Vaishno Devi Utsav: ಪ್ರಪ್ರಥಮ ಬಾರಿಗೆ ಕಾಶ್ಮೀರದಲ್ಲಿ ಯಕ್ಷಗಾನ ಪ್ರದರ್ಶನ – ವೈಷ್ಣೋದೇವಿ ಉತ್ಸವದಲ್ಲಿ ಮಿಂಚಲಿರೋ ಆ ಕರಾವಳಿ ಕಲಿಗಳು ಯಾರು ?

yakshagana performance for the first time conducted in Vaishno Devi Utsav Kashmir latest news

Vaishno Devi Utsav: ಜಮ್ಮು-ಕಾಶ್ಮೀರ ಸರ್ಕಾರವೇ ಯಕ್ಷಗಾನ ಪ್ರದರ್ಶನಕ್ಕೆ ಮೊಟ್ಟ ಮೊದಲ ಬಾರಿಗೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆ ಜಮ್ಮು-ಕಾಶ್ಮೀರದ ವೈಷ್ಣೋದೇವಿ ನವರಾತ್ರಿ ಉತ್ಸವದ(Vaishno Devi Utsav) ಸಂದರ್ಭದಲ್ಲಿ ಇದೇ ಪ್ರಪ್ರಥಮ ಬಾರಿಗೆ ತೆಂಕುತಿಟ್ಟಿನ ‘ದೇವಿ ಮಹಾತ್ಮೆ’ ಯಕ್ಷಗಾನ (yakshagana)ಪ್ರದರ್ಶನಗೊಳ್ಳಲಿದೆ.

ವೈಷ್ಣೋದೇವಿ ಯಾತ್ರಾಸ್ಥಳದ ಬೇಸ್‌ ಕ್ಯಾಂಪ್‌ ಜಮ್ಮುವಿನ ಕಾಟ್ರಾದಲ್ಲಿ ಈ ಉತ್ಸವ ನಡೆಯಲಿದ್ದು, ಯಕ್ಷಗಾನ ಸಂಪೂರ್ಣ ಹಿಂದಿ ಭಾಷೆಯಲ್ಲಿ ಪ್ರದರ್ಶನಗೊಳ್ಳಲಿದೆ. ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಮುಖ್ಯಸ್ಥರಾದ ಭಾಗವತ ಪಟ್ಲ ಸತೀಶ್‌ ಶೆಟ್ಟಿಯವರ ಸಾರಥ್ಯದ ಜೊತೆಗೆ ಅವರ ಮೇಲುಸ್ತುವಾರಿಯ ಪಾವಂಜೆ ಶ್ರೀಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರು ಈ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ. ಸರ್ಪಂಗಳ ಈಶ್ವರ ಭಟ್ ಹಿಂದಿಯಲ್ಲಿ ಪದ್ಯ ರಚನೆ ಮಾಡಿದ್ದು, ಪ್ರೊ.ಪವನ್ ಕಿರಣ್‌ಕೆರೆ ಅರ್ಥವನ್ನು ಬರೆದಿದ್ದಾರೆ.

ನವರಾತ್ರಿ ಆರಂಭದ ಉದ್ಘಾಟನೆಯ ದಿನದಂದು ಅ.15ರಂದು ಸಂಜೆ 7 ರಿಂದ 2 ಗಂಟೆಗಳ ಕಾಲ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಪಟ್ಲ ಸತೀಶ್‌ ಶೆಟ್ಟಿ ನೇತೃತ್ವದ 15 ಮಂದಿಯ ತಂಡ ಅ.14ರಂದು ಮಂಗಳೂರಿನಿಂದ ಜಮ್ಮು ಗೆ ತೆರಳಲಿದ್ದಾರೆ. ಹಿಮ್ಮೇಳದಲ್ಲಿ ಪಟ್ಲ ಸತೀಶ್‌ ಶೆಟ್ಟಿ, ಗುರುಪ್ರಸಾದ್‌ ಬೊಳಿಂಜಡ್ಕ, ಪ್ರಶಾಂತ್‌, ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ, ಅಕ್ಷಯ ಕುಮಾರ್‌ ಮಾರ್ನಾಡ್‌, ಮವ್ವಾರು ಬಾಲಕೃಷ್ಣ ಮಣಿಯಾಣಿ, ಮೋಹನ ಬೆಳ್ಳಿಪ್ಪಾಡಿ, ರಾಕೇಶ್‌ ರೈ ಅಡ್ಕ, ಲೋಕೇಶ್‌ ಮುಚ್ಚೂರು, ಮಾಧವ ಬಂಗೇರ, ಸಚಿನ್‌ ಉದ್ಯಾವರ, ರಾಜೇಶ್‌ ನಿಟ್ಟೆ, ದಿವಾಕರ ಕಾಣಿಯೂರು, ಭುವನ ಮೂಡುಜೆಪ್ಪು, ಮಧುರಾಜ್‌ ಪೆರ್ಮುದೆ ಭಾಗಿಯಾಗಲಿದ್ದಾರೆ.

ಶ್ರೀನಗರದ ಶೇರ್‌-ಇ-ಕಾಶ್ಮೀರ್‌ ಇಂಟರ್‌ ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ನಡೆದಿದ್ದ ಪ್ರದರ್ಶನದ ಸಂದರ್ಭ ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್ ಸಿನ್ಹಾ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ವೈಷ್ಣೋದೇವಿಯಲ್ಲಿ ನವರಾತ್ರಿಗೆ ನಡೆಯುವ ಉತ್ಸವದಲ್ಲೂ ಕೂಡ ಇದೇ ಯಕ್ಷಗಾನವನ್ನು ಪ್ರದರ್ಶಿಸುವಂತೆ ಆಹ್ವಾನ ನೀಡಿದ್ದರು. ಜಮ್ಮು ಸರ್ಕಾರ ಎರಡನೇ ಬಾರಿ ಆಹ್ವಾನ ನೀಡಿರುವ ಕುರಿತು ಸಂತಸ ವ್ಯಕ್ತಪಡಿಸಿರುವ ತಂಡದ ಮುಖ್ಯಸ್ಥ ಪಟ್ಲ ಸತೀಶ್‌ ಶೆಟ್ಟಿ ಯಕ್ಷಗಾನ ಪ್ರೀತಿಸುವವರು ಇದ್ದಾರೆ ಎಂಬುದಕ್ಕೆ ಮತ್ತೊಮ್ಮೆ ಆಹ್ವಾನ ಬಂದಿರುವುದು ನಿದರ್ಶನ ಎಂದು ಹೇಳಿಕೊಂಡಿದ್ದು, ಒಂದೇ ವಾರದಲ್ಲಿ ಮತ್ತೊಮ್ಮೆ ನಮ್ಮ ಕಲಾವಿದರು ಜಮ್ಮುವಿಗೆ ತೆರಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.

 

ಇದನ್ನು ಓದಿ: Crime News: ಅಬ್ಬಾ…ವಿದ್ಯಾರ್ಥಿನಿಯೋರ್ವಳ ಕೆನ್ನೆಗೆ 35 ಬಾರಿ ಹೊಡೆದ ಕ್ರೂರಿ ಶಿಕ್ಷಕಿ!!!

Leave A Reply

Your email address will not be published.