Pratima Murder: ಗಣಿ ಅಧಿಕಾರಿ ಪ್ರತಿಮಾ ಕೊಲೆಗೆ ಅದೆರಡು ಪರ್ಸನಲ್ ಸಂಗತಿ ಕಾರಣ ಆಯ್ತಾ ?, ಸ್ಪೋಟಕ ಮಾಹಿತಿ ಬಹಿರಂಗ !
Pratima Murder Case: ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಕೇಸ್ ಭಾರೀ ಸುದ್ದಿಯನ್ನುಂಟು ಮಾಡಿತ್ತು. ಯಾರು ಯಾಕೆ ಕೊಲೆ ಮಾಡಿದ್ರು ? ಇದರಲ್ಲಿ ಯಾವ ಗ್ಯಾಂಗ್ ಕೈವಾಡ ಇತ್ತು, ಇದರ ಹಿಂದೆ ಗಣಿ ಧಣಿ ಮತ್ತು ಕಂಪನಿಗಳ ಕೈವಾಡ ಇದೆಯಾ ಎನ್ನುವ ಅನುಮಾನ ಕಾಡಿತ್ತು. ಈಗ 43 ವರ್ಷ ವಯಸ್ಸಿನ ಕೆ.ಎಸ್.ಪ್ರತಿಮಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರು ಚಾಲಕ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಾಹಿತಿ ಪ್ರಕಾರ, ಈತ ಸರಕಾರಿ ಗುತ್ತಿಗೆ ಆಧಾರದ ಮೇಲೆ ಕಳೆದ ಐದು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರು ಚಾಲಕ ಕೊಲೆ ಮಾಡಲು ಕಾರಣ ಏನೆಂಬುವುದನ್ನು ಆತ ಪೊಲೀಸರಲ್ಲಿ ಹೇಳಿದ್ದಾನೆ. ಕೆಲಸದಿಂದ ವಜಾ ಮಾಡಿದ್ದಕ್ಕೆ ಪ್ರತೀಕಾರವಾಗಿ ನಾನು ಪ್ರತಿಮಾ ಅವರನ್ನು ಹತ್ಯೆ ಮಾಡಿರುವುದಾಗಿ ಚಾಲಕ ಕಿರಣ್ ತಪ್ಪೊಪ್ಪಿಗೆ ವರದಿ ವಿವರಿಸಿದೆ. ಅದರಲ್ಲೂ ಇನ್ನೂ ಎರಡು ವಿಶೇಷ ಪರ್ಸನಲ್ ಕಾರಣ ಅಚ್ಚರಿ ಮೂಡಿಸಿದೆ.
ಕಾರು ಚಾಲಕ ಕಿರಣ್ ಗಾಡಿ ಓಡಿಸುವಾಗ ಆಕ್ಸಿಡೆಂಟ್ ಮಾಡುತ್ತಿದ್ದ. ಈ ಕಾರಣಕ್ಕೆ ಪ್ರತಿಮಾರವರು ಆತನನ್ನು ಪದೇ ಪದೇ ಬೈಯುತ್ತಿದ್ದರು. ಬೈಯುವ ಕಾರಣದಿಂದ ಆತನಿಗೆ ಪ್ರತಿಮಾ ಮೇಲೆ ಕೋಪ ಬಂದಿತ್ತು. ಎರಡನೆಯದಾಗಿ, ಗಣಿಗಾರಿಕೆ, ಮರಳುಗಾರಿಕೆ ಸಂಬಂಧ ಪ್ರತಿಮಾ ಅವರು ರೈಡ್ ಮಾಡಲಿಕ್ಕೆ ಎಂದು ಹೋಗುತ್ತಿರುವ ಸಂದರ್ಭದಲ್ಲಿ ಈ ಡ್ರೈವರ್, ‘ಪ್ರತಿಮಾ ಮೇಡಂ ರೈಡ್ಗೆ ಬರ್ತಾ ಇದ್ದಾರೆ’ ಎಂದು ಗುತ್ತಿಗೆದಾರರಿಗೆ ಒಳಗಿಂದೊಳಗೆ ಮಾಹಿತಿ ಕೊಡುತ್ತಿದ್ದ. ಅದು ಪ್ರತಿಮಾರ ಗಮನಕ್ಕೆ ಬಂದು ಆತನನ್ನು ಗದರಿಸಿದ್ದರು. ಆದರೂ ಆತ ಬದಲಾಗಿರಲಿಲ್ಲ. ಹಾಗಾಗಿ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಅದನ್ನು ಕಾನೂನು ಬದ್ಧವಾಗಿಯೇ ಅವರು ಮಾಡಿದ್ದರು. ತನ್ನನ್ನು ಕೆಲಸದಿಂದ ತೆಗೆದ ಕೂಡಲೇ ಪ್ರತಿಮಾ ಮೇಡಂ ಮೇಲೆ ಇದ್ದ ಕೋಪ ದ್ವೇಷಕ್ಕೆ ತಿರುಗಿತ್ತು. ಆಕೆಯ ಕೊಲೆಗೆ ಇದು ಕೂಡಾ ಮುಖ್ಯ ಕಾರಣ ಆಗಿತ್ತು. ಇದು ಅಲ್ಲದೆ, ಆಕೆ ತೆಗೆದುಕೊಂಡ ಒಂದು ಪರ್ಸನಲ್ ನಿರ್ಧಾರ ಆ ಕೊಲೆಗೆ ಮುನ್ನುಡಿ ಬರೆದಿತ್ತು ಅಂತಾನೆ ಹೇಳಬಹುದು.
ಹಣ ಉಳಿಸಲು ಜಿಪುಣತನ ತೋರಿಸಿ ಕೊಲೆಯಾದ ಅಧಿಕಾರಿ:
ಮುಖ್ಯವಾಗಿ, ಕಡಿಮೆ ಸಂಬಳಕ್ಕೆ ದೊರೆಯುವ ಸ್ಲಂ ನಲ್ಲಿ ವಾಸ ಮಾಡುವ ಕೆಲಸಗಾರರನ್ನು, ಅಷ್ಟಾಗಿ ಡ್ರೈವಿಂಗ್ ಗೊತ್ತಿಲ್ಲದವರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುತ್ತಿದ್ದುದೇ ಆಕೆಗೆ ಮುಳುವಾಗಿ ಹೋಯ್ತು. ಐದು ಸಾವಿರ ರೂಪಾಯಿ ಹೆಚ್ಚಿಗೆ ಕೊಟ್ಟರೆ ಒಳ್ಳೆಯ ಡ್ರೈವರ್ಗಳನ್ನೇ ನೇಮಕ ಮಾಡಬಹುದು ಎಂಬ ಮಾತು ಇದೆ. ಅತ್ಯಂತ ಪ್ರಮುಖ ಮತ್ತು ಆಯಕಟ್ಟಿನ ಹುದ್ದೆಯಲ್ಲಿದ್ದ ಪ್ರತಿಮಾರವರು, ಅದೇನೋ ಸಣ್ಣ ಮಟ್ಟಿಗಿನ ಉಳಿತಾಯ ಮಾಡಲು ಹೋಗಿ ತನ್ನ ಜೀವವನ್ನೇ ಬಲಿ ತೆಗೆದುಕೊಂಡರಾ ಎಂಬ ಚರ್ಚೆ ಉದ್ಭವವಾಗಿದೆ. ಈ ಡ್ರೈವರ್ ಕಿರಣ್ ಗೆ ಪ್ರತಿಮಾ ಮಾಡುವ ರೈಡ್ ವಿಚಾರಗಳ ಮಾಹಿತಿ ಸೋರಿಕೆ ಮಾಡುತ್ತಿದ್ದುದಕ್ಕೆ ಈತನಿಗೆ ಪ್ರತಿ ಮಾಹಿತಿಗೆ, ಎರಡು ಸಾವಿರದಿಂದ ಐದು ಸಾವಿರದವರೆಗೆ ಹೆಚ್ಚಿನ ಹಣ ಸಿಗುತ್ತಿತ್ತು ಎಂದು ಹೇಳಲಾಗಿದೆ.
ಕೊಲೆ ನಡೆದ ದಿನ ಪ್ರತಿಮಾ ಅವರು ಶನಿವಾರ ರಾತ್ರಿ 8 ರ ಸುಮಾರಿಗೆ ಕಾರು ಚಾಲಕ ಸಚಿನ್ ದೊಡ್ಡಸಂದ್ರದಲ್ಲಿರುವ ಮನೆಗೆ ಬಿಟ್ಟು ಹೋಗಿದ್ದರು. ಪ್ರತಿಮಾ ಅವರು ಮನೆ ಬಾಗಿಲು ತೆರೆದು ಒಳ ಹೋಗುತ್ತಿದ್ದಂತೆಯೇ ಹಿಂದಿನಿಂದ ಬಂದ ಚಾಲಕ ಕಿರಣ್ ದಾಳಿ ನಡೆಸಿ, ಉಸಿರುಗಟ್ಟಿಸಿ, ನಂತರ ಮಾರಕಾಸ್ತ್ರದಿಂದ ಕತ್ತು ಸೀಳಿ ಕೊಲೆಗೈಯಲಾಗಿತ್ತು ಎನ್ನಲಾಗಿದೆ. ಕೊಲೆ ಮಾಡುವ ಮುನ್ನ, ತನ್ನನ್ನು ಕೆಲಸಕ್ಕೆ ಮರು ನೇಮಕ ಮಾಡುವಂತೆ ಕಾಲಿಗೆ ಬಿದ್ದು ಕೇಳಿಕೊಂಡಿದ್ದನಂತೆ. ಆದರೂ ಒಪ್ಪದ ಪ್ರತಿಮಾರ ಶಾಲನ್ನೆ ಬಳಸಿ ಕತ್ತು ಕಟ್ಟಿ ಕೊಲೆ ಮಾಡಲಾಗಿತ್ತು. ಜತೆಗೆ ಚಾಕುವಿನಿಂದ ಇರಿಯಲಾಗಿತ್ತು.
ಪ್ರತಿಮಾ ಪರ್ಸಿನಿಂದ ದೋಚಿದ ರೂ. 15,000 ಮಹದೇಶ್ವರ ಬೆಟ್ಟದ ಹುಂಡಿಗೆ:
ಪ್ರತಿಮಾರನ್ನು ಕೊಂದ ನಂತರ ಆರೋಪಿ ವರ್ತಿಸಿದ ರೀತಿ ವಿಚಿತ್ರವಾಗಿದೆ. ಆಕೆಯನ್ನು ಕೊಂದ ನಂತರ, ಆಕೆಯ ಮನೆಗೆ ಹೋಗಿ ಅಲ್ಲಿಂದಲೇ ಪರ್ಸಿನಿಂದ 15,000 ರೂಪಾಯಿಯಷ್ಟು ನಗದನ್ನು ತೆಗೆದುಕೊಂಡಿದ್ದಾನೆ. ಆ ದುಡ್ಡು ಕೈಗೆ ಬಂದಂತೆ, ಮನೆಯಿಂದ ಹೊರಗೆ ಬಂದು ತನ್ನ ಸ್ವಿಚ್ ಆಫ್ ಆಗಿದ್ದ ಫೋನನ್ನು ಆನ್ ಮಾಡಿದ್ದಾನೆ. ನಂತರ ತನ್ನ ಗೆಳೆಯರಿಗೆ ಕರೆ ಮಾಡಿ, ‘ಬನ್ನಿ ಮಹದೇವ್ ಮಹದೇಶ್ವರ ಬೆಟ್ಟಕ್ಕೆ ಹೋಗೋಣ, ಖರ್ಚೆಲ್ಲ ನನ್ನದೇ’ ಎಂದು ಕರೆದಿದ್ದಾನೆ. ಗೆಳೆಯರಿಗೆ ಕೊಲೆಯ ಬಗ್ಗೆ ಯಾವುದೇ ಮಾಹಿತಿ, ಸುಳಿವು ತಿಳಿಸಿಲ್ಲ. ಉಚಿತ ಟ್ರಿಪ್ಪು ಅಂದಾಗ ಯಾಕೆ ಬೇಡ ಎಂದು ಕೂಡಲೇ ಗೆಳೆಯರೆಲ್ಲ ಒಪ್ಪಿಕೊಂಡಿದ್ದಾರೆ. ಹಾಗೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ ಹಂತಕ ಅಲ್ಲಿ ಪ್ರತಿಮಾರ ಪರ್ಸಿನಿಂದ ದೋಚಿದ 15 ಸಾವಿರ ರೂಪಾಯಿಗಳನ್ನು ದೇವರ ಹುಂಡಿಗೆ ಹಾಕಿದ್ದಾನೆ. ಮಾಡಿದ ತಪ್ಪಿಗೆ ಪ್ರಾಯಶ್ಚಿತವೋ ಏನೋ ಎಂಬಂತೆ ಹಾಗೆ ಹರಕೆ ಸಂದಾಯವಾಗಿದೆ. ಇದು ಗಣಿ ಇಲಾಖೆಯ ಡೈರೆಕ್ಟರ್ ಪ್ರತಿಮಾ ಕೊಲೆಯ ಬಗೆಗಿನ ಲೇಟೆಸ್ಟ್ ಅಪ್ಡೇಟ್. ಈ ಮಧ್ಯೆ ಬೆಂಗಳೂರು ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಅತ್ಯಂತ ಪ್ರಮುಖ ಹುದ್ದೆಯಲ್ಲಿದ್ದರು ಪ್ರತಿಮಾ. ಕಾನೂನು ಬಾಹಿರ ಚಟುವಟಿಕೆಗಳಿಗೆ ಕಟ್ಟುನಿಟ್ಟ ನಾ ಅಧಿಕಾರಿಯಾಗಿದ್ದರೂ ಈ ಪ್ರತಿಮಾ ಮೇಡಂ. ಹಾಗಾಗಿ, ಹಿರಿಯ ಅಧಿಕಾರಿಗಳು ಉನ್ನತ ಪೊಲೀಸ್ ಮುಖ್ಯಸ್ಥರಿಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಈಗ ತಾನೆ ಪ್ರಾಥಮಿಕ ತನಿಖೆ ಶುರುವಾಗಿದ್ದು, ಇನ್ನಷ್ಟು ಸ್ಪೋಟಕ ಮಾಹಿತಿಗಳು ಶೀಘ್ರ ಲಭ್ಯವಾಗುವ ನಿರೀಕ್ಷೆಯಿದೆ.
ಇದನ್ನು ಓದಿ: Diwali Bonus News: ದೀಪಾವಳಿ ಹಬ್ಬಕ್ಕೆ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ – ಭೋನಸ್ ಘೋಷಿಸಿದ ರಾಜ್ಯ ಸರ್ಕಾರ !!