ಬಿಜೆಪಿಗೆ ಹೀನಾಯ ಸೋಲು: ಕಾರ್ಯಕರ್ತರ ವ್ಯಾಪಕ ಆಕ್ರೋಶ, ಕಾರಣ ಪುರುಷ ಬಿ ಎಲ್ ಸಂತೋಷ್ ಇದರ ಸಂಪೂರ್ಣ ಜವಾಬ್ದಾರಿ ಹೊರಬೇಕಿದೆ !

ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಗಳು ಪ್ರಗತಿಯಲ್ಲಿದ್ದು ಒಂದು ಸ್ಪಷ್ಟ ಚಿತ್ರಣ ಇದಾಗಲೇ ಮತದಾರರಿಗೆ ದೊರಕಿದೆ. ಒಟ್ಟಾರೆಯಾಗಿ ಆಡಳಿತರೂಢ ಬಿಜೆಪಿ ರಾಜ್ಯ ಸರ್ಕಾರವನ್ನು ಮತದಾರರು ತಿರಸ್ಕರಿಸಿದ್ದಾರೆ. ಕರ್ನಾಟಕವನ್ನು ಗುಜರಾತ್ ಮಾದರಿಯಲ್ಲಿ ಚುನಾವಣೆ ಎದುರಿಸಲು ಬಿಎಲ್ ಸಂತೋಷ್ ಹೂಡಿದ ಆಟ ಅಟ್ಟರ್ ಫ್ಲಾಪ್ ಆಗಿದೆ.

 

ಈ ಬಾರಿ ಹೊಸ ಪ್ರಯೋಗಕ್ಕೆ ಬಿಜೆಪಿ ಇಳಿದಿತ್ತು. ಆದರೆ ಹೊಸ ಪ್ರಯೋಗ ಮಾಡುವ ಭರದಲ್ಲಿ ಬಿಜೆಪಿಯಲ್ಲಿ ಕಳೆದ 30 ವರ್ಷಗಳಿಂದ ದುಡಿದ ಹಿರಿಯರಿಗೆ ಅವಮಾನ ಮಾಡಲಾಗಿತ್ತು. ಹಿರಿಯ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಅತ್ತ ಅಥಣಿಯಲ್ಲಿ ಲಕ್ಷ್ಮಣ ಸವದಿ ಅಂತಹ ಜನನಾಯಕರಿಗೆ ಬಿಜೆಪಿ ಟಿಕೆಟ್ ನೀಡದೇ ಗೋಳು ಹೊಯ್ದುಕೊಂಡಿತ್ತು. ರಾಜ್ಯ ಬಿಜೆಪಿಯ ಎರಡನೆಯ ಭೀಷ್ಮ ಈಶ್ವರಪ್ಪನವರಿಗೆ ಟಿಕೆಟ್ ನೀಡದೇ ಕಾಡಿತ್ತು ರಾಜ್ಯ ಬಿಜೆಪಿ. ಅಷ್ಟೇ ಅಲ್ಲದೆ ಒಟ್ಟು 10 ಹತ್ತಿರ 15 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. 75 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ಹೀಗೆ ನೀಡಿದ ಹೊಸ ಮುಖಗಳಲ್ಲಿ ಕೇವಲ 14 ಮಂದಿ ಗೆದ್ದಿದ್ದಾರೆ. 61 ಮಂದಿ ಸೋಲು ಕಂಡಿದ್ದಾರೆ.

ಹಿಂದುತ್ವದ ಪ್ರಯೋಗ ಶಾಲೆ ಎಂದೇ ಖ್ಯಾತನಾದ ಪುತ್ತೂರಿನಲ್ಲಿ ಕೂಡ ಹಾಲಿ ಶಾಸಕ ಸಂಜೀವ ಮಠಂದೂರ್ ಅವರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖವನ್ನು ಬಿಜೆಪಿ ಪರಿಚಯಿಸಿತ್ತು. ಎಲ್ಲಾ ಕಡೆಯಂತೆ ಇಲ್ಲೂ ಸಹ ಸ್ಥಳೀಯ ನಾಯಕತ್ವವನ್ನು ಸ್ಥಳೀಯ ಪದಾಧಿಕಾರಿಗಳ ಇಚ್ಛೆಗೆ ವಿರುದ್ಧವಾಗಿ ಏಕಮುಖದ ನಿರ್ಧಾರ ಕೈಗೊಂಡಿತ್ತು ರಾಜ್ಯ ಬಿಜೆಪಿ. ಅದರ ಹಿಂದೆ ಇರುವುದು ಬಿ ಎಲ್ ಸಂತೋಷ್ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಈಗ ಬಿ ಎಲ್ ಸಂತೋಷ್ ಅವರ ಈ ಏಕ ಮುಖ ನಿರ್ಧಾರವನ್ನು ಬಿಜೆಪಿಯ ಸಾಂಪ್ರದಾಯಿಕ ಮತದಾರರು ಮತ್ತು ಕಾರ್ಯಕರ್ತರು ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ. ಈ ಬಿಜೆಪಿಯ ಆಂತರಿಕ ಗೊಂದಲವನ್ನು ಯಶಸ್ವಿಯಾಗಿ ಹಿಡಿದುಕೊಂಡ ಕಾಂಗ್ರೆಸ್ ಭರ್ಜರಿ ಸಾಧನೆ ಮಾಡಿ ತೋರಿಸಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲಿನತ್ತ ಮುಖ ಮಾಡಿ ನಿಂತಿದೆ.

ಬಿಜೆಪಿ ತನ್ನ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕಾರ್ಯಕರ್ತರ ಅಭಿಪ್ರಾಯಗಳಿಗೆ. ಮನ್ನಣೆ ನೀಡದೇ ತಮಗೆ ಇಷ್ಟ.ಬಂದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇ ಬಿಜೆಪಿ ಸೋಲಿಗೆ ಮೊದಲ ಕಾರಣ. ಯಾವಾಗ ಬಿಜೆಪಿಯ ಈ ನಿರ್ಧಾರಕ್ಕೆ ಬೂತ್ ಮಟ್ಟದಲ್ಲಿ ಅಸಮಾಧಾನ ಮತ್ತು ಪ್ರತಿಭಟನೆಗಳು ಹೆಚ್ಚಾದವು. ಆಗ ಕೇಂದ್ರ ನಾಯಕತ್ವವನ್ನು ಆಯಾ ಕ್ಷೇತ್ರಗಳಿಗೆ ತಂದು ಅವರ ಮೂಲಕ ಪ್ರಭಾವ ಬೀರುವ ಯತ್ನ ಬಿಜೆಪಿಯಿಂದ ನಡೆಯಿತು. ಅದರ ಫಲವಾಗಿ ಅಮಿತ್ ಶಾ, ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿ ಅವರು ಭರ್ಜರಿ ಪ್ರಚಾರ ನಡೆಸಿದರೂ ಅದ್ಯಾವುದಕ್ಕೂ ಬಿಜೆಪಿಯ ಸಾಂಪ್ರದಾಯಿಕ ಮತದಾರ ಸೊಪ್ಪು ಹಾಕಿಲ್ಲ. ತನಗೆ ಇಷ್ಟ ಬಂದ ಅಭ್ಯರ್ಥಿಯನ್ನು ಬಿಜೆಪಿ ಕಾರ್ಯಕರ್ತರು ಗೆಲ್ಲಿಸಿದ್ದಾರೆ.

ಬಿಜೆಪಿಯಲ್ಲಿ ಯಡಿಯೂರಪ್ಪನಂತಹ ದಕ್ಷಿಣದ ಬಿಜೆಪಿ ಹೆಬ್ಬಾಗಿಲು ತೆರೆಸಿದ ನಾಯಕರನ್ನು ಬಿಜೆಪಿ ಅವಮಾನಿಸಿದೆ. ಯಡಿಯೂರಪ್ಪನವರಿಗೆ ಕೂಡಾ ಅಭ್ಯರ್ಥಿ ಆಯ್ಕೆಯಲ್ಲಿ ಹಸ್ತಕ್ಷೇಪ ನಡೆಸಲು ಬಿಡಲಿಲ್ಲ ಬಿ ಎಲ್ ಸಂತೋಷ್.
ಈ ಬಾರಿಯಂತೂ ಬಿಜೆಪಿ ಇನ್ನೂ ಹಲವು ಹಿರಿಯ ನಾಯಕರಿಗೆ ಮತ್ತು ಕೆಲಸಗಾರರಿಗೆ ಅವಮಾನ ಮಾಡಲಾಗಿದೆ. ಇದರ ಎಲ್ಲದರ ಹಿಂದೆ ಇರೋದು ಬಿ ಎಲ್ ಸಂತೋಷ್. ಹಾಗಾಗಿ ಈ ಸಾಲಿನ ಹೊಣೆಯನ್ನು ಬಿ ಎಲ್ ಸಂತೋಷ್ ಅವರೇ ಹೊರಬೇಕಿದೆ.

ಈಗಾಗಲೇ, ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ರಾಜ್ಯ ನಾಯಕರುಗಳನ್ನು ನಿಂದಿಸಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿದೆ. ಏನೇ ಆಗಲಿ ನಳಿನ್ ಕುಮಾರ್ ಕಟೀಲ್ ಈ ಸಲ ಕೇವಲ ನೆಪ ಮಾತ್ರ. ಕಟೀಲ್ ಅವರ ಮಾತುಗಳನ್ನು ಬಿ ಎಲ್ ಸಂತೋಷ್ ಮತ್ತು ತಂಡ ಕೇಳೇ ಇಲ್ಲ. ಕ್ಷೇತ್ರದ ತಮ್ಮ ಒಂದೆರಡು ಆರ್ ಎಸ್ ಎಸ್ ಹುಡುಗರ ಹೇಳಿಕೆಗಳ ಆಧಾರದ ಮೇಲೆ ಬಿ ಎಲ್ ಸಂತೋಷ್ ಎಲ್ಲಾ ನಿರ್ಧಾರವನ್ನು ತನ್ನ ಕೈಗೆ ತೆಗೆದುಕೊಂಡಿದ್ದರು. ಅದಕ್ಕೀಗ ಹೀನಾಯವಾದ ಸೋಲು ಉಂಟಾಗಿದೆ. ಆದುದರಿಂದ ಸಂಘಟನಾ ಕಾರ್ಯದರ್ಶಿಯ ಹುದ್ದೆಯಿಂದ ಸಂತೋಷ ಅವರು ರಾಜೀನಾಮೆ ನೀಡಿ ಹೊರಬರಬೇಕೆಂದು ನೈಜ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Leave A Reply

Your email address will not be published.