Banana price hike: ಕೆಂಪು ಸುಂದರಿಯ ನಂತರ ಇದೀಗ ಹಳದಿ ಬೆಡಗಿ ಬಾಳೆಹಣ್ಣಿಗೆ ಬಂಗಾರದ ಬೆಲೆ: 1 ಕೆಜಿ 100 ರೂ.ಗಡಿಯಲ್ಲಿ ಮಾರಾಟ, 150 ರೂ. ಏರುವ ಸಾಧ್ಯತೆ !
Agriculture news banana price today in karnataka market banana price likely to hike above 100 rupees
Banana price hike: ಕೆಂಪು ಸುಂದರಿ ದೇಶಾದ್ಯಂತ ತನ್ನ ಬೆಲೆಯನ್ನು ಹೆಚ್ಚಿಸಿಕೊಂಡು ಗಗನಮುಖಿಯಾಗಿ ನಿಂತು ಮೆರೆದು ಇದೀಗ ಇಳಿಕೆಯ ದಾರಿ ಕಂಡು ಕೊಂಡಿದ್ದಾಳೆ. ಅದರ ಮಧ್ಯೆ ಸಾವಿರಾರು ರೈತರನ್ನು ಆಕೆ ಕೋಟ್ಯಾಧಿಪತಿ ಮಾಡಿದ್ದಾಳೆ. ಈಗ ಹಳದಿ ಹಣ್ಣಿನ ಸರದಿ. ಈಗ ಮಾರ್ಕೆಟ್ ನಲ್ಲಿ ಹಳದಿ ಸುಂದರಿ ತನ್ನ ಪಾರುಪತ್ಯ ಮೆರೆಯಲು ಹೊರಟಿದ್ದಾಳೆ. ಶ್ರಾವಣ ಮಾಸದ ಆರಂಭವಾಗಿ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಈಗ ಎಲ್ಲೋ ಸುಂದರಿ ಕಾಸ್ಟ್ಲಿ ಸಿಂಗಾರ ಮಾಡಿಕೊಂಡು ನಿಂತಿದ್ದಾಳೆ. ಹೌದು, ಟೊಮ್ಯಾಟೋ ನಂತರ ಇದೀಗ ಬಾಳೆಹಣ್ಣಿನ (Banana) ಬೆಲೆ ಗಗನಕ್ಕೆ ಏರುತ್ತಿದೆ(Banana price hike) . ಸದ್ಯ ಬಾಳೆಹಣ್ಣು ಬೆಳೆದವರಿಗೆ ಜಾಕ್‍ಪಾಟ್ ಎನ್ನುವಂತಾಗಿದ್ದು ಬಾಳೆ ಬೆಳೆದ ರೈತನ (Farmer) ಬದುಕು ಬಂಗಾರದ ಹಾದಿ ಹಿಡಿದಿದೆ.
ಟೊಮೆಟೋ ಬೆಲೆ ಈಗ ಕಡಿಮೆಯಾಗಿದೆ. ಆದರೆ ಟೊಮೆಟೋ ರೀತಿಯಲ್ಲಿ ಈಗ ಹೆಚ್ಚು ಸದ್ದು ಮಾಡುತ್ತಿರುವುದು ಬಾಳೆ ಹಣ್ಣು. ಇನ್ನೇನು ಶ್ರಾವಣ ಮಾಸ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಲಿದ್ದು, ಅದರ ಜತೆ ಸಾಲು ಸಾಲು ಮಹತ್ವದ ಮತ್ತು ಮಹಿಳೆಯರು ಮರೆಯದೆ ಆಚರಿಸೋ ಬಿಡುವ ಹಬ್ಬಗಳು ಬರುತ್ತಿವೆ. ವರಮಹಾಲಕ್ಷ್ಮಿ, ಗೌರಿ- ಗಣೇಶ, ದಸರಾ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳಿವೆ. ಈ ಹಿನ್ನೆಲೆಯಲ್ಲಿ ಕದಳಿ ಫಲಕ್ಕೆ ಭಾರಿ ಬೇಡಿಕೆ. ಬಾಳೆಹಣ್ಣು ನಮ್ಮ ಎಲ್ಲ ದೇವರಿಗೂ ಅತ್ಯಂತ ಪ್ರಿಯವಾದ ಹಣ್ಣು. ಹಾಗಾಗಿ ಹಬ್ಬದ ಸಂದರ್ಭದಲ್ಲಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಬಾಳೆ ಹಣ್ಣು ಬೆಳೆದ ರೈತರಿಗೆ ಜಾಕ್‍ಪಾಟ್ ಬೆಲೆ ಸಿಗುತ್ತಿದೆ. ಏಲಕ್ಕಿ ಬಾಳೆಹಣ್ಣು ಬೆಳೆದಿರುವ ಕೋಲಾರ ಜಿಲ್ಲೆಯ ರೈತ ಒಬ್ಬರಿಗೆ ಭರ್ಜರಿ ಬೆಲೆ ಸಿಕ್ಕಿದೆ. ಐದು ಲಕ್ಷ ರೂಪಾಯಿ ಬಂಡವಾಳ ಹಾಕಿ 15 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಪ್ರಭಾಕರ್ ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಬಾಳೆಹಣ್ಣು ಬೆಳೆದಿದ್ದು, ಉತ್ತಮ ಫಸಲು ಬಂದಿದೆ. ರೈತರು ತೋಟದಲ್ಲೇ ಒಂದು ಕೆ.ಜಿ. ಬಾಳೆಹಣ್ಣಿಗೆ 75-80 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ವಿವಿಧ ಮಾರುಕಟ್ಟೆಗಳಿಂದ, ವಿವಿಧ ಕಂಪನಿಗಳು ರೈತರ ತೋಟಕ್ಕೆ ಇಳಿದು ಬಾಳೆಹಣ್ಣು ಖರೀದಿ ಮಾಡುತ್ತಿರುವುದೇ ತೋರಿಸುತ್ತದೆ ಬಾಳೆ ಹಣ್ಣಿನ ಇಂದಿನ ಮಹತ್ವವನ್ನು.
ಇತ್ತೀಚೆಗೆ ಬಹುತೇಕ ಕಡೆಗಳಲ್ಲಿ ಹೆಚ್ಚಾಗಿ ಟೊಮೆಟೋ ಸೇರಿದಂತೆ ಹೆಚ್ಚು ತರಕಾರಿ ಬೆಳೆಗಳನ್ನೇ ರೈತರು ಬೆಳೆದಿದ್ದರು. ಅದರಲ್ಲೂ ಟೊಮ್ಯಾಟೋ ರೋಗಗಳಿಗೆ ತುತ್ತಾಗಿ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆ ಟೊಮೆಟೋಗೆ ಅತಿ ಹೆಚ್ಚಿನ ಬೆಲೆ ಬಂದಿತ್ತು. ಹಾಗಾಗಿ ಮತ್ತೆ ಬಹುತೇಕ ರೈತರು ಟೊಮೆಟೋ ಬೆಳೆಯನ್ನೇ ಬೆಳೆಯುತ್ತಿದ್ದಾರೆ. ಬಾಳೆ ವಾರ್ಷಿಕ ಬೆಳೆ ಇದಕ್ಕಾಗಿ ಸರಾಸರಿ ಹನ್ನೊಂದು ತಿಂಗಳಿಂದ ಒಂದು ವರ್ಷ ಕಾಯಬೇಕು. ಆದರೆ ಟೊಮೆಟೋ ಅಥವಾ ತರಕಾರಿ ಬೆಳೆಗಳು ಎರಡು ಮೂರು ತಿಂಗಳಲ್ಲೇ ಆದಾಯ ತರುತ್ತದೆ. ಹಾಗಾಗಿ ರೈತರು ದೀರ್ಘಕಾಲಿಕ ಬೆಳೆ ಬೆಳೆಯಲು ಮನಸ್ಸು ಮಾಡದೆ ತರಕಾರಿ ಬೆಳೆಯುತ್ತಿದ್ದಾರೆ. ಆದರೆ ಕೆಲವೇ ಕೆಲವು ರೈತರು ಮಾತ್ರ ಬಾಳೆ ಬೆಳೆ ಬೆಳೆದಿದ್ದಾರೆ. ಅಂಥವರು ಇವತ್ತು ಚಿನ್ನದ ರೇಟಿಗೆ ಬಾಳೆ ಮಾರುತ್ತಿದ್ದಾರೆ.
ಟೊಮೆಟೋ ರೀತಿ ಬಾಳೆ ಬೆಳೆದ ರೈತರೂ ಕೂಡಾ ಲಕ್ಷಾಧೀಶ್ವರರು ಹಾಗೂ ಕೋಟ್ಯಧೀಶ್ವರರಾಗಲಿದ್ದಾರೆ ಅನ್ನೋದು ಮಾರುಕಟ್ಟೆ ಪಂಡಿತರ ಅಭಿಪ್ರಾಯ. ಈಗ ಮಾರುಕಟ್ಟೆಯಲ್ಲೇ ಏಲಕ್ಕಿ ಬಾಳೆ ಹಣ್ಣಿಗೆ ಕೆಜಿಗೆ 100 ರೂ. ಮೇಲೆ ಇದ್ದು, ಇನ್ನು ಹಬ್ಬಗಳು ಶುರು ಆದರೆ ಬಾಳೆ ಹಣ್ಣು ಬೆಲೆ ಸುಲಭವಾಗಿ 150 ರೂಪಾಯಿಗೆ ಏರುತ್ತದೆ ಅನ್ನೋದು ರೈತರೊಬ್ಬರ ಅಭಿಪ್ರಾಯ.
Comments are closed.