Berthangady: ಬೆಳ್ತಂಗಡಿಯಲ್ಲಿ ಅರಣ್ಯ ಇಲಾಖೆಯ ಜತೆ ಸಂಘರ್ಷ: ಊರವರು ಸೋತರೂ ಚಾಲಾಕಿ ಶಾಸಕ ಹರೀಶ್ ಪೂಂಜಾ ಗೆದ್ದದ್ದು ಹೇಗೆ ?
Belthangady : ದಿನಗಳ ಕೆಳಗೆ ಬೆಳ್ತಂಗಡಿ (Belthangady) ತಾಲೂಕಿನ ಕಳೆಂಜ ಗ್ರಾಮದಲ್ಲಿ ಅರಣ್ಯ ಒತ್ತುವರಿ ಹೆಸರಿನಲ್ಲಿ ನಡೆದ ರಾಜಕೀಯ ಫೈಟ್ ಸದ್ಯಕ್ಕೆ ನಿಂತಿದೆ. ಈ ಒಟ್ಟಾರೆ ಘಟನೆ ಯಾಕಾಯಿತು, ಅದು ಅರಣ್ಯ ಇಲಾಖೆಗೆ ಸಂಬಂಧ ಪಟ್ಟ ಜಾಗೆಯ, ರೆವಿನ್ಯೂ ಲಾಂಡ್ ನಾ? ಅಲ್ಲಿ ಮನೆ ಕಟ್ಟಬಾರದಾ? ಇತ್ಯಾದಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾ, ಹೋಗುವ ಜತೆಗೆ ಮೊನ್ನೆ ಅಲ್ಲಿ ಸೋತವರು, ಗೆದ್ದವರು ಯಾರು ಎನ್ನುವುದನ್ನು ಕೂಡಾ ನಿಮಗೆ ಸವಿಸ್ತಾರವಾಗಿ ಹೇಳಲಿದ್ದೇವೆ.
ಅಲ್ಲಿ ಬೆಳ್ತಂಗಡಿಯ ಪ್ರಭಾವಿ ಶಾಸಕ ಹರೀಶ್ ಪೂಂಜಾ (Harish Poonja) ಎಂಬ ಚಾಲಾಕಿ ರಾಜಕಾರಣಿಯನ್ನು ತಡವಿಕೊಳ್ಳಲು ಹೋಗಿ ಕಾಂಗ್ರೇಸ್ ಮುಖಂಡರು ಹೇಗೆ ಮುಖಭಂಗ ಅನುಭವಿಸಿದರೋ, ಅಲ್ಲಿ ಮನೆ ಕಟ್ಟಿದ ಮನೆಯವರೂ ಸೇರಿ ಉಳಿದ ಊರವರು ಕೂಡಾ ಸೋತು ಹೋದ ಕಥೆ ನಿಮಗೆ ಗೊತ್ತಾ ? ಊರವರು ಮಾತ್ರವಲ್ಲ, ಈ ವಿವಾದದಿಂದ ಅಕ್ಕ ಪಕ್ಕದ ಜಿಲ್ಲೆಯ ಜನರಿಗೂ ತೊಂದರೆ ಆಗಲಿದೆ. ಆದರೆ ಒಬ್ಬರಂತೂ ಗೆದ್ದಿದ್ದಾರೆ !!!
ಕಳೆಂಜದ ಧರ್ಮಣ್ಣ ಗೌಡ ಎಂಬವರ ಮಕ್ಕಳು ತಮ್ಮ ಬಳಿ ದಶಕಗಳಿಂದ ಕೃಷಿ ಮಾಡಿಕೊಂಡು ಸ್ವಾಧೀನದಲ್ಲಿ ಇರುವ ಜಾಗದಲ್ಲಿ ಕಿರಿಯ ಮಗನಿಗೆ ಸಣ್ಣ ಮಗ ಮನೆ ಕಟ್ಟಲು ಹೊರಟಾಗ ಅರಣ್ಯ ಇಲಾಖೆಯವರು ಮನೆ ಕಟ್ಟದಂತೆ ತಡೆದಿದ್ದರು. ಕಳೆದ ತಿಂಗಳು ಸೆಪ್ಟೆಂಬರ್ 26ನೆಯ ತಾರೀಖಿನಂದು ಮನೆಯವರು ತಮ್ಮ ಸ್ವಾಧೀನದಲ್ಲಿದ್ದ ಒಂದಷ್ಟು ರಬ್ಬರ್ ಗಿಡಗಳು ಇರುವ ಸುಮಾರು ಅರ್ಧ ಎಕರೆ ಜಾಗದ ಪ್ರದೇಶದ ಒಂದು ಭಾಗದಲ್ಲಿ ಮನೆ ಕಟ್ಟಲು ಶುರುಮಾಡಿದ್ದರು. ಮನೆಯ ಯಜಮಾನ ಧರ್ಮಣ್ಣ ಗೌಡರು ಹುಟ್ಟು ಕುರುಡರು. ಅವರ ಕಿರಿ ಮಗನಿಗೆ ಮದುವೆ ಆಗಿದ್ದು, ಒಂದು ಸಣ್ಣ ಮನೆ ಕಟ್ಟಲು ಹೊರಟಿದ್ದರು. ಆಗ ಅಲ್ಲಿನ ಫಾರೆಸ್ಟರ್ ಪ್ರಶಾಂತ್ ಬಂದು, ‘ಇದು ಫಾರೆಸ್ಟ್ ಜಾಗ ಇಲ್ಲಿ ಮನೆ ಕಟ್ಟಲು ಆಗುವುದಿಲ್ಲ ತಕ್ಷಣ ಕೆಲಸ ನಿಲ್ಲಿಸಿ ಎಂದಿದ್ದರು. ನಿಮ್ಮ ಮೇಲೆ DFO ಅವರಿಗೆ ದೂರು ಹೋಗಿದೆ, ಹಾಗಾಗಿ ಮನೆ ಕೆಲಸ ಮುಂದುವರಿಸಕೂಡದು’ ಎಂದಿದ್ದರು. ಅದರಂತೆ ಮನೆಯವರು ಕೆಲಸ ನಿಲ್ಲಿಸಿದ್ದರು. ಫಾರೆಸ್ಟರ್ ಪ್ರಶಾಂತ್ ಕೂಡಾ ಪೂರಕವಾಗಿ ಸ್ಪಂದಿಸಿ ಯಥಾಸ್ಥಿತಿ ಕಾಪಾಡುವಂತೆ ಹೇಳಿದ್ದರು. ಆಗ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರುಗಳು ಕೂಡ ಆಗಮಿಸಿ ಮಧ್ಯಸ್ಥಿಕೆ ವಹಿಸಿದ್ದರು. ಆ ಸಂದರ್ಭದಲ್ಲಿ ಮನೆಯ ಪಂಚಾಂಗವನ್ನು ಏನೂ ಮಾಡೋದಿಲ್ಲ, ಹೀಗೆ ಇರಲಿ, ‘ನೀವು ಏನು ಮಾಡಬೇಡಿ’ ಎಂದು ಹೇಳಿ ಹೇಳಿದ್ದರು.
ಇದಾದ ಎರಡನೆಯ ದಿನಕ್ಕೆ ಫಾರೆಸ್ಟರ್ ತನ್ನ ತಂಡದ ಜತೆ ಆಗಮಿಸಿ ಏಕಾಏಕಿ ಮನೆ ಪಂಚಾಂಗವನ್ನು ಅಗೆಯಲು ಪ್ರಾರಂಭಿಸಿದ್ದರು. ಆಗ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಕೂಡಾ ಆಗಿರುವ ಮನೆ ಕಟ್ಟಲು ತೊಡಗಿದ್ದ ಹುಡುಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ವಿಷ್ಯ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಹರೀಶ್ ಪೂಂಜಾ ಫಾರೆಸ್ಟರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೂ ಫಾರೆಸ್ಟರ್ ಕೇಳದೆ ಇದ್ದಾಗ ನೇರವಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಫೋನಾಯಿಸಿದ ಹರೀಶ್ ಪೂಂಜಾ ಸದ್ಯಕ್ಕೆ ನಿರ್ಮಾಣ ನಿರ್ವಹಣೆ ಮಾಡುವಂತೆ ಕೇಳಿಕೊಂಡಿದ್ದರು ಶಾಸಕರ ಬೇಡಿಕೆಗೆ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಸ್ಥಳೀಯ ಜಾಗದಲ್ಲಿ ಯಥಾ ಸ್ಥಿತಿ ಕಾಪಾಡಲು ಹೇಳಿದ್ದರು.
ಅರಣ್ಯ ಜಗಳಕ್ಕೆ ಸೇರಿಕೊಂಡ ರಾಜಕೀಯದ ಕೆಸರು- ಮಣ್ಣು:
ಆದಾದ ನಂತರ ಇಡೀ ಪ್ರಕರಣಕ್ಕೆ ರಾಜಕೀಯ ಸೇರಿಕೊಂಡಿದೆ. ‘ಅರೇ, ಹರೀಶ್ ಪೂಂಜಾ ಕರ್ನಾಟಕದ ಕಾಂಗ್ರೆಸ್ ಸರಕಾರದ ಅರಣ್ಯ ಮಂತ್ರಿಗೆ ಹೇಳಿ ಕೆಲಸ ನಿಲ್ಲಿಸಿದ್ರಾ ಅಂತ ಮಾಜಿ ಶಾಸಕ ವಸಂತ ಬಂಗೇರರಿಗೆ ಕೋಪ ಬಂದಿದೆ. ಅವರು ತಮ್ಮ ಪ್ರಭಾವ ಬಳಸಿ, ಅರಣ್ಯ ಇಲಾಖೆಗೆ ಸೂಚನೆ ನೀಡಿ ಮರು ದಿವಸ ತೆರವು ಕಾರ್ಯ ನಡೆಸಲು ಪ್ಲಾನ್ ಹೂಡಿದ್ದಾರೆ’ ಎನ್ನುವುದು ಈಗಿನ ಗುಮಾನಿ.
ಮೊನ್ನೆ ಅಕ್ಟೋಬರ್ 10 ರಂದು ಪಂಚಾಂಗ ಕೆಡವಲು ಅರಣ್ಯ ಇಲಾಖೆ ಬಂದಾಗ ಸಹಜವಾಗಿ ಹರೀಶ್ ಪೂ0ಜಾ ಅವರು ಸ್ಥಳಕ್ಕೆ ಆಗಮಿಸುತ್ತಾರೆ. ‘ಆ ಸಂದರ್ಭ ಜನ ಸೇರುತ್ತಾರೆ, ದೊಡ್ಡಮಟ್ಟದ ಗಲಾಟೆ ಉಂಟಾಗುತ್ತದೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ನೆಪದಲ್ಲಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಬೇಕು ‘- ಎನ್ನುವುದು ವಿರೋಧಿ ಪಾಳಯದ ಪ್ಲಾನಿಂಗ್. ಇದು ಸದ್ಯ ಗೋಚರಿಸುತ್ತಿರುವ ಸತ್ಯ. ಹೌದು, ಮೊನ್ನೆಯ ದಿನ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಎಲ್ಲ ಮಟ್ಟದ ತಯಾರಿಗಳು ಮಾಡಿಕೊಂಡೇ ಪೊಲೀಸರು ಬಂದಿದ್ದರು. ಹರೀಶ್ ಪೂಂಜಾ ಅವರನ್ನು ಬಂಧಿಸಿದರೆ ಗದ್ದಲಗಳು ಉಂಟಾಗುತ್ತವೆ. ಆಗ ಉಂಟಾಗುವ ಗದ್ದಲವನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಗಿ ಬರಬಹುದು. ಅದಕ್ಕಾಗೇ ಮೂರು ಬಸ್ಸುಗಳಲ್ಲಿ ಪೊಲೀಸರು ಲಾಠಿ ಸಮೇತ ಹಿಡಿದು ಬಂದಿದ್ದರು. ಜತೆಗೆ ಹಲವಾರು ಪೊಲೀಸ್ ಜೀಪ್ ಗಳು, ಸ್ಕ್ವಾರ್ಡ್ಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದಿದ್ದರು. ಒಟ್ಟಾರೆ, ಮೊನ್ನೆ ಹರೀಶ್ ಪೂಂಜ ಅವರನ್ನು ಬಂಧಿಸಲು ಎಲ್ಲ ಮಟ್ಟದ ತಯಾರಿ ನಡೆಸಿ ಆಗಿತ್ತು. ಆದರೆ ಅಲ್ಲಿ ಇದ್ದದ್ದು ಚಾಲಾಕಿ ಹರೀಶ್ ಪೂಂಜಾ !!!
ಹರೀಶ್ ಪೂಂಜಾ ಬಂಧನಕ್ಕೆ ಸರ್ವ ಸಿದ್ಧತೆ:
ಹರೀಶ್ ಪೂಂಜಾ ಬಂಧಿಸಿಯೇ ಬಿಡುತ್ತೇವೆ ಎಂದು ಅಂದುಕೊಂಡ ವಿರೋಧಿ ಪಾಳಯದ ಪ್ಲಾನ್ ಶಾಸಕ ಹರೀಶ್ ಪೂ0ಜಾರಿಗೆ ಮೊದಲೇ ತಿಳಿದಿತ್ತು ಅನ್ನಿಸುತ್ತೆ. ಹರೀಶ್ ಪೂಂಜಾ ತನ್ನ ಸುತ್ತ ಮುತ್ತಲಿನ ತಾಲೂಕಿನ ಕೆಲ ಶಾಸಕರನ್ನು ಕರೆದಿದ್ದಾರೆ. ತಕ್ಷಣಕ್ಕೆ ಪ್ರತಿ ತಂತ್ರ ಹೂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಶಾಸಕ ಮಿತ್ರರೊಂದಿಗೆ ಸಂಘಟಿತ ಹೋರಾಟಕ್ಕೆ ಇಳಿದಿದ್ದಾರೆ. ಅವರು ಪಕ್ಕದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರನ್ನು ತನ್ನತ್ತ ಕರೆಸಿಕೊಂಡಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರನ್ನು ಬರಹೇಳಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮತ್ತಿತರರು ಸ್ಥಳಕ್ಕೆ ಬಂದಿದ್ದಾರೆ. ಇಲ್ಲಿ ಒಟ್ಟಾರೆ ಇಷ್ಟೆಲ್ಲಾ ರಾಜಕೀಯ ನಾಯಕರು ಸೇರಬಹುದು ಅನ್ನೋದನ್ನು ಅರಣ್ಯ ಇಲಾಖೆ ಮತ್ತು ಪೊಲೀಸರು ಕೂಡಾ ಊಹಿಸಿಲ್ಲ. ಹಾಗಾಗಿ ಹರೀಶ್ ಪೂಂಜರನ್ನು ಬಂಧಿಸಲು ಹಿಂದೇಟು ಹಾಕಿದ್ದಾರೆ. ಬೇಡದ ಕೆಲಸಕ್ಕೆ ಕಾಂಗ್ರೆಸ್ ಪಕ್ಷ ಗುಪ್ತವಾಗಿ ಕೈ ಹಾಕಿ ಹೆಸರು ಹಾಳು ಮಾಡಿಕೊಂಡಿದೆ. ಒಟ್ಟಾರೆ ವಿರೋಧಿ ತಂಡದ ಪ್ಲಾನ್ ಫೈಲ್ ಆಗಿದೆ. ಮೊನ್ನೆ ಚಾಲಾಕಿ ಹರೀಶ್ ಪೂಂಜ ತಪ್ಪಿಸಿಕೊಂಡದ್ದೇ ಅಲ್ಲದೆ, ಏಕಾಏಕಿ ಇಡೀ ಘಟನೆಯಲ್ಲಿ ಸ್ಟಾರ್ ವ್ಯಾಲ್ಯು ಹೆಚ್ಚಿಸಿಕೊಂಡಿದ್ದಾರೆ. ಇದಪ್ಪಾ ಬುದ್ದಿವಂತಿಕೆ !
ನಿಜಕ್ಕೂ ಅಲ್ಲಿನ ಅರಣ್ಯ ವಿವಾದ ಏನು ?
ಬೆಳ್ತಂಗಡಿ ತಾಲ್ಲೂಕಿನ ಕಳೆಂಜದ ದೇವಣ್ಣ ಗೌಡ ಅವರ ಮನೆ ಧ್ವಂಸಗೊಳಿಸಲು ಸಜ್ಜಾದ ಅರಣ್ಯ ಇಲಾಖೆಯ ನಡೆ ಅದಕ್ಕೆ ಕೆಲವರು ಗುಪ್ತವಾಗಿ ಸಾಥ್ ನೀಡಲು ಹೋಗಿ ಇದೀಗ ಇಡೀ ಊರಿಗೇ ಸಮಸ್ಯೆ ಆಗಿದೆ. ಯಾಕೆಂದರೆ, ಈ ವಿವಾದ ಉಂಟಾದ ಕಳೆಂಜದಲ್ಲಿ ಜಾಗ 309 ಅನ್ನುವ ಸರ್ವೆ ನಂಬರ್ ಉಳ್ಳ ಜಾಗ ಅಧಿಕ ಪ್ರಮಾಣದಲ್ಲಿದೆ. ಇದು ಅತ್ತ ಪೂರ್ತಿ ಅರಣ್ಯ ಭೂಮಿಯಲ್ಲ, ಇತ್ತ ರೆವೆನ್ಯೂ ಲ್ಯಾಂಡ್ ಕೂಡಾ ಅಲ್ಲ. ಇದು ಅವುಗಳ ಮಧ್ಯದ ಜಾಗ. ಈ ಊರಿನ ಅತ್ತ ಇತ್ತ ಎರಡು ದೊಡ್ಡ ಕಾಡುಗಳಿವೆ. ಈ ಕಾಡಿನ ವನ್ಯ ಮೃಗಗಳು ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಹೋಗಲು ಕಾರಿಡಾರ್ ಆಗಿ ಒಂದಷ್ಟು ಜಾಗವನ್ನು ಬಿಡಲಾಗಿತ್ತು. ಅದುವೇ ಸರ್ವೆ ನಂಬರ್ 309 ರ ಜಾಗ. ಆದ್ರೆ ಈ ಜಾಗದಲ್ಲಿ ಸುಮಾರು ಶತಮಾನಗಳ ಕಾಲದಿಂದ ನೂರಾರು ಮನೆಗಳನ್ನು ಕಟ್ಟಿಕೊಂಡು ಕೃಷಿ ಮಾಡಿಕೊಂಡು ಜನರು ಜೀವನ ಸಾಗಿಸುತ್ತಿದ್ದಾರೆ. ಒಟ್ಟಾರೆ 400 ಕುಟುಂಬಗಳು ಇಲ್ಲಿ ಬದುಕುತ್ತಿದ್ದಾರೆ. ಈಗ ಮನೆ ಕಟ್ಟಲು ಪಂಚಾಂಗ ಹಾಕಿರುವ ಜಾಗವನ್ನು ಅರಣ್ಯ ಇಲಾಖೆಯವರು ಸರ್ವೆ ನಂಬರ 309 ಅನ್ನುತ್ತಿದ್ದಾರೆ. ಆದರೆ ಅಲ್ಲಿನ ಜನರು ಇದು ರೆವೆನ್ಯೂ ಜಾಗ ಅನ್ನುತ್ತಿದ್ದಾರೆ. ಈ ಸಮಸ್ಯೆ ಪರಿಹಾರ ಆಗಬೇಕಾದರೆ ಮರು ಸರ್ವೆ ನಡೆಯಬೇಕು. ಒಟ್ಟಾರೆ ಸರಿ ಸುಮಾರು 8000 ಎಕರೆಗಳ ರೆವೆನ್ಯೂ ಜಾಗ, 309 ಜಾಗ ಮತ್ತು ಅರಣ್ಯ ಭೂಪ್ರದೇಶ ಅಲ್ಲಿದ್ದು, ಸರ್ವೆ ಕಾರ್ಯ ನಡೆದು ಗಡಿ ಗುರುತಿಸಿದ ನಂತರ ಯಾವುದು ರೆವೆನ್ಯೂ ಜಾಗ, ಯಾವುದು ಅರಣ್ಯ ಪ್ರದೇಶ ಮತ್ತು ಯಾವುದು ಹೀಗೆ ಮೃಗಗಳು ಓಡಾಡಲು ಬಿಟ್ಟ ಜಾಗ ಅನ್ನುವುದು ನಿರ್ಧಾರ ಆಗಬೇಕಿದೆ.
ಕೊನೆಗೆ ಸ್ವಾತಂತ್ರ್ಯ ಪೂರ್ವದಿಂದಲೂ ಕೃಷಿ ಚಟುವಟಿಕೆಯೊಂದಿಗೆ ಸದರಿ ಭೂಮಿಯಲ್ಲಿ ವಾಸಿಸುತ್ತಿರುವ ಕುಟುಂಬಕ್ಕೆ ಮುನ್ಸೂಚನೆಯೂ ನೀಡದೆ, ನೋಟಿಸ್ ಕೊಡದೆ ಅರ್ಧ ಕಟ್ಟಿದ ಮನೆ ಕೆಡವಲು ನಡೆಸಿದ ಸಂಚು ವಿಫಲ ಆಗಿದೆ. ಅದನ್ನು ವಿಫಲಗೊಳಿಸಿದ ಕೀರ್ತಿ ಶ್ರೀ ಹರೀಶ್ ಪೂಂಜರಿಗೆ ಸಲ್ಲಬೇಕು. ಸ್ಥಳೀಯ ಫಾರೆಸ್ಟರ್ ಪ್ರಶಾಂತ್ ಅವರ ಅಹಂಕಾರ ಇಡೀ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಈಗ ಕೊನೆಯದಾಗಿ 8,000 ಎಕರೆ ಭೂ ಪ್ರದೇಶಗಳನ್ನು ಸರ್ವೆ ಮಾಡಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದು ಎಂದು ನಿರ್ಧಾರ ಆಗಿದೆ. ಅಲ್ಲಿಯತನಕ ಧರ್ಮಣ್ಣ ಗೌಡರ ಕುಟುಂಬ ಮಾತ್ರವಲ್ಲ ಕಳೆಂಜ ಗ್ರಾಮದ ಯಾರೂ ಹೊಸ ಮನೆ ಕಟ್ಟುವ ಹಾಗಿಲ್ಲ. ಪಕ್ಕಾ ಪಟ್ಟಾ ಲ್ಯಾಂಡ್ ಇದ್ದರೆ ಕಟ್ಟಬಹುದು. ಈಗ ಇಷ್ಟು ಬೃಹತ್ ಗಾತ್ರದ 8,000 ಎಕರೆ ಭೂಪ್ರದೇಶವನ್ನು ಅಳತೆ ಮಾಡಲು ಇದೀಗ ಫಾರೆಸ್ಟರ್ ಪ್ರಶಾಂತ್ ಕೂಡಾ ಸಂಕೋಲೆ ಎಳೆಯಬೇಕಿದೆ !!! ಒಟ್ಟಾರೆ ಕಳೆಂಜದಲ್ಲಿ ನಡೆದ ಮನೆ ಕಟ್ಟಿದ ಮನೆಯವರು ಊರಿನವರು ಮತ್ತು ವಿವಾದವನ್ನು ಎಬ್ಬಿಸಿದ ಬಿಜೆಪಿ ವಿರೋಧಿ ಪಾಳಯ ಸೋತು ಹೋಗಿದೆ. ಆದರೆ ಹರೀಶ್ ಪೂಂಜಾ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ತಾವೊಬ್ಬರು ಅಷ್ಟು ಸುಲಭವಾಗಿ ಓದಿ ಮುಗಿಸಬಲ್ಲ ‘ಚಾಪ್ಟರ್ ‘ ಅಲ್ಲ ಅಂತ ವಿರೋಧಿ ಪಾಳಯಕ್ಕೆ ಸಂದೇಶ ರವಾನಿಸಿದ್ದಾರೆ ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜಾ !!
ಈ ಘಟನೆ ಇನ್ನು ಮುಂದಕ್ಕೆ ಅರಣ್ಯ ಇಲಾಖೆ ಮತ್ತು ಜನರ ಮಧ್ಯೆ ಸಂಘರ್ಷಕ್ಕೆ ಕಾರಣವಾಗಲಿದೆ. ಯಾಕೆಂದರೆ ಇದು ಕೇವಲ ಕಳೆಂಜ ಗ್ರಾಮದ ಕಥೆಯಲ್ಲ. ಇಡೀ ದಕ್ಷಿಣ ಕನ್ನಡದಲ್ಲಿ ಇಂಥದ್ದೇ ಹಲವಾರು ಸನ್ನಿವೇಶ ಎದುರಾಗುವ ಸಂಭವನೀಯ ಸ್ಥಳಗಳಿವೆ. ಸ್ವಾತಂತ್ರ್ಯ ಪೂರ್ವದಿಂದಲೂ ಜನರು ಮನೆಮಠ ಕಟ್ಟಿ, ಬಾಳಿ ಬದುಕುತ್ತಾ ಬರುತ್ತಿದ್ದಾರೆ. ಸರಿಯಾಗಿ ಸರ್ವೆ ಆಗದೆ ಒಳ್ಳೆಯ ರೀತಿಯಲ್ಲಿ ಫೆನ್ಸಿಂಗ್ ಮಾಡದೆ ಇದ್ದರೆ, ಯಾರು ಬೇಕಾದರೂ ಬಂದು ಆ ಜಾಗದಲ್ಲಿ ನಿಂತು ನೆಲೆ ಗೊಳ್ಳುವುದು ಸಹಜ. ಹಾಗಾಗಿ ಈ ವಿವಾದ ಇನ್ನೂ ಇಡೀ ಜಿಲ್ಲೆಗೆ ಮತ್ತು ರಾಜ್ಯಕ್ಕೂ ವ್ಯಾಪಿಸುವ ಸಾಧ್ಯತೆ ಇದೆ. ಜನ ಸಾಮಾನ್ಯರ ಜತೆ ಇಲಾಖೆಗಳ ಸಂಘರ್ಷ ಒಳ್ಳೆಯದಲ್ಲ. ಅದನ್ನು ತಪ್ಪಿಸಬೇಕಾದರೆ ಸರ್ಕಾರವು ಕೇಂದ್ರ ಸರ್ಕಾರದ ಜತೆ ಸೇರಿ ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.