Dakshina Kannada: ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ: ನೈಜ ಆರೋಪಿ ಪತ್ತೆಗೆ ಮಹೇಶ್ ಶೆಟ್ಟಿ ತಿಮರೋಡಿ ಜೊತೆ ಅರುಣ್ ಕುಮಾರ್ ಪುತ್ತಿಲ ಹೋರಾಟಕ್ಕೆ ?

Rape case murder case Mahesh Shetty Timarodi and Arun Kumar Puttila to provide justice in the case of soujanya killing

Dakshina Kannada: ಕಳೆದ ಹನ್ನೊಂದು ವರ್ಷಗಳ ಹಿಂದೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಒಬ್ಬ ಆರೋಪಿ ಕೂಡಾ ಈಗ ಬಿಡುಗಡೆ ಆಗಿದ್ದಾನೆ. ಆರೋಪಿ ಸಂತೋಷ್ ರಾವ್ ದೋಷಮುಕ್ತಗೊಂಡ ಬೆನ್ನಲ್ಲೇ ನೈಜ ಆರೋಪಿ ಯಾರು ಎನ್ನುವ ಸಂಶಯ ಬಲವಾಗಿ ಕಾಡಿದೆ. ಅವತ್ತು ಬಿಚ್ಚಲ್ಲ ಬೆಳಕಿನಲ್ಲಿ ವಿದ್ಯಾರ್ಥಿನಿ ಸೌಜನ್ಯ ಕೊಲೆಯಾದ ಕಾರಣದಿಂದಾಗಿ ಕಣ್ಮರೆಯಾಗಿ ನಂತರ ಅತ್ಯಾಚಾರಗೊಂಡು ಕೊಲೆಯಾದ ಕಾರಣದಿಂದ ಅದು ಸಹಜ ಸಾವು ಆಗಿರೋದಕ್ಕೆ ಸಾಧ್ಯವೇ ಇಲ್ಲ. ಈ ಕೊಲೆಯಲ್ಲಿ ಓರ್ವ ಅಥವಾ ಅಧಿಕ ಮಂದಿ ಆರೋಪಿಗಳು ಇದ್ದೇ ಇದ್ದಾರೆ. ಇರಲೇ ಬೇಕು. ಹಾಗಾದರೆ, ಆ ಆರೋಪಿಗಳು ಯಾರು ? ಈಗ ಘಟನೆ ನಡೆದು 10 ವರ್ಷ ಕಳೆದು ಹೋದರೂ ಏನಾಯಿತು ? ಸತ್ಯ ಪರಿಶೋಧನೆಗೆ ಇಳಿದರೆ ಇನ್ನೂ ನಿಜಾಂಶ ಹೊರ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಮತ್ತೆ ತನಿಖೆ ಆಗಬೇಕು ಎಂಬ ಕೂಗು ಎದ್ದಿದೆ. ಸೌಜನ್ಯಾಗೆ ನ್ಯಾಯ ಕೊಡಿಸಲು ಮೊದಲಿನಿಂದ ಇವತ್ತಿನ ತನಕ ಹೋರಾಡಿಕೊಂಡು ಬಂದಿರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ದನಿಯೆತ್ತಿದ್ದಾರೆ. ಈ ಮಧ್ಯ ಮಾನವ ಹಕ್ಕುಗಳ ಆಯೋಗವು ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ.

ಅಲ್ಲದೆ ಸೌಜನ್ಯರ ಪೋಷಕರು ಕಳೆದ ಹತ್ತು ವರ್ಷಗಳಿಂದ ಮಗಳಿಗೆ ನ್ಯಾಯ ಕೊಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಇವತ್ತಿಗೂ ಅವರು ಮಗಳಿಗೆ ನ್ಯಾಯ ಕೊಡಿಸುವ ಆಸೆಯನ್ನು ಬಿಟ್ಟು ಕೊಟ್ಟಿಲ್ಲ. ನೈಜ ಆರೋಪಿಗಳ ಪತ್ತೆಗೆ ಮತ್ತೊಮ್ಮೆ ಹೋರಾಟ ಅನಿವಾರ್ಯವಾಗಿದ್ದು, ಈ ಬಾರಿಯ ಹೋರಾಟದಲ್ಲಿ ‘ ಹಿಂದೂ ಹೃದಯ ಸಾಮ್ರಾಟ್’ ಎಂದೇ ತಮ್ಮ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರು ಜೊತೆಯಾಗಲಿದ್ದಾರೆಯಾ ಎನ್ನುವ ಮಾತು ಬಲವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದಲ್ಲದೆ, ಬಿಜೆಪಿಯ ಕೆಲ ನಾಯಕರಿಗೆ ಮುಟ್ಟಿ ನೋಡುವಂತೆ ಮತ ಗಳಿಸಿದ್ದ ಅಪಾರ ಅಭಿಮಾನಗಳ ‘ಹಿಂದೂ ಹೃದಯ ಸಾಮ್ರಾಟ್’ ಎಂದೇ ಕರೆಸಿಕೊಳ್ಳುತ್ತಿರುವ ಅರುಣ್ ಕುಮಾರ್ ಪುತ್ತಿಲ ಸೌಜನ್ಯ ಪರ ನಿಲ್ಲಲಿದ್ದಾರಾ ಎನ್ನುವ ಪ್ರಶ್ನೆ ತನ್ನಿಂತಾನೆ ತೆರೆದುಕೊಂಡಿದೆ. ಈ ಹಿಂದೆ ಬ್ಯಾನರ್ ವಿಚಾರದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿದ್ದ ಯುವಕರ ಬಿಡುಗಡೆ, ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇವೆ ಎನ್ನುತ್ತಿರುವ ಅರುಣ್ ಕುಮಾರ್ ಪುತ್ತಿಲರವರು ಮತ್ತು ಅವರದೇ ಬ್ರಾಂಡ್ ‘ ಪುತ್ತಿಲ ಪರಿವಾರ’ ಸೌಜನ್ಯ ಪರ ಹೋರಾಟ ಇಳಿಯುತ್ತಾರೆಯಾ ಎನ್ನುವ ಪ್ರಶ್ನೆ ಎದ್ದಿದೆ.

ಇದೀಗ ದಕ್ಷಿಣ ಕನ್ನಡ ಆದ್ಯಂತ ಪುತ್ತಿಲ ಪರಿವಾರದ ಮೂಲಕ ಕೇಸರಿ ಧ್ವಜಗಳನ್ನು ಪಟಪಟಿಸುತ್ತಾ ದಂಡಯಾತ್ರೆಯ ತರ ದಿನಕ್ಕೊಂದು ಕಡೆ ಸಾಗಿ ಭಾಷಣ ಮಾಡಿ ಜನರನ್ನು ಒಗ್ಗೂಡಿಸುತ್ತಿರುವ ಪುತ್ತಿಲ ಪರಿವಾರ ದಿಟ್ಟ ನಿರ್ಧಾರ ಕೈಗೊಳ್ಳುವ ಸಮಯ ಸನ್ನಿಹಿತವಾಗಿದೆ. ಈಗ ದಕ್ಷಿಣ ಕನ್ನಡದಲ್ಲಿ ಎಲ್ಲಿಯೇ ಏನೇ ಘಟನೆಯಾಗಲಿ, ಮರುದಿನ ಅಲ್ಲಿ ಪ್ರತ್ಯಕ್ಷ ಆಗುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರು ಅಲ್ಲಿ ಪ್ರತ್ಯಕ್ಷ ಆಗುತ್ತಿದ್ದಾರೆ ಮತ್ತು ಆಯಾ ಘಟನೆಗೆ ಅನುಸಾರವಾಗಿ ಒಂದು ಸಾಂತ್ವನದ ಅಥವಾ ಖಂಡನೆಯ ಹೇಳಿಕೆಗಳನ್ನು ಅರುಣ್ ಕುಮಾರ್ ಪುತ್ತಿಲ ನೀಡುತ್ತಿರುವುದು ನಾವು ದಿನಂಪ್ರತಿ ನೋಡುತ್ತಿದ್ದೇವೆ. ಆದರೆ ಸೌಜನ್ಯ ಹತ್ಯೆಯಲ್ಲಿ ಬಂಧಿತ ಆಗಿದ್ದ ಏಕೈಕ ಆರೋಪಿ ಕೂಡಾ ಬಿಡುಗಡೆ ಆದ ಸಂದರ್ಭಗಳಲ್ಲಿ, ಅರುಣ್ ಕುಮಾರ್ ಪುತ್ತಿಲ ಏನೊಂದೂ ಪ್ರತಿಭಟಿಸದೇ, ಹೇಳಿಕೆ ನೀಡದೆ ಇರುವುದು ಆಶ್ಚರ್ಯ ಮೂಡಿಸಿದೆ.

ಅದೇನೇ ಇರಲಿ, ದಕ್ಷಿಣ ಕನ್ನಡದ ರಾಜಕೀಯ ಮತ್ತು ಸಾಮಾಜಿಕ ನಾಯಕತ್ವ ವಹಿಸಿಕೊಳ್ಳಲು ಅರುಣ್ ಕುಮಾರ್ ಪುತ್ತಿಲ ಅವರಿಗೆ ಇದೊಂದು ಸ್ವರ್ಣ ಅವಕಾಶ. ಹೇಗೂ ಮಹೇಶ್ ಶೆಟ್ಟಿ ತಿಮರೋಡಿ ಅವರು ಇವತ್ತಿಗೂ ಹೋರಾಟ ಕೈ ಬಿಟ್ಟಿಲ್ಲ. ಒಟ್ಟಾರೆ ದಕ್ಷಿಣ ಕನ್ನಡದ ಎಂಪಿ ಆಗಲು ತುದಿಗಾಲಲ್ಲಿ ನಿಂತು ಕುಣಿಯುತ್ತಿರುವ ಅರುಣ್ ಕುಮಾರ್ ಪುತ್ತಿಲ ಈಗ ತಮ್ಮಇಚ್ಛಾಶಕ್ತಿ ಪ್ರದರ್ಶಿಸಬೇಕು. ಸೌಜನ್ಯಾ ಪರ ಹೋರಾಟವನ್ನು ತನ್ನ ಎಲ್ಲಾ ಬೆಂಬಲಿಗರನ್ನು ಒಗ್ಗೂಡಿಸಿಕೊಂಡು ಮರು ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಇಡೀ ದಕ್ಷಿಣ ಕನ್ನಡ ಅರುಣ್ ಕುಮಾರ್ ಪುತ್ತಿಲ ಅವರಿಂದ ಸೂಕ್ತ ಕ್ರಿಯೆಯನ್ನು ಮತ್ತು ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದೆ.

 

ಇದನ್ನು ಓದಿ: Daily horoscope: ಈ ರಾಶಿಯ ನಿರುದ್ಯೋಗಿಗಳಿಗೆ ಹೊಸ ಅವಕಾಶದ ಬಾಗಿಲು ತೆರಯುತ್ತದೆ ! 

Leave A Reply

Your email address will not be published.