Solar Water Heater: ಏಕಾಏಕಿ ಸೋಲಾರ್ ವಾಟರ್ ಹೀಟರ್ ಪ್ರೋತ್ಸಾಹಧನ ರದ್ದು! ಗೃಹಜ್ಯೋತಿ ಎಫೆಕ್ಟ್!!
Congress guarantee graha jyoti scheme effect Karnataka State Power distribution companies withdraw solar water heater rebate after graha Jyoti scheme announced
Solar water heater rebate : ಇತ್ತೀಚೆಗೆ ಮನೆಯ ಮೇಲ್ಛಾವಣಿ ಮೇಲೆ ಎಲ್ಲಿ ನೋಡಿದರೂ ಸೋಲಾರ್ ವಾಟರ್ ಹೀಟರ್ (Solar Water Heater) ಕಾಣುತ್ತವೆ. ಹೌದು, ಸೋಲಾರ್ನಿಂದ ವಿದ್ಯುತ್ ಉಳಿತಾಯವಾಗುತ್ತದೆ ಎನ್ನುವುದು ಮಧ್ಯಮ ವರ್ಗದವರ ನಂಬಿಕೆ. ಇದಕ್ಕೆ ಪೂರಕವಾಗಿ ವಿದ್ಯುತ್ ಸರಬರಾಜು ಕಂಪೆನಿಗಳು ಕೆಲ ವರ್ಷದಿಂದ ಸೋಲಾರ್ ಬಳಕೆ ಪ್ರೋತ್ಸಾಹಿಸಲು ಪ್ರೋತ್ಸಾಹಧನವನ್ನೂ ನೀಡುತ್ತಿವೆ.
ಆ ಪ್ರಕಾರ ಗ್ರಾಹಕ ಬಳಸುವ ವಿದ್ಯುತ್ನ ಪ್ರತಿ ಯೂನಿಟ್ಗೆ 50ಪೈಸೆವರೆಗೂ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೊಳಿಸಲಾಯಿತು. ಅದು ಅತಿ ಹೆಚ್ಚು ಎಂದರೆ 50 ರೂ. ಪ್ರೋತ್ಸಾಹ ಧನ ಪಡೆಯಲು ಅವಕಾಶವಿತ್ತು. ಮನೆಗಳಲ್ಲಿ ಪ್ರತ್ಯೇಕ ಸೋಲಾರ್ ಹೀಟರ್ಗೆ ಈ ನಿಯಮ ಅನ್ವಯವಾಗುತ್ತಿತ್ತು. ಅಂದರೆ ಸೋಲಾರ್ ವಾಟರ್ ಹೀಟರ್ ಬಳಸುವ ಪ್ರತಿ ಮನೆಗೆ ವರ್ಷಕ್ಕೆ 600 ರೂ.ವರೆಗೂ ಉಳಿತಾಯವಾಗುತ್ತಿತ್ತು. ಅಪಾರ್ಟ್ಮೆಂಟ್ಗಳಲ್ಲಿ 100 ಮನೆ ಇದ್ದರೆ ಉಳಿತಾಯದ ಲೆಕ್ಕ 60,000. ಇದಕ್ಕೆ ಇದ್ದ ನಿಯಮ ಪ್ರತಿ ಸೋಲಾರ್ ಹೀಟರ್ ಸಾಮರ್ಥ್ಯ 100 ಲೀಟರ್ನದ್ದು ಇರಬೇಕು. ಕೆಲ ವರ್ಷದಿಂದ ಇದು ಜಾರಿಯಾಗಿ ಜನಪ್ರಿಯವೂ ಆಗಿತ್ತು.
ಆದರೆ ಇದೀಗ ಕರ್ನಾಟಕದಲ್ಲಿ ವಿದ್ಯುತ್ ಸರಬರಾಜು ಕಂಪೆನಿಗಳು ನೀಡುತ್ತಿದ್ದ ಸೋಲಾರ್ ವಾಟರ್ ಹೀಟರ್ ಪ್ರೋತ್ಸಾಹಧನವನ್ನು (Solar water heater rebate) ರದ್ದುಪಡಿಸಿವೆ.
ಹೌದು, ಜೂನ್ ತಿಂಗಳು ಬಂದಿರುವ ವಿದ್ಯುತ್ ಬಿಲ್ನಲ್ಲಿ ಸೋಲಾರ್ ವಾಟರ್ ಹೀಟರ್ ಪ್ರೋತ್ಸಾಹಧನ ಇಲ್ಲ. ಬಹಳಷ್ಟು ಗ್ರಾಹಕರು ಏಕಾಏಕಿ ಹೀಗೆ ಪ್ರೋತ್ಸಾಹಧನ ರದ್ದುಗೊಳಿಸಿದ್ದನ್ನು ಗಮನಿಸಿ ಆಶ್ಚರ್ಯಗೊಂಡಿದ್ದಾರೆ. ಆದರೆ ಬಹಳಷ್ಟು ಗ್ರಾಹಕರು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಕರೆ ಮಾಡಿ ವಿಚಾರಿಸಿದರೆ ಇದು ಸರ್ಕಾರದ ನಿರ್ಧಾರ ಎನ್ನುವ ಉತ್ತರ ದೊರೆತಿದೆ.
ಕಾಂಗ್ರೆಸ್ ಸರ್ಕಾರ ಈಗ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಜಾರಿಗೊಳಿಸುತ್ತಿದೆ. ಇದರಡಿ ಉಚಿತವಾಗಿ ವಿದ್ಯುತ್ ನೀಡುತ್ತಿದ್ದು, ಎಲ್ಲಾ ಪ್ರೋತ್ಸಾಹಧನಗಳನ್ನು ರದ್ದುಪಡಿಸಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಗ್ರಾಹಕರಿಗೆ ನೇರವಾಗಿ ನೀಡುತ್ತಿದ್ದ ಸೋಲಾರ್ ವಾಟರ್ ಹೀಟರ್ ಪ್ರೋತ್ಸಾಹಧನ ನಿಲ್ಲಿಸಲಾಗಿದೆ ಎನ್ನುವ ವಿವರಣೆಯನ್ನು ನೀಡಲಾಗುತ್ತಿದೆ.
ವಿದ್ಯುತ್ ಕಂಪೆನಿಯ ಅಧಿಕಾರಿಯೊಬ್ಬರ ಪ್ರಕಾರ, ಜನ ನಾನಾ ರೂಪದಲ್ಲಿ ಸೋಲಾರ್ ಬಳಕೆ ಮಾಡುವುದನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕೆ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ. ಈಗ ಸೋಲಾರ್ ವಿದ್ಯುತ್ ಬಳಕೆ ಮಾಡುವವರ ಪ್ರಮಾಣ ಅಧಿಕವಾಗಿದೆ. ಆದರೆ ಈಗ ಗೃಹ ಜ್ಯೋತಿ ಯೋಜನೆ (Gruha Jyoti Effect) ಜಾರಿಗೊಂಡ ನಂತರ ಪ್ರೋತ್ಸಾಹಧನ ಕಡಿತ ಮಾಡಲಾಗುತ್ತಿದ್ದು, ಸೋಲಾರ್ ವಾಟರ್ ಹೀಟರ್ಗೆ ನೀಡುತ್ತಿದ್ದ 50 ರೂ. ಪ್ರೋತ್ಸಾಹಧನವೂ ಈ ತಿಂಗಳಿನಿಂದ ಸ್ಥಗಿತಗೊಂಡಿದೆ ಎಂದು ಖಚಿತಪಡಿಸಿದರು.
ಇದನ್ನೂ ಓದಿ: Japan: ಲೈಂಗಿಕ ಸಮ್ಮತಿಯ ವಯಸ್ಸನ್ನು 13 ರಿಂದ 16 ಕ್ಕೆ ಏರಿಸಿತು ಈ ದೇಶ! ಎಲ್ಲಾ ಕಡೆಯಿಂದ ಮೆಚ್ಚುಗೆ!