Dakshina Kannada: ದಕ್ಷಿಣ ಕನ್ನಡ ಬಿಜೆಪಿ MP ಅಭ್ಯರ್ಥಿ: ಯಾರು ಹಿತವರು ನಿನಗೆ, ಈ ನಾಲ್ವರೊಳಗೆ ?!
Political news dakshina kannada bjp mp selection
Dakshina Kannada: ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ಬಾರಿಯ ಸಂಸದ ಸ್ಥಾನಕ್ಕೆ ಹೊಸ ಮುಖ ಪರಿಚಯಿಸುವ ಬಗ್ಗೆ ಈಗಾಗಲೇ ಬಿಜೆಪಿ ಪಾಳಯದಲ್ಲಿ ಬಿರುಸಿನ ಚರ್ಚೆ, ಮೀಟಿಂಗ್ ಗಳು ನಡೆಯುತ್ತಿದೆ ಎನ್ನಲಾಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೇರಿದ್ದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಗ್ಗೆ ಈಗಾಗಲೇ ಕಾರ್ಯಕರ್ತರು ಸ್ಥಳೀಯ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಎನ್ನುವ ಮಾತುಗಳು ಕೇಳಿ ಬಂದಿದೆ. ಈಗ ಕಟೀಲ್ ಅವರೂ ಸೇರಿದಂತೆ ನಾಲ್ವರ ಹೆಸರು ಕೇಳಿ ಬಂದಿದೆ.
ಕಳೆದೊಂದು ವರ್ಷಗಳ ಹಿಂದೆ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಕಟೀಲ್ ವಿರುದ್ಧ ಕಾರ್ಯಕರ್ತರು ಸಿಡಿದೆದ್ದಿದ್ದು ಇದರ ಬೆನ್ನಲ್ಲೇ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಅಭ್ಯರ್ಥಿಗಳ ಆಯ್ಕೆಯಲ್ಲಿ ಲೋಪವಾಗಿದೆ ಎನ್ನುವಂತೆ ಮತ್ತೊಮ್ಮೆಆಕ್ರೋಶ, ಚಪ್ಪಲಿ ಹಾರದ ಬ್ಯಾನರ್ ಸಹಿತ ಪೊಲೀಸರ ದೌರ್ಜನ್ಯದ ಹಿಂದೆ ಕಟೀಲ್ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು.
ಈ ನಡುವೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸ ಮುಖ ಪರಿಚಯಿಸುವ ಕಾರ್ಯಕರ್ತರ ಒತ್ತಾಯ ಮುಗಿಲು ಮುಟ್ಟಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸೋಲಲ್ಲೂ ಇತಿಹಾಸ ಸೃಷ್ಟಿಸಿದ್ದ ಅರುಣ್ ಕುಮಾರ್ ಪುತ್ತಿಲ ಏಕಾಏಕಿಯಾಗಿ ಓರ್ವ ಅಭ್ಯರ್ಥಿಯಾಗಿ ಉದ್ಭವವಾಗಿಬಿಟ್ಟಿದ್ದರು. ಪುತ್ತಿಲ ಪರಿವಾರ ಎಂಬ ಸಂಘಟನೆ ಸ್ಥಾಪಿಸಿಕೊಂಡು ತಮ್ಮನ್ನು ಮುಂದಿನ ಬಿಜೆಪಿಯ ಎಂಪಿ ಅಭ್ಯರ್ಥಿ ಎಂದು ಘೋಷಿಸಬೇಕು ಎನ್ನುವಷ್ಟರ ಮಟ್ಟಿಗೆ ಅರುಣ್ ಪ್ ಬಳಗದಿಂದ ಅಭಿಯಾನಗಳು ನಡೆಯುತ್ತಿವೆ. ಹತ್ತಾರು ( ನೂರಾರು ?!) ವಾಟ್ಸಾಪ್ ಗ್ರೂಪ್ಗಳನ್ನು ರಚಿಸಿಕೊಂಡು ಬಿಜೆಪಿಯ ಮುಂದಿನ ಲೋಕಸಭಾ ಅಭ್ಯರ್ಥಿಯ ತನಕ್ಕೆ ಬಿರುಸಿನ ಸ್ಪರ್ಧೆ ಒಡ್ಡುತ್ತಿದ್ದಾರೆ ಅರುಣ್ ಕುಮಾರ್ ಪುತ್ತಿಲ.
ಅವರ ಜೊತೆಗೆ ಇದೀಗ ಇನ್ನೊಂದು ಹೊಸ ಮುಖದ ಹೆಸರು ಬಿರುಸಿನಿಂದ ಮುನ್ನಲೆಗೆ ಬಂದಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದುಕೊಂಡು ಕಾನೂನು ಅಧ್ಯಯನ ಮಾಡಿ ಡಾಕ್ಟ್ರೇಟ್ ಪಡೆದಿರುವ ಅರುಣ್ ಶ್ಯಾಮ್, ನಳಿನ್ ಕುಮಾರ್ ಕಟೀಲ್ ಸಹಿತ ಮಂಗಳೂರಿನ ಬ್ರಿಜೇಶ್ ಚೌಟ ಹೀಗೇ ನಾಲ್ವರ ಹೆಸರು ಮುನ್ನೆಲೆಗೆ ಬಂದಿದೆ.
ಕೆಲ ಸಮಯದಿಂದ ಮೂರು ಹೆಸರು ಮಾತ್ರವೇ ಮುಂಚೂಣಿಯಲ್ಲಿದ್ದು, ಆದರೆ ಇಂದು ಮಂಗಳೂರಿನ ಡೊಂಗರಕೇರಿಯಲ್ಲಿ ನಡೆದ ಬಿಜೆಪಿ ಸಭೆಯೊಂದರಲ್ಲಿ ಅರುಣ್ ಶ್ಯಾಮ್ ಉಪಸ್ಥಿತಿ ಕಂಡುಬಂತು. ಪಕ್ಷದ ಪ್ರಮುಖರ ಆಪ್ತರಾಗಿರುವ ಪುತ್ತೂರು ಈಶ್ವರಮಂಗಲ ಮೂಲ ನಿವಾಸಿ ಆಗಿರುವ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ ಹೈಕೋರ್ಟ್ ವಕೀಲರಾಗಿರುವ ಅರುಣ್ ಶ್ಯಾಮ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತುಗಳು ಮೂಲಗಳಿಂದ ಗುಸುಗುಸು ಸುದ್ದಿಯಾಗಿದೆ.
ಇನ್ನೊಂದು ಕಡೆ ನಿವೃತ್ತ ಮಿಲಿಟರಿ ಅಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೂಡಾ ದೊಡ್ಡ ಮಟ್ಟದ ಆಕಾಂಕ್ಷೆ ಇಟ್ಟು ಕೊಂಡು ಎಂಪಿ ಟಿಕೆಟ್ ಗೆ ಕಣ್ಣು ನೆಟ್ಟು ಕೂತಿದ್ದಾರೆ.
ಇತ್ತ ಹಾಲಿ ಸಂಸದ ಕಟೀಲ್ ಕಣಕ್ಕಿಳಿದರೆ ಪಕ್ಷೇತರರಾಗಿ ಪುತ್ತಿಲ ಕಣಕ್ಕೆ ಇಳಿಯುತ್ತಾರೆ, ಬಿಜೆಪಿ ಟಿಕೆಟ್ ನೀಡುವ ನಿರೀಕ್ಷೆಯಲ್ಲಿರುವ ಪುತ್ತಿಲ ಅಭಿಮಾನಿಗಳು ಮತ್ತೊಮ್ಮೆ ಒಂದಾಗುತ್ತಾರೆ ಎನ್ನುವ ಮುಂದಾಲೋಚನೆಯಿಂದ ಈ ಸಲ ಅಭ್ಯರ್ಥಿ ಬದಲಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನಿರೀಕ್ಷೆಯಲ್ಲಿರುವ ಪುತ್ತಿಲ-ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡುವುದೇ? ಒಂದು ವೇಳೆ ಈ ಬಾರಿ ಎಂಪಿ ಟಿಕೆಟ್ ಕೂಡಾ ಪಡೆಯಲು ವಂಚಿತರಾದರೆ, ಮತ್ತೊಮ್ಮೆ ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರೆಯೇ? ಎನ್ನುವುದಕ್ಕೆ ಕಾಲವೇ ಉತ್ತರ ಹೇಳಬೇಕು. ಒಂದು ವೇಳೆ ಕಟೀಲ್ ಅವರಿಗೆ ಈ ಸಲ ದಕ್ಷಿಣ ಕನ್ನಡದಲ್ಲಿ ಲೋಕಸಭಾ ಟಿಕೆಟ್ ಮಿಸ್ ಆದರೆ ಅವರು ಬೆಂಗಳೂರಿನಲ್ಲಿ ಟಿಕೆಟ್ ಪಡೆದುಕೊಳ್ಳುವ ನಿರೀಕ್ಷೆ ಇದೆ. ಇದೀಗ ಬೆಂಗಳೂರು ಉತ್ತರದಲ್ಲಿ ಡಿವಿ ಸದಾನಂದ ಗೌಡರು ಲೋಕಸಭಾ ಸದಸ್ಯರಾಗಿದ್ದು ಮುಂದಿನ ಸಲ ಅವರಿಗೆ ಬೆಂಗಳೂರು ಉತ್ತರದಲ್ಲಿ ಎಂಪಿ ಸೀಟು ಸಿಗುವುದು ದುರ್ಲಭ ಎನ್ನಲಾಗುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಅವಕ್ಕಪಗೆ ಪಾತ್ರರಾದ ಡಿವಿ ಸದಾನಂದ ಗೌಡರು ಬಲಿಷ್ಠ ರೈಲ್ವೆ ಖಾತೆಯನ್ನು ಕಳೆದುಕೊಂಡು ಆನಂತರ ಇನ್ನೊಂದು ಅಪ್ರಾಮುಖ್ಯ ಖಾತೆಯನ್ನು ಪಡೆದುಕೊಂಡಿದ್ದರು. ಕೊನೆಗೆ ಅದು ಕೂಡ ಕೈತಪ್ಪಿ ಹೋಗಿತ್ತು. ಈ ಹಿಂದೆ ಚಂದ್ರೇಗೌಡರು ಪ್ರತಿನಿಧಿಸಿ ಗೆದ್ದುಕೊಂಡು ಬರುತ್ತಿದ್ದ ಬೆಂಗಳೂರು ಉತ್ತರವನ್ನು ಸದ್ಯ ಪ್ರತಿನಿಧಿಸುತ್ತಿರುವ ಡಿವಿ ಸದಾನಂದ ಗೌಡರ ನಂತರ, ಅಂದರೆ ಮುಂದಿನ 2024 ರ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಅತ್ತ ಹೋಗುವುದು ಒಂದು ಸಾಧ್ಯತೆ. ಆದರೆ ಬೆಂಗಳೂರು ಉತ್ತರ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ಅಲ್ಲಿಗೆ ಶೆಟ್ಟಿ ಸಮುದಾಯದ ಕಟೀಲ್ ಹೊಂದಿಕೆ ಆಗೋದಿಲ್ಲ. ಇತ್ತ ಉಡುಪಿ ಚಿಕ್ಕಮಗಳೂರು ಸಂಸದೆ ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಅವರು ಬೇರೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಅವರಿಗೆ ಹೇಳಿ ಮಾಡಿಸಿದ ಹಾಗಿದೆ ಬೆಂಗಳೂರು ಉತ್ತರ. ಉಡುಪಿ ಕ್ಷೇತ್ರ ಶೋಭಾ ಕರಂದ್ಲಾಜೆ ಅವರ ಪಾಲಿಗೆ ಮುಂದಿನ ಬಾರಿ ಕಬ್ಬಿಣದ ಕಡಲೆಯಾಗುವುದು ನಿಶ್ಚಿತ. ಕಾರಣ ಇದೀಗ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿರುವ ಬಿಜೆಪಿಯಿಂದ ನೇಮಿಸಲ್ಪಟ್ಟಿರುವ ಜಯಪ್ರಕಾಶ್ ಹೆಗಡೆಯವರು ಮುಂದಿನ ಬಾರಿ ಕಾಂಗ್ರೆಸ್ ಪಕ್ಷದ ಕೈ ಹಿಡಿಯುವ ಸಕಲ ಲಕ್ಷಣಗಳು ಕಂಡುಬರುತ್ತಿವೆ. ಹಾಗಾಗಿ ನಳಿನ್ ಕುಮಾರ್ ಕಟೀಲ್ ಅವರಿಗೆ ಒಂದು ಸೂಕ್ತ ಕ್ಷೇತ್ರವನ್ನು ಹುಡುಕಿ ಕೊಡುವುದು ಸವಾಲಿನ ಕೆಲಸವೇ ಸರಿ.
ಒಟ್ಟಾರೆ ನಾಲ್ಕು ಮಂದಿ ಪ್ರಬಲ ಆಕಾಂಕ್ಷಿಗಳು ಬಿಜೆಪಿ ಟಿಕೆಟ್ ಹಾಗಿ ಜಿದ್ದಾಜಿದ್ದಿನ ಸ್ಪರ್ಧೆಯ ತಮ್ಮ ತಮ್ಮೊಳಗೆ ಒಡ್ಡಿ ಬಡಿದಾಡಿಕೊಳ್ಳುವುದಂತು ಸತ್ಯ. ಚುನಾವಣೆಗೆ ಯಾವ ರೀತಿಯ ಸ್ಪರ್ಧೆ ಇರುತ್ತದೋ ಅಂತದ್ದೇ ಸ್ಪರ್ಧೆ ಅಭ್ಯರ್ಥಿ ಆಯ್ಕೆಯಲ್ಲೂ ಆಗುವುದು ಖಚಿತ. ಇವೆಲ್ಲಾ ದೂರದ ಮಾತಾಯಿತು. ಈಗ, ಮುಂದಿನ ದಕ್ಷಿಣ ಕನ್ನಡದ ಲೋಕಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ‘ಯಾರು ಹಿತವರು ನಿನಗೆ, ಈ ನಾಲ್ವರೊಳಗೆ’ ಎನ್ನುವುದನ್ನು ಮತದಾರರು ತಮಗೆ ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ