Wrestlers Protest: ನನ್ನ ಟೀ ಶರ್ಟ್ ಎಳೆದು, ಮೆಲ್ಲನೆ ಎದೆಯ ಮೇಲೆ ಕೈ ಸವರಿ…….: ಕೇಂದ್ರ ಸಚಿವ ಬ್ರಿಜ್ ಭೂಷಣ್ ಮೇಲಿನ ಆರೋಪಗಳು ಬಹಿರಂಗ!

wrestlers protest against brij bhushan sharan singh

Wrestlers Protest: ಭಾರತೀಯ ಕುಸ್ತಿ ಫೆಡರೇಷನ್​ (WFI) ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದಾಖಲಾಗಿರುವ ವಿವಿಧ ಆರೋಪಗಳು ಇದೀಗ ಬಹಿರಂಗವಾಗಿದೆ. ಕುಸ್ತಿಪಟುಗಳಿಗೆ ಬ್ರಿಜ್ ಭೂಷಣ್ ಹಲವಾರು ಬಾರಿ ಕಿರುಕುಳ ನೀಡಿದ್ದಾರೆ. ಬ್ರೀತ್‌ ಚೆಕ್‌ ನೆಪದಲ್ಲಿ ಮಹಿಳಾ ರೆಸ್ಲರ್‌ಗಳ (Wrestlers Protest) ಟೀ ಶರ್ಟ್ ಎಳೆದು ಅವರೊಡನೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

 

ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆ ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಇತ್ತೀಚೆಗೆ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್​ಐಆರ್​​ನಲ್ಲಿ ದಾಖಲಾದ ಆರೋಪಗಳು ಇದೀಗ ಬಹಿರಂಗವಾಗಿದೆ. ಸದ್ಯ ಭಾರತದ ಅಗ್ರಮಾನ್ಯ ಕುಸ್ತಿಪಟುಗಳು ಕಳೆದ 40 ದಿನಗಳಿಂದಲೂ ಬ್ರಿಜ್​ ಭೂಷಣ್​ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ (Wrestlers Protest) ನಡೆಸುತ್ತಿದ್ದಾರೆ. ಇನ್ನು ಕುಸ್ತಿಪಟುಗಳು ಏನೆಲ್ಲಾ ಆರೋಪ ಮಾಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಬ್ರಿಜ್ ಭೂಷಣ್ ತಮ್ಮೊಂದಿಗೆ ನಡೆದುಕೊಂಡು ರೀತಿಯ ಬಗ್ಗೆ ಮಹಿಳಾ ಕುಸ್ತಿಪಟುಗಳು ತಮ್ಮ ದುಃಖವನ್ನು ವ್ಯಕ್ತಪಡಿಸಿ, ದೂರಿನಲ್ಲಿ ತಿಳಿಸಿದ್ದಾರೆ. ಮಹಿಳಾ ಕುಸ್ತಿಪಟುವೊಬ್ಬರು “ ಮ್ಯಾಟ್​ ಮೇಲೆ ಮಲಗಿದ್ದಾಗ ಬ್ರಿಜ್​ಭೂಷಣ್​ ಸಿಂಗ್​ (Brij Bhushan Sharan Singh) ನನ್ನ ಬಳಿ ಬಂದು ಅನುಮತಿ ಇಲ್ಲದೆ ನನ್ನ ಟೀ ಶರ್ಟ್​ ಎಳೆದು, ಬ್ರೀತ್‌ ಚೆಕ್‌ ನೆಪದಲ್ಲಿ ನನ್ನ ಎದೆಯ ಮೇಲೆ ಕೈ ಹಾಕಿ, ನಂತರ ಹೊಟ್ಟೆಗೆ ಕೈ ಜಾರಿಸಿದ್ದರು. ಅಲ್ಲದೆ, ಸಹೋದರನ ಜೊತೆ ಅವರು ಕಚೇರಿಗೆ ಹೋಗಿದ್ದಾಗ ತಮ್ಮನನ್ನು ಹೊರಗಿರುವಂತೆ ಹೇಳಿ,
ನಾನು ಒಳಗೆ ಹೋಗುತ್ತಿದ್ದಂತೆ ಬಾಗಿಲು ಹಾಕಿ, ದೈಹಿಕ ಸಂಪರ್ಕಕ್ಕೆ ಯತ್ನಿಸಿದರು.” ಎಂದು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ರೆಸ್ಟೋರೆಂಟ್​ನಲ್ಲಿ ಊಟ ಮಾಡುತ್ತಿದ್ದಾಗ ಬ್ರಿಜ್​ ಭೂಷಣ್ ತನ್ನನ್ನು
ಪ್ರತ್ಯೇಕ ಡೈನಿಂಗ್​ ಟೇಬಲ್’ಗೆ ಕರೆದು ಅನುಮತಿ ಇಲ್ಲದೆ ಎದೆಯ ಮೇಲೆ ಕೈ ಹಾಕಿದರು. ಹೀಗೆ ನಾಲ್ಕೈ ಬಾರಿ ಮಾಡಿದರು. ಅಲ್ಲದೆ,
ಒಂದು ಬಾರಿ ಬ್ರಿಜ್​ ಭೂಷಣ್​ ಸಿಂಗ್​ ಕಚೇರಿಗೆ ಹೋಗಿದ್ದಾಗ ಆತ ತೀರಾ ಅಸಭ್ಯವಾಗಿ ವರ್ತಿಸಿದ್ದು, ಅನುಮತಿ ಇಲ್ಲದೆ, ಅಂಗೈ, ಮೊಣಕಾಲು, ತೊಡೆಗಳು ಹಾಗೂ ಭುಜಗಳ ಮೇಲೆ ಅನುಚಿತವಾಗಿ ಸ್ಪರ್ಶಿಸಿದ್ದಾರೆ. ಕುಳಿತಿರುವಾಗ ಅವರ ಪಾದದಿಂದ ನಮ್ಮ ಪಾದಗಳನ್ನು ಸ್ಪರ್ಶಿಸುತ್ತಿದ್ದರು ಎಂದು ಕುಸ್ತಿಪಟು ಎಫ್​ಐಆರ್​​ನಲ್ಲಿ ದಾಖಲಿಸಿದ್ದಾರೆ.

ಕುಸ್ತಿಗಾಗಿ ಕೆಲವು ಸಲಕರಣೆ ಖರೀದಿಸಲು ಅವರಲ್ಲಿ ಸಹಾಯ ಕೇಳಿದಾಗ ಲೈಂಗಿಕ ಬಯಕೆ ಪೂರೈಸು ಎಂದು ಒತ್ತಾಯಿಸಿದರು. ನನ್ನನ್ನು ಬಲವಂತವಾಗಿ ತಬ್ಬಿಕೊಂಡು, ಹಾಸಿಗೆಗೆ ಬರುವಂತೆ ಕೇಳಿದರು. ಲೈಂಗಿಕ ಕಿರುಕುಳ ನೀಡುತ್ತಿದ್ದರು. ಬೆದರಿಕೆ ಹಾಕುತ್ತಿದ್ದರು. ಅವರ ಕಿರುಕುಳಕ್ಕೆ ಬೇಸತ್ತು‌ ಹೋಗಿ ಕರೆದಾಗ ಗುಂಪು ಗುಂಪಾಗಿ ಹೋಗುತ್ತಿದ್ದೆವು. ಒಂಟಿಯಾಗಿ ಅವರ ಕೈಗೆ ಸಿಗುತ್ತಿರಲಿಲ್ಲ ಎಂದು ಕ್ರೀಡಾಪಟುಗಳು ನೋವನ್ನು ಹೇಳಿಕೊಂಡಿದ್ದಾರೆ.

ಕುಸ್ತಿಪಟುವೊಬ್ಬರು ವಿದೇಶದಲ್ಲಿ ಸ್ಪರ್ಧೆಯ ಸಂದರ್ಭದಲ್ಲಿ ಗಾಯಗೊಂಡಿದ್ದಾಗ ಆಕೆಗೆ ಚಿಕಿತ್ಸೆಗೆ ಹೆಚ್ಚಿನ ವೆಚ್ಚ ತಗುಲಿದ್ದು, ಈ ವೇಳೆ ಭೂಷಣ್ ಆಮಿಷ ಒಡ್ಡಿದ್ದು, ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸಿದರೆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸಂಸ್ಥೆಯೇ ನೋಡಿಕೊಳ್ಳುತ್ತದೆ ಎಂದು ಹೇಳಿದ್ದರು ಎಂದು ಆರೋಪಿಸಿದ್ದಾರೆ.

ಆರೋಗ್ಯದ ಬಗ್ಗೆ ಮಾಹಿತಿ ನೀಡುವ ನೆಪದಲ್ಲಿ ಊಟ ಮಾಡಲು ಕುಳಿತಿದ್ದ ಡೈನಿಂಗ್ ಟೇಬಲ್ ಬಳಿ ಬಂದು ಹೊಟ್ಟೆಯ ಮೇಲೆ ಕೈ ಸವರಿದರು ಎಂದು ಮತ್ತೋರ್ವ ಕುಸ್ತಿಪಟು ಹೇಳಿದ್ದಾರೆ. ತಂಡದೊಂದಿಗೆ ಫೋಟೋ ತೆಗೆಸಿಕೊಳ್ಳುವಾಗ ಭೂಷಣ್ ಬಳಿ ಬಂದು ಭುಜದ ಮೇಲೆ ಕೈ ಹಾಕಿ, ಹಿಂಬದಿಯನ್ನು ಅಸಭ್ಯವಾಗಿ ಕೈಗಳಿಂದ ಮುಟ್ಟಿದ್ದರು. ಓಡಿ ಹೋಗಲು ಯತ್ನಿಸಿದಾಗ ಮತ್ತೆ ಭುಜದ ಮೇಲೆ ಕೈ ಹಾಕಿದರು ಎಂದು ಮತ್ತೊಬ್ಬ ಕುಸ್ತಿಪಟು ತನಗಾದ ಅನ್ಯಾಯವನ್ನು ತೋಡಿಕೊಂಡಿದ್ದಾರೆ.

ಈ ಎಲ್ಲಾ ಗಂಭೀರ ಆರೋಪಗಳ‌ ಹಿನ್ನೆಲೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಎರಡೂ ಎಫ್‌ಐಆರ್‌ಗಳಲ್ಲಿ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವುದು, ಹಲ್ಲೆ ಅಥವಾ ಬಲವಂತ ಪ್ರಯೋಗ), 354 ಡಿ (ಅನುಚಿತ ವರ್ತನೆ), ಮತ್ತು 34 (ಸಾಮಾನ್ಯ ಉದ್ದೇಶ) 354 ಎ (ಲೈಂಗಿಕ ಕಿರುಕುಳ) ಅಡಿ ಪ್ರಕರಣಗಳು ದಾಖಲಾಗಿವೆ. ಇದರ ಪ್ರಕಾರ ಒಂದರಿಂದ ಮೂರು ವರ್ಷಗಳ ಪ್ರಕಾರ, ಶಿಕ್ಷೆಗೆ ಒಳಪಡಿಸುತ್ತವೆ. ಸೆಕ್ಷನ್​ 10ರ ಅಡಿಯಲ್ಲೂ (ಫೋಕ್ಸೋ) ಪ್ರಕರಣ ದಾಖಲಾಗಿದ್ದು, ಭೂಷಣ್’ಗೆ 5 ರಿಂದ 7 ವರ್ಷಗಳ ಶಿಕ್ಷೆಯಾಗಲಿದೆ.

ಇನ್ನು ತನ್ನ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ ಭಾರತೀಯ ಕುಸ್ತಿ ಫೆಡರೇಷನ್​ (WFI) ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಕುಸ್ತಿಪಟುಗಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಿಮ್ಮ ಬಳಿ ಸಾಕ್ಷಿ, ಆಧಾರಗಳು ಇದ್ದರೆ, ಅವುಗಳನ್ನು ಕೋರ್ಟ್​ಗೆ ಹಾಜರುಪಡಿಸಿ, ಆರೋಪ ಸಾಬೀತಾದರೆ ಯಾವುದೇ ಶಿಕ್ಷೆಗೂ ನಾನು ಸಿದ್ದ ಎಂದು ಹೇಳಿದ್ದಾರೆ.

ಇದನ್ನೂ ಓದಿ: District Ministers: ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಯಾರು ಗೊತ್ತೇ? ಇಲ್ಲಿದೆ ಸಂಪೂರ್ಣ ಪಟ್ಟಿ

Leave A Reply

Your email address will not be published.