Onion Price :ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತ- ರೈತರ ಕಣ್ಣಲ್ಲಿ ನೀರು !

Onion Price : ರಾಜ್ಯದಲ್ಲಿ ತರಕಾರಿ, ದಿನೋಪಯೋಗಿ ವಸ್ತುಗಳ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಈ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ಟೊಮ್ಯಾಟೊ ಬೆಲೆ ಭಾರೀ ಏರಿಕೆಯಾಗಿತ್ತು. ಟೊಮ್ಯಾಟೋ (Tomato) ಬೆಲೆ ಗಗನಕ್ಕೇರಿ ರಾಷ್ಟ್ರವ್ಯಾಪಿ ಆತಂಕಕ್ಕೆ ಕಾರಣವಾಗಿತ್ತು. ಇದರಿಂದ ಭಾರತೀಯ ಅಡುಗೆ ಮನೆಗಳ (Indian kitchen) ಮೇಲೆ ತೀವ್ರ ಪರಿಣಾಮ ಬೀರಿತ್ತು.
ಈ ಮಧ್ಯೆ ಸಾಕಷ್ಟು ರೈತರು ಟೋಮೆಟೋ ಮಾರಿ ಭಾರೀ ಹಣ ಸಂಪಾದಿಸಿದರು. ಇದೀಗ ಟೊಮೆಟೋ ಬೆಲೆ ಕಡಿಮೆಯಾಗಿದೆ. ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಈ ಬೆನ್ನಲ್ಲೇ ಈರುಳ್ಳಿ ಬೆಲೆಯಲ್ಲಿ (Onion Price) ಭಾರೀ ಕುಸಿತಕಂಡಿದೆ. ಇದರಿಂದ ರೈತರ ಕಣ್ಣಲ್ಲಿ ನೀರು ಹರಿದುಬರುತ್ತಿದೆ. ಹೌದು, ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ. ಇದೀಗ ಕೇಂದ್ರ ಸರ್ಕಾರ ಈರುಳ್ಳಿಯ ರಫ್ತು ಸುಂಕ ಹೆಚ್ಚಳಗೊಳಿಸಿದ್ದು, ಇದರ ಪರಿಣಾಮ ದಿಢೀರ್ ಈರುಳ್ಳಿ ಬೆಲೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ರೈತರು, ಪ್ರತಿವರ್ಷ 40 ಸಾವಿರ ಹೆಕ್ಟೇರ್ ಗೂ ಅಧಿಕ ಈರುಳ್ಳಿ ಬಿತ್ತನೆ ಮಾಡುತ್ತಿದ್ದರು. ಆದ್ರೆ ಕಳೆದ ವರ್ಷ ಸುರಿದ ಅತಿಯಾದ ಮಳೆಯಿಂದಾಗಿ ಲಾಭ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ತಡವಾಗಿ ಬಿತ್ತನೆ ಮಾಡಿದ ಕೋಟೆನಾಡಿನ ರೈತರು ಸುಮಾರು 20 ಹೆಕ್ಟೇರ್ ನಷ್ಟು ಮಾತ್ರ ಈರುಳ್ಳಿ ಬಿತ್ತನೆ ಮಾಡಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರವು ಶೇ.40ರಷ್ಟು ಈರುಳ್ಳಿಯ ರಫ್ತು ಸುಂಕವನ್ನು ಹೆಚ್ಚಿಸಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಡೀರ್ ಕುಸಿದಿದೆ. ಒಂದು ಕೆ.ಜಿ ಈರುಳ್ಳಿಗೆ ಕೇವಲ 10ರೂಪಾಯಿ ಯಷ್ಟು ಬೆಲೆ ಮಾತ್ರ ರೈತರಿಗೆ ಸಿಕ್ತಿದೆ. ಇದರಿಂದಾಗಿ ಈರುಳ್ಳಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಹಾಗಾಗಿ ಈರುಳ್ಳಿ ರಫ್ತು ಸುಂಕವನ್ನು ಕಡಿತಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.