Siddaramaiah : ಕಾವೇರಿ ನೀರು ವಿವಾದ- ರಾಜ್ಯ ಸರ್ಕಾರ ಡಿಸ್ಮಿಸ್ ?! ಶಾಕಿಂಗ್ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ !
Siddaramaiah: ಕಾವೇರಿ ವಿವಾದ ಗಗನಕ್ಕೇರಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಇಂದು ಸೆ.29ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಈ ಬಗ್ಗೆ ಡಿಕೆ ಶಿವಕುಮಾರ್ (D.k Shivakumar) ಮಾತನಾಡಿ, ಬಂದ್ ಗೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದ್ದರು. ಇದೀಗ ಕಾವೇರಿ ನೀರು ವಿವಾದದ ಕುರಿತು ಸಿಎಂ ಸಿದ್ದರಾಮಯ್ಯ (Siddaramaiah) ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಕಾವೇರಿ ವಿವಾದ ಕುರಿತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆನ್ನುವುದೇ ನಮ್ಮ ಅನಿಸಿಕೆಯಾಗಿದೆ. ನಾವು ಕಾವೇರಿ ನೀರು ಬಿಡದಿದ್ದರೆ, ಜಲಾಶಯಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯಬಹುದು. ನ್ಯಾಯಾಲಯ ಆದೇಶ ಉಲ್ಲಂಘನೆ (contempt of court) ಆಗುತ್ತದೆ. ಆಗ ಕರ್ನಾಟಕ ರಾಜ್ಯ ಸರ್ಕಾರವನ್ನು ಡಿಸ್ಮಿಸ್ ಮಾಡಬಹುದು. ಇದಕ್ಕೆ ಇಂದು ಸಂಜೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ನೀರಾವರಿ ತಜ್ಞರು, ಮಾಜಿ ಅಡ್ವೊಕೇಟ್ ಜನರಲ್ ಗಳೊಂದಿಗೆ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ವರ್ಷ ಆಗಸ್ಟ್ ನಲ್ಲಿ ಮಳೆಯಾಗಿಲ್ಲ. ಈ ತಿಂಗಳೂ ಕೂಡ ಮಳೆ ಅಷ್ಟೇನೂ ಆಗಿಲ್ಲ. ತಮಿಳುನಾಡಿಗೆ ಹಿಂಗಾರು ಮಳೆಯಿದೆ. ಈವರೆಗೆ 43 ಟಿಎಂಸಿ ನೀರು ಹೋಗಿದೆ. 123 ಟಿಎಂಸಿ ನೀರು ಬಿಡಬೇಕು ಎಂದು ಆದೇಶವಾಗಿದೆ. ಆದರೆ ನಾವು ನೀರು ಬಿಟ್ಟಿಲ್ಲ. ಕಾವೇರಿ ಪ್ರಾಧಿಕಾರ ಪ್ರತಿ ಬಾರಿ ಸಭೆ ಕರೆದಾಗಲೂ ನಾವು ಪ್ರತಿಭಟಿಸುತ್ತಲೇ ಬಂದಿದ್ದೇವೆ. ನೀರಿಲ್ಲ ಎಂದೇ ಹೇಳಿದ್ದೇವೆ ಸುಪ್ರೀಂಕೋರ್ಟ್ ಮುಂದೆಯೂ ಅರ್ಜಿ ಹಾಕಿದ್ದೆವು ಎಂದು ಹೇಳಿದರು.
ಸಾಮಾನ್ಯ ಪರಿಸ್ಥಿತಿಯಲ್ಲಿ 177.25 ಟಿ ಎಂಸಿ ನೀರನ್ನು ಒಂದು ವರ್ಷದಲ್ಲಿ ಬಿಡಬೇಕೆಂದು ಆದೇಶವಿದೆ. ನಮ್ಮ ರಾಜ್ಯಕ್ಕೆ 284. 85 ಟಿಎಂಸಿ ನೀರು ಅಗತ್ಯವಿದೆ. ಸುಪ್ರೀಂ ಕೋರ್ಟ್ ನಲ್ಲಿ ಸಂಕಷ್ಟ ಸೂತ್ರ ಸಿದ್ಧಪಡಿಸಿಲ್ಲ. 2 ಸಮಿತಿಗಳಾಗಬೇಕೆಂದು ನ್ಯಾಯಮಂಡಳಿಯೇ ತೀರ್ಮಾನ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಮಗೆ ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ನೀರಾವರಿಗೆ ಅಗತ್ಯವಿದೆ. 30 ಟಿಎಂಸಿ ಕುಡಿಯುವ ನೀರಿಗೆ ಅಗತ್ಯ. ಜೊತೆಗೆ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯವಾಗಿದೆ. ರಾಜ್ಯಕ್ಕೆ ಒಟ್ಟು 106 ಟಿಎಂಸಿ ಅವಶ್ಯಕತೆ ಇದೆ. ಆದರೆ ನಮ್ಮ ಬಳಿ ಇರುವುದು ಕೇವಲ 50 ಟಿಎಂಸಿ ನೀರು. ನಮ್ಮ ಮೊದಲ ಆದ್ಯತೆ ಕುಡಿಯುವ ನೀರು ಎಂದು ಹೇಳಿದರು.