Exam: 5, 8, 9ನೇ ಕ್ಲಾಸ್ ಮಕ್ಕಳಿಗೆ ಮತ್ತೆ ಪರೀಕ್ಷೆ
Exam: ರಾಜ್ಯ ಪಠ್ಯಕ್ರಮದ ಶಾಲೆಗಳ 5,8,9 ತರಗತಿಯ ಮಕ್ಕಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ ಮೌಲ್ಯಾಂಕನ ಪರೀಕ್ಷೆ ಕೆಲ ಖಾಸಗಿ ಶಾಲೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ವಿವಿದೆಡೆ ಖಾಸಗಿ ಶಾಲೆಗಳು ಶಾಲಾ ಮಟ್ಟದಲ್ಲಿ ತಮ್ಮದೇ ಆದ ಮತ್ತೊಂದು ಪರೀಕ್ಷೆಯನ್ನು ಮಾಡಲು ತಯಾರಿ ಮಾಡಿಕೊಂಡಿದೆ. ಈ ಕುರಿತು ಮಕ್ಕಳು ಹಾಗೂ ಪೋಷಕರಿಗೆ ಮಾಹಿತಿಯನ್ನು ನೀಡಲಾಗಿದೆ.
ಮಕ್ಕಳಿಗೆ ಏ. 11 ರಿಂದ ಬೇಸಿಗೆ ರಜೆ ಪ್ರಾರಂಭವಾಗಲಿದ್ದು, ಅಷ್ಟರೊಳಗೆ ಪರೀಕ್ಷೆ ಮುಗಿಸಲು ಶಾಲೆಗಳು ಮುಂದಾಗಿದೆಯೆಂದು ವರದಿಯಾಗಿದೆ.
ಈಗಷ್ಟೇ ಪರೀಕ್ಷೆ ಎಲ್ಲಾ ಮುಗಿದು ನಿರಾಳವಾಗಿದ್ದ ಮಕ್ಕಳಿಗೆ ಮತ್ತೊಂದು ಪರೀಕ್ಷೆಯ ಹೊರೆ ಬಿದ್ದಿದೆ. ಇದನ್ನು ತಪ್ಪಿಸಲು ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪೋಷಕರ ವಲಯದಲ್ಲಿ ಮಾತು ಬರುತ್ತಿದೆ.
ಬೆಂಗಳೂರಿನ ರಾಜಾಜಿನಗರದ ಶಾಲೆ 5,8,9 ನೇ ತರಗತಿ ಮಕ್ಕಳಿಗೆ ಮತ್ತೊಮ್ಮೆ ಪರೀಕ್ಷೆ ನಡೆಸುವುದಾಗಿ ಪೋಷಕರಿಗೆ ಹೇಳಿದೆ.
ತುಮಕೂರಿನ ಸರಸ್ವತಿಪುರಂನ ಪ್ರತಿಷ್ಠಿತ ಶಾಲೆ, ಗುಬ್ಬಿ ಪಟ್ಟಣದಲ್ಲಿ ಇರುವ ಪ್ರಮುಖ ಶಾಲೆಯಲ್ಲಿ ಕೂಡಾ ಸೋಮವಾರ ಪರೀಕ್ಷೆ ಇದ್ದು, ಮಕ್ಕಳು ಬರಲೇಬೇಕೆಂದು ಸೂಚನೆ ನೀಡಿದೆ. ಪೋಷಕರು ಈ ಕುರಿತು ಪ್ರಶ್ನೆ ಮಾಡಿದರೆ ಬೋರ್ಡ್ ಪರೀಕ್ಷೆ ಸರಕಾರದ ಮಾಹಿತಿಗಷ್ಟೇ ಎಂದು ಹೇಳಿದ್ದು, ಶಾಲೆಯಿಂದ ನೀಡುವ ಅಂಕಪಟ್ಟಿಯಲ್ಲಿ ಈಗ ನಡೆಸುವ ಶಾಲಾ ಮಟ್ಟದ ಪರೀಕ್ಷೆಯ ಅಂಕಗಳನ್ನು ದಾಖಲು ಮಾಡುತ್ತೇವೆ ಎಂದು ಪೋಷಕರಿಗೆ ಹೇಳಿದ್ದಾಗಿ ವರದಿಯಾಗಿದೆ.
ಪರೀಕ್ಷೆ ಮಾಡಲು ಕಾರಣ?
ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮದ ಶಾಲೆ ಎಂದು ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿರುವ ಶಾಲೆಗಳು ಇಂತಹ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ. ಸರಕಾರ ನೀಡುವ ಪಠ್ಯಕ್ರಮದ ಬದಲು ಖಾಸಗಿ ಪುಸ್ತಕಗಳನ್ನು ಮಕ್ಕಳಿಗೆ ಕೆಲವು ಶಾಲೆಗಳು ಬೋಧಿಸಿದೆ. ಹಾಗಾಗಿ ಉತ್ತಮ ಫಲಿತಾಂಶ ಬಂದಿಲ್ಲ. ಬೋರ್ಡ್ ಪರೀಕ್ಷೆ ಸರಕಾರ ಮಾಡಿದರೂ, ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಪ್ರಕಟಣೆ ಎಲ್ಲವೂ ಶಾಲೆಯಲ್ಲೇ ನಡೆಯುತ್ತದೆ. ಹಾಗಾಗಿ ಬೋರ್ಡ್ ಪರೀಕ್ಷೆಯ ಅಂಕಗಳನ್ನು ಅಂಕಪಟ್ಟಿಯಲ್ಲಿ ನೀಡಿದರೆ ಎಲ್ಲಿ ಸಿಕ್ಕಿಬೀಳುತ್ತೇವೆ ಎಂಬ ಕಾರಣಕ್ಕೆ ಇನ್ನೊಂದು ಪರೀಕ್ಷೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮೂಲಕ ಸರಕಾರ ನಡೆಸಿದ ಮೌಲ್ಯಾಂಕನ ಪರೀಕ್ಷೆ ನಡೆಸಿದ ಹೊರತು ಶಾಲೆಗಳು ಮತ್ತೆ ಪರೀಕ್ಷೆ ನಡೆಸಲು ಅವಕಾಶ ಇಲ್ಲ. ಹಾಗೇನಾದರೂ ಮಾಡಿದರೆ ಇದು ಕಾನೂನು ಪ್ರಕಾರ ತಪ್ಪು. ಮಕ್ಕಳಿಗೂ ಇದು ಹೊರೆ. ಈ ರೀತಿ ಯಾವುದೇ ಶಾಲೆ ಮತ್ತೊಂದು ಪರೀಕ್ಷೆ ಮಾಡುವುದಾಗಿ ಹೇಳಿದ್ದರೆ ಪೋಷಕರು ಇಲಾಖೆಗೆ ಮಾಹಿತಿ ನೀಡಲಿ ಎಂದು ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.