

Chapati in Pressure cooker: ಚಪಾತಿಯು ಹೆಚ್ಚಿನ ಭಾರತೀಯ ಮನೆಗಳಲ್ಲಿ ಮಾಡುವ ಸಾಮಾನ್ಯ ತಿನಿಸು. ರೊಟ್ಟಿ, ಚಪಾತಿ ಮಾಡುವುದೂ ನಮಗೆ ಹೊಸದೇನು ಅಲ್ಲ. ಬಹುತೇಕ ಎಲ್ಲರಿಗೂ ಚಪಾತಿ ಮಾಡುವ ವಿಧಾನದ ಬಗ್ಗೆ ಗೊತ್ತಿದೆ. ಚಪಾತಿಯನ್ನ ಮಾಡೋಕೆ ಚಪಾತಿ ಹಿಟ್ಟು ಲಟ್ಟಿಸಿ, ಕಾಯಿಸಲು, ಲಟ್ಟಣಿಗೆ, ಚಪಾತಿ ಮಣೆ ಮತ್ತು ಕಾವಲಿ ಬೇಕೇ ಬೇಕು. ಆದರೆ, ಎಂದಾದರೂ ಕುಕ್ಕರ್‌ನಲ್ಲಿ ಚಪಾತಿ (Chapati in Pressure cooker) ಮಾಡುವುದನ್ನು ನೋಡಿದ್ದೀರಾ…?
ಅರೆ! ಇದೇನಿದು ಪ್ರೆಷರ್ ಕುಕ್ಕರ್ ನಲ್ಲಿ ಚಪಾತಿ ಮಾಡಲು ಸಾಧ್ಯವೇ? ಎಂಬ ಪ್ರಶ್ನೆ ಈಗಾಗಲೇ ನಿಮ್ಮನ್ನು ಕಾಡಿರಬಹುದು. ಈ ಪ್ರಶ್ನೆಗೆ ‘ಹುಂ’ ಎಂಬ ಉತ್ತರವನ್ನು ನೀಡುತ್ತಿದೆ ಈ ವಿಡಿಯೋ. ಇಲ್ಲೊಬ್ಬ ಮಹಿಳೆ, ಕಾವಲಿ ಇಲ್ಲದೆ ಚಪಾತಿಯನ್ನು ಕುಕ್ಕರ್ ನಲ್ಲಿ ಮಾಡುವ ವಿಧಾನದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮಹಿಳೆ ಮೊದಲು ಅಡುಗೆ ಮನೆಯಲ್ಲಿ ಒಲೆ ಹಚ್ಚಿ, ಅದರ ಮೇಲೆ ಖಾಲಿ ಪ್ರೆಶರ್ ಕುಕ್ಕರನ್ನು ಇಡುತ್ತಾರೆ. ಬಳಿಕ ಒಲೆಯ ಉರಿಯನ್ನು ಹೆಚ್ಚಿಸುತ್ತಾರೆ. ಆ ನಂತರ ಮಹಿಳೆ, ಚಪಾತಿಯ ಮಣೆಯ ಮೇಲೆ ಲಟ್ಟಣಿಗೆಯಿಂದ ಒಂದರ ನಂತರ ಒಂದು ಮೂರು ಚಪಾತಿಗಳನ್ನು ಲಟ್ಟಿಸುತ್ತಾರೆ. ಬಳಿಕ ಪ್ರೆಶರ್ ಕುಕ್ಕರ್ ಒಳಗೆ ಒಂದರ ಮೇಲೊಂದು ಆ ಎಲ್ಲಾ ಮೂರು ಚಪಾತಿಗಳನ್ನು ಇಟ್ಟು, ಕುಕ್ಕರ್ನ ಮುಚ್ಚಳವನ್ನು ಗ್ಯಾಸ್ಕೆಟ್ ಸೀಲಿಂಗ್ ರಿಂಗ್ ಸಮೇತ ಮುಚ್ಚಿ ವೇಯ್ಟ್ ವಾಲ್ವ್ ಅನ್ನು ಹಾಕುತ್ತಾರೆ.
ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿದ ಬಳಿಕ ವೀಕ್ಷಕರಿಗೆ ಮೂರು ನಿಮಿಷ ಕಾಯುವಂತೆ ಹೇಳುತ್ತಾರೆ. ಸ್ವಲ್ಪ ಸಮಯದ ಬಳಿಕ, ಮಹಿಳೆ ಪ್ರೆಶರ್ ಕುಕ್ಕರ್‌ನ ಮುಚ್ಚಳವನ್ನು ತೆಗೆದು, ಸ್ಕಿಮ್ಮರ್ನನ ಸಹಾಯದಿಂದ ಚಪಾತಿಯನ್ನು ಸ್ವಚ್ಛವಾದ ತಟ್ಟೆಯ ಮೇಲೆ ಇಡುತ್ತಾರೆ. ನಂತರ ತಟ್ಟೆಯನ್ನು ಎತ್ತಿಕೊಂಡು , ಚೆನ್ನಾಗಿ ಬೆಂದಿರುವ ಆ ಚಪಾತಿಗಳನ್ನು ವೀಕ್ಷಕರಿಗೆ ತೋರಿಸುತ್ತಾರೆ.
ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡಿದ್ದಾರೆ. ಕೆಲವರಿಗೆ ಇದು ಸಾಧ್ಯವೇ ಎಂಬ ಅನುಮಾನವೂ ಇದೆ. ಆದರೆ ಇದೇನು ಹೊಸದಾಗಿ ಮಾಡಿದ ಪ್ರಯತ್ನವೇನಲ್ಲ. ಹಾಗಂತ, ಇದೊಂದೇ ಅಲ್ಲ ನೀವೇನಾದರೂ ಪ್ರೆಶರ್ ಕುಕ್ಕರ್‌ನಲ್ಲಿ ಚಪಾತಿ ಮಾಡೋದು ಹೇಗೆ ಎಂಬ ಪ್ರಶ್ನೆಯನ್ನ ಗೂಗಲ್‌ಗೆ ಕೇಳಿದ್ರೆ ಸಾಕಷ್ಟು ವಿಡಿಯೋಗಳು ಕಾಣಸಿಗುತ್ತವೆ.













