Sanitation Worker: ಮಲ ಬಾಚುವ ಮೃತ ಕಾರ್ಮಿಕ ಹೆಂಡತಿಗೆ 30 ಲಕ್ಷ ಪರಿಹಾರ – ಹೈಕೋರ್ಟ್ ನಿಂದ ಖಡಕ್ ಸೂಚನೆ
Sanitation Worker : ಕೈಯಿಂದ ಮಲ ಬಾಚುವ ಸಂದರ್ಭ ಮಲದ ಗುಂಡಿಯಲ್ಲಿ ಉಸಿರುಗಟ್ಟಿ ಮೃತಪಟ್ಟ ಪೌರ ಕಾರ್ಮಿಕನ ಪತ್ನಿಗೆ 30 ಲಕ್ಷ ರೂ.ಗಳ ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಸ್ಥಳೀಯ ನಗರ ಆಡಳಿತಕ್ಕೆ ಆದೇಶ ಹೊರಡಿಸಿದೆ.
ಮಲದ ಗುಂಡಿಯಲ್ಲಿ ಜೀವ ಕಳೆದುಕೊಂಡ ಸಂತ್ರಸ್ತರ ಅವಲಂಬಿತರಿಗೆ ನೀಡಬೇಕಾದ ಪರಿಹಾರವನ್ನು 10 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸುವ ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ತನಗೆ ನೀಡಲಾದ ಪರಿಹಾರವನ್ನು ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದ ಮೃತ ಪೌರ ಕಾರ್ಮಿಕನ ಪತ್ನಿಯ ಮನವಿಯನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಅವರು ಅಂಗೀಕರಿಸಿದ್ದಾರೆ.
ಮಲದ ಗುಂಡಿಗಳಲ್ಲಿ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸುತ್ತಾ ವ್ಯವಸ್ಥಿತವಾಗಿ ಅಮಾನವೀಯ ಪರಿಸ್ಥಿತಿಗಳಲ್ಲಿ ಸಿಲುಕಿಕೊಂಡು ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಕಾರ್ಮಿಕರ ಸ್ಥಿತಿಯನ್ನು ಗಮನಿಸಿ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೇಶಾದ್ಯಂತ ಕೈಯಿಂದ ಮಲ ಬಾಚುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ನಿರ್ದೇಶನ ನೀಡಿತ್ತು.
ಉದ್ಯೋಗ, ತನ್ನ ಮಕ್ಕಳಿಗೆ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ಸೇರಿದಂತೆ ಸಂಪೂರ್ಣ ಪುನರ್ವಸತಿ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಮಹಿಳೆ ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟಿನ ಆದೇಶಗಳು ಈ ಪ್ರಕರಣದ ವಾಸ್ತವಾಂಶಗಳಿಗೆ ಅನ್ವಯವಾಗುತ್ತದೆ. ಇಂದಿನಿಂದ ಎರಡು ತಿಂಗಳ ಅವಧಿಯೊಳಗೆ ಜಾರಿಗೆ ಬರಲಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಈಗಾಗಲೇ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದ್ದು, ಆದರೆ ಸುಪ್ರೀಂ ಕೋರ್ಟ್‌ನ ತೀರ್ಪಿನ ದೃಷ್ಟಿಯಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮಲದ ಗುಂಡಿ ಕೆಲಸದಲ್ಲಿ ತೊಡಗಿರುವವರ ನೆರವಿಗಾಗಿ ಹಲವಾರು ನಿರ್ದೇಶನಗಳನ್ನು ರವಾನಿಸಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಾವನ್ನಪ್ಪುವವರ ಹತ್ತಿರದ ಸಂಬಂಧಿಕರಿಗೆ 30 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.
ಇದನ್ನು ಓದಿ: Gas Cylinder Explosion: ಗ್ಯಾಸ್ ಸಿಲಿಂಡರ್ ಸ್ಫೋಟ; ಬರೋಬ್ಬರಿ ಐದು ಮನೆಗಳು ಕುಸಿತ!!!