Congress Manifesto: ಗೆಲುವಿನ ಸನಿಹದಲ್ಲಿ ಹೆಬ್ಬಂಡೆ ಕಾಲ ಮೇಲೆ: ಭಜರಂಗದಳ ನಿಷೇಧದಿಂದ ಕಾಂಗ್ರೆಸ್ ಕಳಕೊಳ್ಳಬಹುದಾದ ಸೀಟುಗಳು ಎಷ್ಟು ?
Ban on Bajarang Dal: ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಪಾರ್ಟಿ ಮಹಾ ಎಡವಟ್ಟು ಮಾಡಿಕೊಂಡಿದೆ. ತನ್ನ ಕೈಯ್ಯಾರೆ ಹೆಬ್ಬಂಡೆಯೊಂದನ್ನು ತನ್ನ ದೇಹದ ಮೇಲೆ ಎಳೆದುಕೊಂಡಿದೆ.
ಅದು ಕನಕಪುರದಿಂದ ಕಾಲ ಮೇಲೆ ಇಳಿಸಿದ ಬಂಡೆಯಾ ಅಥವಾ ಖರ್ಗೆಯವರು ಕೊಂಡು ತಂದ ಕರಿ ಬಂಡೆಯಾ, ಇಲ್ಲಾ ಸಿದ್ದರಾಮಯ್ಯ ಅದೆಲ್ಲಿಂದಲೋ ಪಾರ್ಸೆಲ್ ಮಾಡಿ ಇಳಿಸಿದರಾ ಗೊತ್ತಿಲ್ಲ: ಹೌದು, ಚುನಾವಣೆ ಗೆಲ್ಲುವ ಸಲುವಾಗಿ, ಅಲ್ಪಸಂಖ್ಯಾತರ ಓಲೈಕೆಗಾಗಿ ತನ್ನ ಪ್ರಣಾಳಿಕೆಯಲ್ಲಿ, ತಾನು ಅಧಿಕಾರಕ್ಕೆ ಬಂದ್ರೆ ಭಜರಂಗದಳ ನಿಷೇಧ (Ban on Bajarang Dal) ಮಾಡೋದಾಗಿ ಪ್ರಸ್ತಾಪಿಸಿದ್ದು ಭಾರತದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್, ಅಲ್ಪಸಂಖ್ಯಾತರ ಓಲೈಸಲು ಹೋಗಿ ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾದಂತಾಗಿದೆ.
ನಿಜ, ರಾಜಕೀಯ ಮಹಾ ಅನುಭವಿಗಳೆ ಇರೋ ಈ ಪಕ್ಷ ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿತಿಲ್ಲ ಅನ್ನುವುದು ಸ್ಪಷ್ಟ. ಈ ಹಿಂದೆ ಕೂಡ ಆರ್ ಎಸ್ ಎಸ್ ಅನ್ನು ಕಾಂಗ್ರೆಸ್ ಪಕ್ಷವು ನಿಷೇಧ ಮಾಡಿತ್ತು. ಆನಂತರ ಏನೆಲ್ಲಾ ಆಗಿತ್ತು ಅನ್ನೋದು ಕಾಂಗ್ರೆಸ್ಸಿಗೆ ತಿಳಿಯದ ವಿಷಯವೇನಲ್ಲ. ಈಗ ಅದ್ಯಾವ ಪುಣ್ಯಾತ್ಮ ಈ ನಿರ್ಧಾರ ಕೈಗೊಂಡರೋ ಗೊತ್ತಿಲ್ಲ. ಆತುರದಲ್ಲಿ ನಿರ್ಧರಿಸಿದ್ದೋ, ಇಲ್ಲ ಯೋಚಿಸಿ ಪ್ರಣಾಳಿಕೆಯಲ್ಲಿ ಸೇರಿಸಿದ್ರೋ ಅದೂ ಗೊತ್ತಿಲ್ಲ. ಇದನ್ನ ಗಮನಿಸಿದ್ರೆ ಬಹುಶಃ ಅವರ್ಯಾರು ಇದನ್ನು ಊಹೆ ಕೂಡ ಮಾಡಿರಲಿಲ್ಲ ಅನ್ನಿಸುತ್ತದೆ. ಈಗ ಭಜರಂಗದಳ ನಿಷೇಧದ ಬಗ್ಗೆ ಮಾತಾಡಿ ಒಂದು ರೀತಿಯಲ್ಲಿ ಕೋಟ್ಯಾಂತರ ಕಾರ್ಯಕರ್ತರನ್ನು ನೇರವಾಗಿಯೇ ಕೆಣಕಿದ ಕಾಂಗ್ರೆಸ್, ತನಗೆ ತಾನೇ ದೊಡ್ಡ ಡ್ಯಾಮೇಜ್ ಮಾಡಿಕೊಂಡಿರೊದಂತೂ ಅಕ್ಷರಶಃ ಸತ್ಯ . ಹೌದು, ಕಾಂಗ್ರೆಸ್ ಗಂತೂ ಈ ನಿರ್ಧಾರ ತುಂಬಾ ದೊಡ್ಡ ಡ್ಯಾಮೇಜ್! ಚುನಾವಣೆಗೆ ಇನ್ನು ಕೇವಲ ಒಂದು ವಾರವಷ್ಟೇ ಬಾಕಿ ಇರುವ ವೇಳೆ ಈ ನಿರ್ಧಾರದಿಂದ, ಇಡೀ ರಾಜ್ಯದಲ್ಲಿ ಚುನಾವಣಾ ಚಿತ್ರಣ ಕಂಪ್ಲೀಟ್ ಬದಲಾಗಿಬಿಟ್ಟಿದೆ, ಮುಂದೆಯೂ ಬದಲಾವಣೆ ಆಗಲಿದೆ.
ಅಳೆದು ತೂಗಿ ನೋಡಿ, ಈ ಭಾರಿಯ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ಉಂಟಾಗುತ್ತದೆ ಎಂದು ಹಲವಾರು ಸಮೀಕ್ಷೆಗಳು ಹೇಳಿವೆ. ಅಲ್ಲದೆ, ಇದರಲ್ಲಿ ಕಾಂಗ್ರೆಸ್ ಪಕ್ಷವೇ ಹೆಚ್ಚು ಸ್ಥಾನ ಗಳಿಸೋದು ಎಂದು ಹೆಚ್ಚಿನ ಸಮೀಕ್ಷೆಗಳು ವರದಿ ಮಾಡಿದ್ದವು. ಹಾಗಿರುವಾಗ ರಾಜ್ಯದಲ್ಲಿ ಕಾಂಗ್ರೆಸ್ ಎಚ್ಚರದ ಹೆಜ್ಜೆ ಇಡಬೇಕಿತ್ತು. ಆದರೆ ಭಜರಂಗದಳ ಬ್ಯಾನ್ ಮಾಡೋ ಒಂದೇ ಒಂದು ನಿರ್ಧಾರ ಇಡೀ ಲೆಕ್ಕಾಚಾರವನ್ನೇ ತಲೆ ಕೆಳಗೆ ಮಾಡಿಬಿಟ್ಟಿತು. ಗೆದ್ದೇ ಗೆಲ್ಲುತ್ತವೆ ಎಂದು ಅಪಾರ ನಿರೀಕ್ಷೆ ಹುಟ್ಟಿಸಿದ್ದ ಕ್ಷೇತ್ರಗಳಲ್ಲೂ ಕೂಡ ಕಡಿಮೆ ಎಂದರೂ 10 ರಿಂದ 15 ಕ್ಷೇತ್ರಗಳು ಕಾಂಗ್ರೆಸ್ ನ ಕೈ ತಪ್ಪೋದಂತೂ ಪಕ್ಕಾ ಎನ್ನುವಂತಾಗಿದೆ.
ಮುಖ್ಯವಾಗಿ ಕಾಂಗ್ರೆಸ್ ನ ಈ ಪ್ರಣಾಳಿಕೆಯೇ ಇದೀಗ ಬಿಜೆಪಿಗೆ ಬಹುದೊಡ್ಡ ಪ್ರಚಾರದ ಅಸ್ತ್ರವಾಗಿ ಬಿಟ್ಟಿತು. ಹೀಗಾಗಿ ಯಾವ ತರದಿಂದೆಲ್ಲ ತಾನಿದನ್ನು ಅಸ್ತ್ರವಾಗಿ ಬಳಸಲು ಸಾಧ್ಯ, ಹೇಗೆಲ್ಲಾ ಇದನ್ನು ಪ್ರಯೋಗಿಸಬಹುದು ಎಂದು ಬಿಜೆಪಿಯು ರಣತಂತ್ರ ಹೂಡುತ್ತಿದೆ. ಅದೂ ಅಲ್ಲದೆ ಕೆಲ ದಿನಗಳಿಂದ ಪ್ರಧಾನಿ ಮೋದಿ ರಾಜ್ಯಾದ್ಯಂತ ಅಬ್ಬರದ ಪ್ರಚಾರ ಮಾಡುತ್ತಿರುವ ಕಾರಣ ಬಿಜೆಪಿಗೆ ತಕ್ಕ ಮಟ್ಟದ ಲಾಭವಂತೂ ಖಂಡಿತಾ ಆಗುತಿತ್ತು. ಆದರೀಗ ಈ ಮಧ್ಯೆ ಕಾಂಗ್ರೆಸ್ ಪ್ರಣಾಳಿಕೆಯೇ, ಕಾಂಗ್ರೆಸ್ ವಿರುದ್ಧ ಪ್ರಯೋಗಿಸಲು ಬರೀ ಅಸ್ತ್ರವಲ್ಲದೆ, ಮಾರಕಾಸ್ತ್ರವಾಗಿ ಬಿಜೆಪಿಯ ಬತ್ತಳಿಕೆಗೆ ಬಂದು ಬಿದ್ದಂತಾಗಿದೆ.
ಕಾಂಗ್ರೆಸ್ ತಾನೇ ತನ್ನ ಪ್ರಣಾಳಿಕೆಯಲ್ಲಿ ಹೇಳಿದ ಹೇಳಿಕೆ ಎದ್ದು ಬಂದು ತನ್ನ ಕುತ್ತಿಗೆಯನ್ನೇ ಹಿಚುಕುವಂತಾಗಿದೆ. ಈಗಾಗಲೇ ಈ ‘ ನಿಷೇಧ ‘ ವಿಷಯ ರಾಜ್ಯದಲ್ಲಿ ಎಷ್ಟು ಪರಿಣಾಮ ಬೀರಿದೆ ಅಂದ್ರೆ ಕೆಲವೆಡೆ “ನಾವು ಭಜರಂಗದಳದವರು, ಕಾಂಗ್ರೆಸ್’ನವರು ಓಟು ಕೇಳಲು ಮನೆ ಬಳಿ ಬಂದರೆ ನಾಯಿ ಬಿಡುತ್ತೇವೆ” ಎಂದು ಫಲಕಗಳನ್ನು ನೇತು ಹಾಕಿದ್ದಾರೆ. ಇನ್ನು ಕೆಲವೆಡೆ “ನಾವು ಭಜರಂಗದಳದವರು, ನಮ್ಮನ್ನು ಬಂಧಿಸಿ” ಎಂದು ಅಭಿಯಾನಗಳನ್ನೂ ಶುರುಮಾಡಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರಿಗೆ, ಅಭ್ಯರ್ಥಿಗಳಿಗೆ ಮುಖ್ಯವಾಗಿ ಕಾರ್ಯಕರ್ತರಿಗಂತೂ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಪ್ರಣಾಳಿಕೆ ಪ್ರಸ್ತಾಪದಲ್ಲಿ ಭಜರಂಗದಳ ನಿಷೇಧ ವಿಷಯ ಗಂಭೀರ ರೂಪ ಪಡೆದುಕೊಳ್ಳುವುದು, ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕಾಂಗ್ರೆಸ್ ಚಿಂತನೆ ನಡೆಸಿ, ಯಾಕಾದರೂ ಸೇರಿಸಿದೆವೋ, ಘೋಷಿಸಿದೆವೋ ಎಂದು ಈಗ ಮಮ್ಮಲ ಮರುಗಿದಂತಿದೆ. ಯಾಕೆಂದ್ರೆ ಇದರ ಬೆನ್ನಲೇ ನಿನ್ನೆ ದಿನ ಮಂಗಳವಾರ ರಾತ್ರಿ ಕಾಂಗ್ರೆಸ್ ನಾಯಕರೆಲ್ಲ ಸೇರಿ ಸಮಾಲೋಚನೆ ನಡೆಸಿ, ಭಜರಂಗದಳ ನಿಷೇಧ (Bajrang Dal Ban) ಎಂಬ ಪ್ರಸ್ತಾಪವನ್ನು ವಾಪಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಅಂತಿಮ ನಿರ್ಧಾರ ಕೈಗೊಂಡಿರಬಹುದು ಎಂದು ವರದಿಯಾಗಿದೆ. ಅಲ್ಲದೆ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈಗಾಗಲೇ ಬಿಜೆಪಿ ಇದನ್ನು ಚುನಾವಣಾ ಅಸ್ತ್ರವಾಗಿ ಬಳಸಲು ಶುರು ಮಾಡಿದೆ. ಪ್ರಧಾನಿ ಮೋದಿ ನಿನ್ನೆ ಉತ್ತರ ಕರ್ನಾಟಕದ ವಿಜಯಪುರದಲ್ಲಿ ಮಾತನಾಡಿ, ‘ ಈ ಹಿಂದೆ ಕಾಂಗ್ರೆಸ್ ರಾಮನಿಗೆ ತಂಟೆ ಕೊಟ್ಟರು, ಈಗ ರಾಮ ಭಕ್ತ ಹನುಮಂತನಿಗೆ (ಬಜರಂಗಿ) ಬಂಧಿಸಲು ಹೊರಟಿದ್ದಾರೆ ಎಂದಿದ್ದಾರೆ. ಬಿಜೆಪಿ ಕೇಂದ್ರ ಹೈಕಮಾಂಡ್ ನಿಂದ ಸ್ಪಷ್ಟ ಸೂಚನೆ ಬಂದಿದೆ. ಈ ನಿಷೇಧದ ಘಟನೆಯನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳಿ ಎಂದು ರಾಜ್ಯ ನಾಯಕರಿಗೆ ಮತ್ತು ಬೂತ್ ಮಟ್ಟದಲ್ಲಿ ಕೂಡ ಪ್ರಚಾರ ಮಾಡಲು ನಿರ್ದೇಶನ ನೀಡಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ಪ್ರಸ್ತಾಪಿಸಿರುವುದರ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮುಂತಾದ ಹಲವರು ನಾನೊಬ್ಬ ಭಜರಂಗಿ ಅಭಿಯಾನ ಆರಂಭಿಸಿದ್ದಾರೆ. ಇವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ” ನಾನೊಬ್ಬ ಕನ್ನಡಿಗ, ನನ್ನ ನಾಡು ಹನುಮ ಜನಿಸಿದ ನಾಡು, ನಾನು ಬಜರಂಗಿ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ, ನಮ್ಮ ದೇಶದಲ್ಲಿ ಅಥವಾ ನಮ್ಮ ಕಾನೂನುಗಳಲ್ಲಿ ಒಂದು ಸಂಘಟನೆಯನ್ನು ಅಷ್ಟು ಸುಲಭದಲ್ಲಿ ನಿಷೇಧಿಸಲು ಸಾಧ್ಯವಿಲ್ಲ. ಭಯೋತ್ಪಾದನೆ ಅಥವಾ ಇನ್ನಿತರೆ ದೇಶ ವಿರೋಧಿ ಚಟುವಟಿಕೆಗಳಿಗೆ ಏನಾದರೂ ಬೆಂಬಲ ನೀಡುತ್ತಿದ್ದರೆ, ನಿರಂತರವಾಗಿ ಸಮಾಜಘಾತುಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಂಪೂರ್ಣ ಸಾಕ್ಷಾಧಾರಗಳು ದೊರೆತರೆ ಅಥವಾ ನೀಡಿದರೆ ಮಾತ್ರ ನಿಷೇಧ ಸಾಧ್ಯವಾದೀತು. ಉದಾಹರಣೆಗೆ ಈಗ PFI ಗೆ ಬಂದ ಗತಿಯಂತೆ. ಆದರೆ ಕಾಂಗ್ರೆಸ್ ಇವೆಲ್ಲವನ್ನೂ ಯೋಚಿಸದೆ ದುಡುಕಿಬಿಟ್ಟಿತು ಅಂತ ಕಾಣುತ್ತೆ. ಮತವನ್ನು ಪಡೆಯಲು ಹೋದ ಕಾಂಗ್ರೆಸ್ ಪ್ರಣಾಳಿಕೆಯೇ ಈಗ ಕಾಂಗ್ರೆಸ್ ಗೆ ಮತ ಸಂಚಕಾರ ದಂದೊಡ್ಡಿದಂತೂ ಸತ್ಯ. ಈಗಾಗಲೇ ಡ್ಯಾಮೇಜ್ ಆಗಿ ಹೋಗಿದೆ. ಇನ್ನಷ್ಟು ಡ್ಯಾಮೇಜ್ ಕಂಟ್ರೋಲ್ ಅನ್ನು ಕಾಂಗ್ರೆಸ್ ಯಾವ ರೀತಿ ಮ್ಯಾನೇಜ್ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇತ್ತೀಚೆಗೆ 1992 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಹಲವು ಸಂಘಟನೆಗಳನ್ನು ನಿಷೇಧ ಮಾಡಲಾಯಿತು. ಪ್ರಧಾನಿ ಪಿವಿ ನರಸಿಂಹರಾವ್ ಮತ್ತು ಅಂದಿನ ಗೃಹ ಸಚಿವ ಶಂಕರರಾವ್ ಬಲವಂತರಾವ್ ಚವಾಣ್ ಅವರು ನಿಷೇಧವನ್ನು ವಿಧಿಸಿದರು. ರಾವ್ ಸರ್ಕಾರವು ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಜಮಾತ್-ಎ-ಇಸ್ಲಾಮಿ ಹಿಂದ್ ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಅನ್ನು ನಿಷೇಧಿಸಿತ್ತು. ಆದಾಗ್ಯೂ, ಕೇಂದ್ರೀಯ ನ್ಯಾಯಾಧೀಕರಣದ ಮುಂದೆ ಅದನ್ನು ಸಮರ್ಥಿಸಲು ಸರ್ಕಾರ ವಿಫಲವಾಗಿ ತಮ್ಮ ನಿಷೇಧವನ್ನು ದೇಶದ ಆಗಿ ವಾಪಸ್ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.