬಳಿಗೊಂದು, ತಾಲ್ಲೂಕಿಗೊಂದು, ಜಿಲ್ಲೆಗೊಂದು ಎಂಬಂತೆ ಸಂಘ ಕಟ್ಟಿಕೊಂಡು ಏನಾದರೂ ಒಂದು ಚಟುವಟಿಕೆಯಲ್ಲಿ ಇರುವ ಇವರ ದನಿ ಒಮ್ಮೆಲೆ ಅಡಗಿದೆ. ಯಾರದ್ದೂ ಸದ್ದೇ ಇಲ್ಲ !! ಇಂತಹ ಸ್ಥಿತಿ ಅವರಿಗೆ ಬರಬಾರದಿತ್ತು !!

 

ಇದನ್ನೂ ಓದಿ: Canada: ‘ಡಾಕ್ಟ್ರೇ, ಡಾಕ್ಟ್ರೇ ಪ್ಲೀಸ್ ಈ ಎರಡು ಕೈ ಬೆರಳು ಕತ್ತರಿಸಿ’ ಎಂದು ಹಠ ಹಿಡಿದ ಯುವಕ – ಕಾರಣ ?

ಸ್ಸಾರಿ, ಒಂದು ಸಣ್ಣ ಕರೆಕ್ಷನ್. ಕರಾವಳಿಯಲ್ಲಿ ಒಕ್ಕಲಿಗ ನಾಯಕರೇ ಇಲ್ಲವಾಗಿದ್ದಾರೆ ಅಂತ ಓದಿಕೊಳ್ಳಿ !! ಗೌಡರ ಯಾನೆ ಒಕ್ಕಲಿಗರ ಸಂಘಗಳು ತಮ್ಮದೇ ಸಮುದಾಯದ ಹುಡುಗಿಗೆ ನ್ಯಾಯ ಕೊಡಿಸಲು ಸಂಪೂರ್ಣ ನಿಷ್ಕ್ರಿಯವಾಗಿವೆ. ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಕಳೆದ ಹನ್ನೆರಡು ವರ್ಷದ ಹಿಂದೆ ಒಕ್ಕಲಿಗರ ನಾಯಕತ್ವ ಸಹಾಯ ಮಾಡಲಿಲ್ಲ. ಅದೆಲ್ಲ, ಹೋಗಲಿ ಈಗ 12 ವರ್ಷಗಳಾದರೂ ಹೋರಾಟ ತೀವ್ರವಾದಾಗಲೂ ಒಕ್ಕಲಿಗರ ಸಂಘಗಳಾಗಲಿ, ನಾಯಕತ್ವಗಳಾಗಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಕಳೆದ ಆರು ತಿಂಗಳ ಹಿಂದೆ ಒಮ್ಮೆ ಗೌಡರು ಯಾನೆ ಒಕ್ಕಲಿಗರು ಎದ್ದು ನಿಂತ ಹಾಗೆ ಕಂಡಿತ್ತು. ಸೌಜನ್ಯಾ ಹೋರಾಟ (Soujanya Protest) ಸಮಿತಿ ರಚನೆ ಆಗಿತ್ತು. ಆದರೆ ಈಗ ಪದಾಧಿಕಾರಿಗಳು ತಮಗೆ ಸ್ಥಾನಮಾನ ಸಿಕ್ಕ ನಂತರ ಸಪ್ಪಗೆ ಆಗಿದ್ದಾರೆ.

ಇದನ್ನೂ ಓದಿ: Suicide: ಖ್ಯಾತ ಯೌಟ್ಯೂಬ್ ಜೋಡಿ 7 ಅಂತಸ್ತಿನ ಅಪಾರ್ಟ್ಮೆಂಟ್ ನಿಂದ ಹಾರಿ ಆತ್ಮಹತ್ಯೆ

NOTA ಚಳವಳಿ ಮಾಡೋದು ಕೇವಲ ಮಹೇಶ್ ಶೆಟ್ಟಿ ತಿಮರೋಡಿ ತಂಡದ ಕೆಲಸವಲ್ಲ:

ತನಗೇನೂ ಸಂಬಂಧವೇ ಇಲ್ಲದೆ, ತಮಗೇನೂ ಅಗತ್ಯವೇ ಇಲ್ಲದೇ ಹೋದರೂ ತನ್ನ ಮನೆಯಲ್ಲೇ ಚಿತೆ ಇನ್ನೂ ಉರಿಯುತ್ತಿದೆ ಎನ್ನುವಂತೆ ಸುಮಾರು 12 ವರ್ಷಗಳಿಂದಲೂ ಎಡೆಬಿಡದೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇಡೀ ಸೌಜನ್ಯ ಪರ ಹೋರಾಟಗಾರರು ಹೋರಾಡುತ್ತಿದ್ದಾರೆ. ಅವನೊಬ್ಬ ದೈತ್ಯ ಶಕ್ತಿಯ ಗಿರೀಶ್ ಮಟ್ಟಣ್ಣನವರ್ ಇದ್ದಾನಲ್ಲ, ಬರೋಬ್ಬರಿ 13 ಗಂಟೆಗಳ ಕಾಲ ಡ್ರೈವ್ ಮಾಡಿಕೊಂಡು ತನ್ನ ಊರು ಯಾದಗಿರಿ ಜಿಲ್ಲೆಯ ಗುರುಮಿಟಕಲ್ ನಿಂದ ಬಂದು ಧರ್ಮಸ್ಥಳದಲ್ಲಿ ಸೌಜನ್ಯ ಪರ ಹೋರಾಟಕ್ಕೆ ಬರುತ್ತಾನೆ. ಎಲ್ಲಿಯ ಗುರುಮಿಟಕಲ್, ಎಲ್ಲಿಯ ಧರ್ಮಸ್ಥಳದ ಪಾಂಗಳದ ಸೌಜನ್ಯಾ ?! 600 ಕಿಲೋಮೀಟರು ದೂರದಿಂದ ಬಂದು ಹೋರಾಟ, ಕೋರ್ಟ್, ಹೈಕೋರ್ಟ್ ಪೋಲಿಸ್ ಸ್ಟೇಷನ್ ಇತ್ಯಾದಿಯಾಗಿ ಅಲೆಯುತ್ತಿದ್ದಾರೆ. ತಮ್ಮಣ್ಣ ಶೆಟ್ಟಿ ಜತೆಗೆ ಪ್ರಸನ್ನ ರವಿ ಎಂಬ ಹೆಣ್ಣುಮಗಳು ಕಣ್ಣೀರು ಕರೆಯುತ್ತಾ, ನಿಮ್ಮ ಒಕ್ಕಲಿಗ ಹೆಣ್ಣುಮಗಳಾದ ಸೌಜನ್ಯ ಸಾವಿಗೆ ನ್ಯಾಯ ಕೊಡಿಸಲು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಅವರಿಗೆಲ್ಲ ಸೌಜನ್ಯ ಹೋರಾಟದಲ್ಲಿ ಕೊಡಲು ಸಮಯವಿದೆ. ನಿಜಕ್ಕೂ ಸೌಜನ್ಯಾಗೆ ನ್ಯಾಯ ಕೊಡಿಸುವ ಕೆಲಸ ನಿಮ್ಮ ಸಮುದಾಯದ್ದು. ಈಗ ಸೌಜನ್ಯ ಹೋರಾಟದ ಭಾಗವಾಗಿ ನೋಟಾ ಚಳವಳಿ ಬೇರೆ ರೂಪಗೊಂಡಿದೆ. ಇಲ್ಲಿಯಾದರೂ ಒಕ್ಕಲಿಗ ನಾಯಕರು ಮುಂಚೂಣಿಯಲ್ಲಿ ನಿಂತು ನೋಟಾಗೆ ಬೆಂಬಲ ಕ್ರೋಢೀಕರಿಸಲು ಬರುತ್ತಾರೆಂಬ ನಂಬಿಕೆಯಿತ್ತು. ಆದರೆ ಈಗ ಎಲ್ಲವೂ ಹುಸಿಯಾಗಿದೆ. ನೀವೆಲ್ಲ ನಿಮ್ಮದೇ ಪಕ್ಷಗಳ ಪುಢಾರಿಗಳ ಕಲರ್ ಫುಲ್ ಮಾತುಗಳನ್ನು ಕೇಳಿಕೊಂಡು ಬಣ್ಣ ಬಣ್ಣದ ಶಾಲುಗಳನ್ನು ಕುತ್ತಿಗೆಗೆ ಸುತ್ತಿಕೊಂಡು ಬಾಯಿ-ಗಂಟಲು ತೆರೆಯದ ಹಾಗೆ ಮಾಡಿಕೊಂಡಿದ್ದೀರಿ.

ನಿಮ್ಮ ಪಕ್ಷ ಪ್ರೀತಿ ನಿಮಗೆ ಏನು ಕೊಟ್ಟಿದೆ ಗೌಡರೇ ?!

ಬಹುಸಂಖ್ಯಾತ ಗೌಡರೇ, ಚುನಾವಣೆಗಳಲ್ಲಿ ಇಂತಹಾ ಪಕ್ಷವೇ ಬೇಕು, ನಮ್ಮವರೇ ಗೆಲ್ಲಬೇಕೆಂದು ಆರಿಸಿ, ಗೆಲ್ಲಿಸಿ ನೂರಾರು ಜನರನ್ನು ಸಂಸದರನ್ನಾಗಿ ಮಾಡಿದಿರಿ, ಶಾಸಕರಾಗಿ ಮಾಡಿದಿರಿ, ಕೇಂದ್ರ ಮಂತ್ರಿ ಮಾಡಿದಿರಿ, ಮುಖ್ಯಮಂತ್ರಿಗಳನ್ನಾಗಿಯೂ ಮಾಡಿದಿರಿ. ಆದ್ರೆ ಅವರು ನಿಮಗೆ ಏನು ಮಾಡಿದರು? ಹೌದು, ಸೌಜನ್ಯ ಹತ್ಯೆ ಘಟನೆ ನಡೆದಾಗ ನಿಮ್ಮದೇ ಒಕ್ಕಲಿಗ ಸಮುದಾಯದ ಕರಾವಳಿಯ ಸದಾನಂದ ಗೌಡ ಪ್ರಕರಣ ಹಳ್ಳ ಹಿಡಿಯುವ ಹಾಗೆ ನೋಡಿಕೊಂಡರು. ಆಗ ತಾನೇ ಅವರು ತಮ್ಮ ಗುರು ಯಡಿಯೂರಪ್ಪನವರಿಗೆ ಮೋಸ ಮಾಡಿ ಮುಖ್ಯಮಂತ್ರಿ ಪಟ್ಟದಲ್ಲಿ ಬಂದು ಕೂತಿದ್ದರು. ಅಲ್ಲದೆ, ಆಗ ಅದೇ ಸಮುದಾಯದ ಆರ್ ಅಶೋಕ್ ಗೃಹಮಂತ್ರಿಯಾಗಿದ್ದರು. ಇದೀಗ ಕೆಲ ಸಮಯದಿಂದ ಶೋಭಕ್ಕ ಸಂಸದೆಯಾಗಿ, ಕೇಂದ್ರ ಮಂತ್ರಿಯಾಗಿದ್ದಾರೆ. ಶ್ರೀಮಾನ್ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಸಿಟಿ ರವಿ ಅವರು ದ.ಕ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದರು. ಎಲ್ಲರೂ ಒಕ್ಕಲಿಗರೇ, ಆದರೆ ಯಾರು ನಿಮಗೆ ಸಹಾಯ ಮಾಡಿದರು? ಯಾವ ಪಕ್ಷ ನಿಮ್ಮ ಸಹಾಯಕ್ಕೆ ಬಂತು ಬಾಸ್ ?!

ಕರಾವಳಿ ಒಕ್ಕಲಿಗರೇ, ಮತ್ತೆ ಕೇಳಿ, ನಿಮಗೆ ಬೇರಾವ ಪ್ರದೇಶದ ಒಕ್ಕಲಿಗರ ಶಕ್ತಿ, ಪ್ರೋತ್ಸಾಹ, ಬೆಂಬಲ ಬೇಡ. ನಿಮಗೆ ನೀವೇ ಸಾಕು. ಈಗಲಾದರೂ ಎಚ್ಚೆತ್ತುಕೊಳ್ಳಿ. ಸಾವಾಗಿರುವುದು ನಿಮ್ಮ ಮನೆಯಲ್ಲಿ! ಲೋಕಸಭಾ ಚುನಾವಣೆ ಹತ್ತಿರಾಗುತ್ತಿದೆ. ಒಂದು ಕ್ಷೇತ್ರದ ನಾಯಕನನ್ನು ಯಾರ ಹಂಗಿಲ್ಲದೆ ಬರೀ ನಿಮ್ಮ ಸಮುದಾಯದ ವೋಟಿನಿಂದಲೇ ಗೆಲ್ಲಿಸುವಷ್ಟು ತಾಕತ್ತು ನಿಮ್ಮ ಸಮುದಾಯಕ್ಕಿದೆ. ಇಡೀ ಸರ್ಕಾರವನ್ನೇ ನಡುಗಿಸುವ ತಾಕತ್ತು ನಿಮಗಿದೆ. ಈಗ ಸ್ವಾರ್ಥಕ್ಕಾಗಿ ಅಲ್ಲದೆ ಒಂದು ಹೆಣ್ಣು ಮಗಳ ಸಾವಿಗಾಗಿ ಪ್ರತೀಕಾರ ತೆಗೆದುಕೊಳ್ಳುವ ಪಣತೊಡಿ. ನೀವು ಮನಸ್ಸು ಮಾಡಿದರೆ ನಿಮ್ಮ ಮನೆಯ ಮಗಳಿಗೆ ನ್ಯಾಯ ಕೊಡಿಸಬಹುದು. ಈಗಲೂ ಕಾಲ ಮಿಂಚಿಲ್ಲ. ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ NOTA ಚಳವಳಿಗೆ ದೊಡ್ಡದಾಗಿ ಇಳಿಯಿರಿ. ಎಲ್ಲಾ ಗೌಡರ ಸಂಘಗಳು ತಕ್ಷಣಕ್ಕೆ ಫೀಲ್ಡ್ ಗೆ ಇಳಿದು ಮನೆ ಮನೆ ಭೇಟಿ ಕೊಟ್ಟು ಬೆಂಬಲ ಪಡೆದು ಕೊಳ್ಳಿ. ಈ ಸಲ, ಒಂದು ಮಹಾನ್ ಅವಕಾಶ ಕೂಡಿಬಂದಿದೆ. ಬನ್ನಿ, ಒಗ್ಗಟ್ಟಾಗಿ NOTA ಕ್ಕಾಗಿ ದುಡಿಯೋಣ. ಲಕ್ಷಾಂತರ ಓಟು ನೋಟಾಕ್ಕೆ ಹಾಕಿಸಿ ದೆಹಲಿಯ ಸಂಸತ್ತು ಮತ್ತು ಸುಪ್ರೀಂ ಕೋರ್ಟಿನ ಗಮನ ಸೆಳೆಯೋಣ !

Leave A Reply

Your email address will not be published.