Nandini vs Milma: ಕರ್ನಾಟಕದ ಖ್ಯಾತ ನಂದಿನಿ ಉತ್ಪನ್ನಕ್ಕೆ ಕೇರಳದಲ್ಲಿ ವಿರೋಧ! ಸಚಿವೆಯಿಂದ ನಂದಿನಿ ಕಳಪೆ ಗುಣಮಟ್ಟ ಎಂದು ಆರೋಪ!

Nandini vs Milma Nandini in Kerala Opposition to Karnataka famous Nandini product in Kerala

Nandini in Kerala: ಕರ್ನಾಟಕಕ್ಕೆ ಗುಜರಾತ್​ನ ಅಮುಲ್ ಡೈರಿ ಬ್ರ್ಯಾಂಡ್​ನ ಉತ್ಪನ್ನಗಳು ಲಗ್ಗೆ ಇಡುತ್ತಿರುವುದಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಇದೀಗ ಕೇರಳದಲ್ಲಿ ನಂದಿನಿ (Nandini in Kerala) ಪ್ರವೇಶಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಹೌದು, ಇದೀಗ ಕರ್ನಾಟಕದ ನಂದಿನಿ ಮತ್ತು ಕೇರಳದ ಮಿಲ್ಮಾ ವಿವಾದ (Nandini vs Milma) ಹೊಸ ತಿರುವು ಪಡೆದಿದೆ.

ಈಗಾಗಲೇ ಕರ್ನಾಟಕದ ಹಾಲು ಸಹಕಾರಿ ಸಂಸ್ಥೆಯಾದ ಕೆಎಂಎಫ್​​ನ (KMF- Karnataka Milk Federation) ನಂದಿನಿ ಬ್ರ್ಯಾಂಡ್​ ಈ ವರ್ಷ ಕೊಚ್ಚಿಯ ಮಾಮಲ್ಲಪುರಂನಲ್ಲಿ ತನ್ನ ಪಾರ್ಲರ್‌ಗಳನ್ನು ತೆರೆದಿದೆ ಮತ್ತು ಮುಂದಿನ ದಿನಗಳಲ್ಲಿ ಇತರ ಪ್ರದೇಶಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ (KCMMF- Kerala Co-operative Milk Marketing Federation) ಇದನ್ನು ಅನೈತಿಕ ಎಂದು ಕರೆದಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳದ ಪಶುಸಂಗೋಪನಾ ಸಚಿವೆ ಜೆ ಚಿಂಚು ರಾಣಿ, ನಂದಿನಿ ಬ್ರ್ಯಾಂಡ್ ಕೇರಳ ಪ್ರವೇಶಿಸುವ ಮುನ್ನ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿತ್ತು. ಈ ಬಗ್ಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ ದೂರು ನೀಡುತ್ತೇವೆ. ನಮ್ಮ ಮನೆಗಳಲ್ಲಿ ಹೆಚ್ಚಾಗಿ ಮಕ್ಕಳು ಹಾಲು ಸೇವಿಸುತ್ತಾರೆ, ಆದರೆ ನಂದಿನಿ ಹಾಲಿನ ಗುಣಮಟ್ಟ ಕಳಪೆಯಾಗಿದೆ. ಹೀಗಾಗಿ ಕೇರಳದ ಜನರು ಕೆಸಿಎಂಎಂಎಫ್​​ನ ಮಿಲ್ಮಾ (Milma) ಹಾಲನ್ನು ಮಾತ್ರ ಸೇವಿಸುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಕೆಸಿಎಂಎಂಎಫ್ ಕೇರಳದಲ್ಲಿ ನಂದಿನಿಯ ಉಪಸ್ಥಿತಿಯನ್ನು ವಿರೋಧಿಸಿತ್ತು ಮತ್ತು ಅದನ್ನು ‘ಅನೈತಿಕ’ ಎಂದು ಕರೆದಿತ್ತು.ಈ ಬಗ್ಗೆ ಮಾತನಾಡಿದ ಮಿಲ್ಮಾ ಬ್ರ್ಯಾಂಡ್‌ನ ಅಧ್ಯಕ್ಷ ಕೆ.ಎಸ್.ಮಣಿ, ನಂದಿನಿಯು ಕೇರಳಕ್ಕೆ ತನ್ನ ಮಾರಾಟವನ್ನು ವಿಸ್ತರಿಸುವ ಕ್ರಮವು ಅನೈತಿಕವಾಗಿದೆ ಮತ್ತು ಭಾರತದ ಡೈರಿ ಸಹಕಾರ ಚಳವಳಿಯ ಉದ್ದೇಶವನ್ನು ನಾಶಪಡಿಸುತ್ತದೆ. ಮೊದಲು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದ ಅವರು ಈಗ ಹಾಲು ಕೂಡ ಮಾರಾಟ ಮಾಡುತ್ತಿದ್ದಾರೆ. ಅವರು ಕೇರಳದಲ್ಲಿ ಹಾಲನ್ನು ಅಂಗಡಿಯಿಂದ ಅಂಗಡಿಗೆ ವಿತರಿಸಲು ಪ್ರಾರಂಭಿಸಿದರು. ಈ ಬಗ್ಗೆ ನಾವು ಕೆಎಂಎಫ್​​ಗೆ ಪತ್ರ ಬರೆದಿದ್ದೇವೆ , ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

ಆದರೆ ಕೆಸಿಎಂಎಂಎಫ್‌ನ ಆಕ್ಷೇಪಗಳಿಗೆ ಕರ್ನಾಟಕದ ಸಹಕಾರ ಸಚಿವ ಕ್ಯಾತಸಂದ್ರ ರಾಜಣ್ಣ ಪ್ರತಿಕ್ರಿಯಿಸಿದ್ದು, ಕೇರಳದಲ್ಲಿ ನಂದಿನಿಯ ವ್ಯವಹಾರದಲ್ಲಿ ಅನೈತಿಕ ಏನೂ ಇಲ್ಲ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಯಾರು ಬೇಕಾದರೂ ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದರಲ್ಲಿ ಅನೈತಿಕವಾದುದೇನೂ ಇಲ್ಲ. ಇದೊಂದು ಸ್ಪರ್ಧೆ, ಗ್ರಾಹಕರು ಉತ್ತಮ ಗುಣಮಟ್ಟವನ್ನು ನೀಡುವ ಉತ್ಪನ್ನವನ್ನು ಮಾತ್ರ ಆಯ್ಕೆ ಮಾಡುತ್ತಾರೆ ಎಂದಿದ್ದಾರೆ.

ಸದ್ಯ ನಂದಿನಿಯ ಹಾಲಿನ ಮಾರಾಟ ಕೇರಳ ದಲ್ಲಿ ಹೆಚ್ಚಾಗುವುದರಿಂದ ಮಿಲ್ಮಾ ಉಳಿವಿನ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ರಾಜ್ಯದ ಹೈನುಗಾರರಿಗೂ ಭಾರಿ ಹೊಡೆತ ಬೀಳಲಿದೆ. ದಿನಕ್ಕೆ 81 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುವ ನಂದಿನಿ, ಅರವತ್ತಕ್ಕೂ ಹೆಚ್ಚು ಹಾಲಿನ ಉತ್ಪನ್ನಗಳನ್ನು ವಿವಿಧ ಹೆಸರಿನಲ್ಲಿ ಮಾರುಕಟ್ಟೆಗೆ ತರುತ್ತಿದೆ.

ಒಟ್ಟಿನಲ್ಲಿ ನಂದಿನಿ ಹಾಲು ರಾಜ್ಯದ ಸಣ್ಣ ಮಳಿಗೆಗಳಿಗೂ ತಲುಪಲು ಆರಂಭಿಸಿರುವುದರಿಂದ ಅಲ್ಲಿನ ಹಾಲು ಮಾರಾಟದ ಮೇಲೆ ಪರಿಣಾಮ ಬೀರಲಿದೆ ಎಂದು ಮಿಲ್ಮಾ ಆತಂಕ ವ್ಯಕ್ತಪಡಿಸುತ್ತಿದೆ.

 

ಇದನ್ನು ಓದಿ:  Dharmastala Sowjanya murdere case: ಕೊನೆಗೂ ದೊರೆಯಲಿಲ್ಲ ನ್ಯಾಯ !! ಧರ್ಮಸ್ಥಳ ವಿದ್ಯಾರ್ಥಿನಿ ಸೌಜನ್ಯ ಕೊಲೆ ಕೇಸಿನಲ್ಲಿ ಸಂತೋಷ್ ರಾವ್ ನಿರ್ದೋಷಿ !!CBI ವಿಶೇಷ ಕೋರ್ಟ್ ಆದೇಶ 

Leave A Reply

Your email address will not be published.