Zilla Panchayat: ಜಿಲ್ಲಾ ಪಂಚಾಯಿತಿಗಳ ಗಡಿ ನಿಗದಿ ಮಾಡಲು ಮಾರ್ಗಸೂಚಿ ಪ್ರಕಟ !

Latest Karnataka news fixing border for Zilla Panchayat elections limits guidelines

Zilla Panchayat: ರಾಜ್ಯದಲ್ಲಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿದ್ದು, ಇದೀಗ ಜಿಲ್ಲಾ ಪಂಚಾಯಿತಿಗಳ (Zilla Panchayat) ಗಡಿ ನಿಗದಿ ಮಾಡಲು ಮಾರ್ಗಸೂಚಿ ಪ್ರಕಟವಾಗಿದೆ. ಹೌದು, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಜಿಲ್ಲಾ ಪಂಚಾಯಿತಿಗಳ ಗಡಿ ನಿಗದಿ ಮಾಡಲು ಮಾರ್ಗಸೂಚಿಯನ್ನು ಪ್ರಕಟಿಸಿದೆ.

 

ಚುನಾಯಿತ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸುವಾಗ ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರಲ್ಲಿ ಜಿಲ್ಲೆಯ ತಾಲ್ಲೂಕುಗಳಿಂದ ಇಪ್ಪತ್ಯದಕ್ಕಿಂತಲೂ ಕಡಿಮೆಯಿಲ್ಲದಂತೆ ಚುನಾಯಿತ ಸದಸ್ಯರಿರಬೇಕು. ಪ್ರತಿಯೊಂದು ತಾಲ್ಲೂಕಿನಿಂದ ಚುನಾಯಿತರಾಗತಕ್ಕ ಸದಸ್ಯರ ಸಂಖ್ಯೆಯನ್ನು ನಲವತ್ತು ಸಾವಿರದ ಜನಸಂಖ್ಯೆಗೆ ಅಥವಾ ಅದರ ಭಾಗಕ್ಕೆ ಒಬ್ಬ ಸದಸ್ಯನಂತೆ ನಿಗದಿಪಡಿಸಲಾಗಿದೆ. ಏಳು ಲಕ್ಷಕ್ಕಿಂತ ಹೆಚ್ಚಿನ ಆದರೆ ಒಂಬತ್ತು ಲಕ್ಷದ ಐವತ್ತು ಸಾವಿರವನ್ನು ಮೀರಿರದ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯ ಸಂದರ್ಭದಲ್ಲಿ ಇಪ್ಪತೆಂಟು ಚುನಾಯಿತ ಸದಸ್ಯರಿರಬೇಕು.

ಮಾರ್ಗಸೂಚಿ ವಿವರಗಳು :
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 163ರನ್ನಯ ಜಿಲ್ಲಾ ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮೆಯನ್ನು ನಿರ್ಧರಿಸುವಾಗ, ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವ/ ನಗರ ಸ್ಮಳೀಯ ಸಂಸ್ಥೆಗಳಾಗಿ ಪರಿವರ್ತನೆಗೊಂಡಿರುವ ಗ್ರಾಮಾಂತರ ಪ್ರದೇಶಗಳನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು ಎಂದು ಮಾರ್ಗಸೂಚಿ ಹೇಳಿದೆ.

ಪ್ರತಿಯೊಂದು ಚುನಾವಣಾ ಕ್ಷೇತ್ರದ ಜನಸಂಖ್ಯೆಯಲ್ಲಿ ಸಾಧ್ಯವಾಗುವಷ್ಟರ ಮಟ್ಟಿಗೆ ಹೆಚ್ಚಿನ ವ್ಯತ್ಯಾಸವಿರದಂತೆ ನಿಗಾವಹಿಸಬೇಕು. ಹೊಸದಾಗಿ ರಚಿಸುವ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಹೆಸರನ್ನು ನಿಗದಿಪಡಿಸುವಾಗ 2015ರ ಅಧಿಸೂಚನೆಯಲ್ಲಿ ಇದ್ದಂತೆ ನಿಗದಿಪಡಿಸುವುದು. 2015ರಲ್ಲಿ ಇಲ್ಲದಿದ್ದಲ್ಲಿ ಸದರಿ ಕ್ಷೇತ್ರಗಳಲ್ಲಿನ ಅತಿ ಹೆಚ್ಚು ಜನಸಂಖ್ಯೆಯಿರುವ ಗ್ರಾಮದ ಹೆಸರನ್ನು, ಐತಿಹಾಸಿಕ, ಶೈಕ್ಷಣಿಕ, ಸಾಂಸ್ಕೃತಿಕ, ವಾಣಿಜ್ಯ, ಇತ್ಯಾದಿ ಮಹತ್ವವಿರುವ ಗ್ರಾಮದ ಹೆಸರನ್ನು ಚುನಾವಣಾ ಆ ಕ್ಷೇತ್ರದ ಹೆಸರನ್ನಾಗಿ ಪರಿಗಣಿಸಬೇಕು. ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ರಚಿಸುವಾಗ ಯಾವುದೇ ತಾಲೂಕು ಪಂಚಾಯತ್ ಕ್ಷೇತ್ರವು ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಭಜನೆಯಾಗದಂತೆ ನೋಡಿಕೊಳ್ಳಬೇಕು.

ತಾಲೂಕಿನಲ್ಲಿರುವ ಗ್ರಾಮ ಪಂಚಾಯತಿಗಳನ್ನು ವಿಭಜಿಸದ ಪೂರ್ಣ ಗ್ರಾಮ ಪಂಚಾಯತಿಗಳನ್ನು ಒಟ್ಟುಗೂಡಿಸಿ, ಜಿಲ್ಲಾ ಪಂಚಾಯತಿಯ ಚುನಾವಣಾ ಕ್ಷೇತ್ರ ರಚನೆಯಾಗುವಂತೆ ನೋಡಿಕೊಳ್ಳಬೇಕು. ಈ ವೇಳೆ ಅಕ್ಕಪಕ್ಕದ (ಭೌಗೋಳಿಕವಾಗಿ ಹೊಂದಿಕೊಂಡಿರುವಂತಹ) ಗ್ರಾಮ ಪಂಚಾಯತಿಗಳನ್ನು ಒಟ್ಟುಗೂಡಿಸಬೇಕು ಹಾಗೂ ಈ ಒಗ್ಗೂಡುವಿಕೆಯಿಂದ ಉಂಟಾಗುವ ಪ್ರದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚಾರ ಮತ್ತು ಸಂಪರ್ಕ ವ್ಯವಸ್ಥೆ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು.

ಜಿಲ್ಲಾಧಿಕಾರಿಗಳು, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳ ಸೀಮಾ ನಿರ್ಣಯಗಳನ್ನು ನಿಯಮಾನುಸಾರ ಕೂಲಂಕುಷವಾಗಿ ಹಾಗೂ ಸ್ಥಳೀಯವಾಗಿ ಪರಿಶೀಲಿಸಿ ಕ್ಷೇತ್ರಗಳ ಗಡಿಗಳನ್ನು ಗುರುತಿಸಬೇಕು. ಗಡಿಗಳನ್ನು ಗುರುತಿಸಿದ ನಂತರ ಪ್ರಸ್ತಾವನೆಗಳನ್ನು ಆಯೋಗಕ್ಕೆ ಸಲ್ಲಿಸುವ ಪೂರ್ವದಲ್ಲಿ ಒಟ್ಟು ಪ್ರಕ್ರಿಯೆಯ ಭಾಗವಾಗಿ ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆದು, ಪರಿಶೀಲಿಸಿ ಪ್ರಸ್ತಾವನೆಗಳನ್ನು ಸಲ್ಲಿಸತಕ್ಕದ್ದು.

ಜಿಲ್ಲಾಧಿಕಾರಿಗಳು ಪ್ರಸ್ತಾವನೆಯನ್ನು ಆಯೋಗಕ್ಕೆ ಸಲ್ಲಿಸುವಾಗ ಇದರೊಂದಿಗೆ ಲಗತ್ತಿಸಿರುವ ನಮೂನೆ 1ರಲ್ಲಿ ನಿಗದಿ ಪಡಿಸಿರುವ ಅನುಬಂಧ 1, 2, 3 ಮತ್ತು 4 ರಲ್ಲಿ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಿಗೆ ಸಂಬಂಧಿಸಿದ ಮಾಹಿತಿಯ ವಿವರವನ್ನು ನಕ್ಷೆಗಳೊಂದಿಗೆ ಸಲ್ಲಿಸುವುದು. ನಕ್ಷೆಗಳನ್ನು ಸಿದ್ಧಪಡಿಸುವಾಗ ಪ್ರತಿ ತಾಲ್ಲೂಕಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ತಾಲ್ಲೂಕು ಪಂಚಾಯತಿ ಕ್ಷೇತ್ರಗಳನ್ನೂಳಗೊಂಡ ಪ್ರತ್ಯೇಕ ನಕಾಶೆ, ಜಿಲ್ಲಾ ಪಂಚಾಯತಿ ಕ್ಷೇತ್ರಗಳನ್ನೊಳಗೊಂಡ ಪ್ರತ್ಯೇಕ ನಕಾಶ ಸಿದ್ಧಪಡಿಸಿ ಸಲ್ಲಿಸುವುದು.
ನಕ್ಷೆಯಲ್ಲಿ ತಾಲ್ಲೂಕು/ ಜಿಲ್ಲಾ ಪಂಚಾಯತಿ ಕ್ಷೇತ್ರದ ಕ್ರಮ ಸಂಖ್ಯೆ ಹೆಸರು ಹಾಗೂ ಜನಸಂಖ್ಯೆಯ ವಿವರವನ್ನು ನಕ್ಷೆಯ ಬಲ ಭಾಗದಲ್ಲಿ ಪಟ್ಟಿ ಮಾಡಿ ನಮೂದಿಸುವುದು. ನಕಾಶೆಯಲ್ಲಿ ನದಿ, ಬೆಟ್ಟ, ಗುಡ್ಡ, ಅರಣ್ಯ ಪ್ರದೇಶಗಳನ್ನು ಸಂಕೇತದ ಮೂಲಕ ಗುರುತಿಸುವುದು.

ಇದನ್ನೂ ಓದಿ: Muharram Prediction : ಕೇಸರಿ‌ ವಸ್ತ್ರ ಹಿಡಿದು ಲಾಲಸಾಬ್ ಅಜ್ಜ ನುಡಿದ್ರು ಭಯಾನಕ ಭವಿಷ್ಯ!!!

Leave A Reply

Your email address will not be published.