Puttur: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆಲುವು, ‘ ವೀರ ಪುತ್ತಿಲ ‘ ವೀರೋಚಿತ ಸೋಲು, 3 ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಬಿಜೆಪಿ !
ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಗೆಲುವು ಕಂಡಿದ್ದಾರೆ. ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ತೆರಳಿ ಅಲ್ಲಿಂದ ಸ್ಪರ್ಧಿಸಿದ ಅಶೋಕ್ ರೈ ಅವರು ಗೆದ್ದು ಬೀಗಿದ್ದಾರೆ.
ಈ ಬಾರಿ ಪುತ್ತೂರು ಬಿಜೆಪಿಯಲ್ಲಿನ ಅಭ್ಯರ್ಥಿ ಆಯ್ಕೆಯಲ್ಲಿನ ಟಿಕೆಟ್ ಗೊಂದಲದ ಲಾಭವನ್ನು ಯಶಸ್ವಿಯಾಗಿ ಎತ್ತಿದ ಅಶೋಕ್ ಕುಮಾರ್ ಅವರು ಪುತ್ತೂರಿನಲ್ಲಿ ವಿಜಯಶಾಲಿಯಾಗಿದ್ದಾರೆ. ಆ ಮೂಲಕ ಪುತ್ತೂರು ಬಿಜೆಪಿಯ ಭದ್ರಕೋಟೆ ಚಿದ್ರಗೊಂಡಿದೆ.
ಪುತ್ತೂರಿನಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಹೀನಾಯ ಸೋಲು ಅನುಭವಿಸಿದೆ. ಕಾಂಗ್ರೆಸ್ನ ಅಶೋಕ್ ಕುಮಾರ್ ಅವರಿಗೆ ತೀವ್ರ ಸ್ಪರ್ಧೆ ನೀಡಿದ ಅರುಣ್ ಕುಮಾರ್ ಪುತ್ತಿಲ ಅವರು ವೀರೋಚಿತ ಸೋಲು ಕಂಡಿದ್ದಾರೆ. ಆ ಮೂಲಕ ಬಿಜೆಪಿಯ ಆಶಾ ತಿಮ್ಮಪ್ಪ ಗೌಡ ಅವರು 3 ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು 64,687 ಮತ ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 61336 ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು 36,526 ಮತ ಪಡೆದಿದ್ದಾರೆ.
ಪುತ್ತೂರು ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್ ಹಸ್ತಕ್ಷೇಪ, ಟಿಕೆಟ್ ಆಕಾಂಕ್ಷಿಯಲ್ಲದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಪರಿಣಾಮ ಮತ್ತು ಹಾಲಿ ಶಾಸಕರಿಗೆ ವಿನಾಕಾರಣ ಟಿಕೆಟ್ ನಿರಾಕರಿಸಿದ ಕಾರಣದಿಂದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡಿದ್ದರು. ತಾವು ಈ ಸಲ ಫೀಲ್ಡ್ ಗೆ ಹೋಗಲ್ಲ ಎಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪಕ್ಷದ ಒತ್ತಡಕ್ಕೆ ಮಣಿದು, ಕಾರ್ಯಪ್ರವೃತ್ತ ರಾಗಿದ್ದರು. ಮುನಿಸು ಒಳೊಳಗೆ ಇತ್ತು ಅನ್ನಿಸುತ್ತದೆ. ಬಿಜೆಪಿಯ ಭಾರಿ ಸಂಖ್ಯೆಯ ವೋಟುಗಳು ಪಕ್ಷೇತರ ಅಭ್ಯರ್ಥಿ ಹಿಂದುತ್ವದ ಬಾವುಟದ ಅಡಿಯಲ್ಲಿ ಸ್ಪರ್ಧಿಸಿದ ಅರುಣ್ ಪುತ್ತಿಲ ಅವರಿಗೆ ಹೋಗಿವೆ. ಆ ಮೂಲಕ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.