Ravi Belagere Writing: ‘ ಮತ್ತೆ ಬಂದ್ರು ಬೆಳಗೆರೆ ‘, ರವಿ ಬೆಳಗೆರೆ ಇಂಟರೆಸ್ಟಿಂಗ್ ಧಾರಾವಾಹಿ ಶುರು !
Ravi Belagere Writing: ರವಿ ಬೆಳಗೆರೆ (Ravi Belagere) ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ ? ಆತನ ಪ್ರತಿ ಯೋಚನೆಯೂ ವಿಭಿನ್ನ, ಪ್ರತಿ ಅಕ್ಷರವೂ ಆಕರ್ಷಕ. ಬರೆದ ಪ್ರತಿ ಲೇಖನದಲ್ಲಿ ಕೂಡಾ ನಮಗೆ ಕಾಣ ಸಿಗೋದು, ಅದೊಂದೇ : ಜೀವನ ಪ್ರೀತಿ – ದಿ ಲವ್ !
ರವಿ ಬೆಳಗೆರೆ ರೈಟಿಂಗ್ ಮಶೀನ್. (Ravi Belagere Writing) ಆತ ಈಗಿನ ಜನರೇಶನ್’ ನಂತೆ ಲ್ಯಾಪ್ಟಾಪ್ ಹಿಡಿದು ಬರೆಯಲು ಕೂರುತ್ತಿರಲಿಲ್ಲ. ನಮ್ಮ ನಿಮ್ಮಂತೆ ಮೊಬೈಲಿನಲ್ಲಿ ಕೀ ಪ್ಯಾಡ್ ಟಕ ಟಕಾಯ್ಸಿ ಟೈಪಿಂಗ್’ಗೆ ಆತ ಎಂದೂ ಇಳಿದಿರಲಿಲ್ಲ. ಅಚ್ಚ ಬಿಳಿ ಹಾಳೆಯ ಮೇಲೆ ಮಾರ್ಜಿನ್ ಕೂಡ ಉಳಿಯದಂತೆ ಚೌಕಾಶಿ ಮಾಡಿ ಬರೆಯುತ್ತಿದ್ದರು ರವಿ ಬೆಳಗೆರೆ.
ಒಂದು ಸಲ ಹಾಳೆ ಮೇಲೆ ಪೆನ್ನು ಮಡಗಿದರೆ ಅದು ಹೈ ಸ್ಪೀಡ್ ಪರ್ಫಾರ್ಮಿಂಗ್ ಮೆಷಿನ್ ಆನ್ ಮಾಡಿದಂತೆ. ಯೋಚನೆಗಳು ನಿರಂತರ ಒರತೆಯಂತೆ ಉಕ್ಕಿಕೊಂಡು ಬರುತ್ತವೆ. ಅವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಜಂಪ್ ಆಗುತ್ತಾ, ಇನ್ಯಾವುದನ್ನೋ ಕನೆಕ್ಟ್ ಮಾಡುತ್ತಾ, ಕೊನೆಗೆ ನಮ್ಮ ಜೀವನಕ್ಕೆ ರಿಲೇಟ್ ಆಗುತ್ತಾ ಸಾಗುತ್ತವೆ. ಸಾಲುಗಳು ಮುಗಿದ ಮೇಲೆ ಮನದಲ್ಲೊಂದು ಆರ್ದ್ರ ಭಾವ. ಆ ಸಾಲುಗಳು ಕೊನೆಗೆ ಸಾಗಬೇಕಾದಲ್ಲಿ ಸಾಗಿ ಅಲ್ಲಿ ಶಾಶ್ವತವಾಗಿ ಮನದಲ್ಲಿ ನಿಂತು ಬಿಡುತ್ತಿದ್ದವು. ಅದಕ್ಕೇ ಆತನನ್ನು ಜನರು ಕರೆದದ್ದು ಅಕ್ಷರ ಬ್ರಹ್ಮ ಎಂದು.
ಇಂದು ರವಿ ಬೆಳಗೆರೆ ನಮ್ಮ ಜತೆ ಭೌತಿಕವಾಗಿ ಇಲ್ಲ. ಆದ್ರೆ ಕನ್ನಡದ ಪ್ರತಿ ಯುವ ಪೀತಿಗೆಯ ಬರಹಗಾರರಲ್ಲಿ ಮತ್ತು ಪತ್ರಕರ್ತನ ಯೋಚನೆ ಮತ್ತು ಧೈರ್ಯದಲ್ಲಿ ರವಿ ಬೆಳಗೆರೆ ಇದ್ದಾರೆ. ಇವತ್ತಿನಿಂದ ನಾವಿಲ್ಲಿ ರವಿ ಬೆಳಗೆರೆಯವರ ವಿಭಿನ್ನ ಚಿಂತನೆಗಳ ಬಗ್ಗೆ, ಅವರ ಆಕರ್ಷಕ ಬದುಕಿನ ಮತ್ತು ಬರಹದ ಬಗ್ಗೆ ನಿರಂತರವಾಗಿ ಬರೆಯಲಿದ್ದೇವೆ.
ಸಿಂಪಲ್ ಆಗಿ ಜೀವನ ಸತ್ಯಗಳನ್ನು ಹೇಳುವುದರಲ್ಲಿ ರವಿ ಬೆಳಗೆರೆ (Ravi Belagere) ಎತ್ತಿದ ಕೈ. ಹಾಗೆ, ನಮಗೆ ಈಗಾಗಲೇ ಗೊತ್ತಿರುವ ವಿಷಯ ಹೇಳುವುದರಲ್ಲೂ, ‘ ಇದ್ಯಾವುದನ್ನೋ ನಾವು ಮೊದಲ ಬಾರಿ ಕೇಳುತ್ತಿದ್ದೇವೆ ‘ ಎನ್ನಿಸುವ ಹಾಗೆ ಪದಗಳನ್ನು ಜೀತಕ್ಕೆ ಇಟ್ಟು ದುಡಿಸಿಕೊಂಡು ಮಜಾ ನೋಡುತ್ತ ಹೇಳೋದು ರವಿ ಬೆಳಗೆರೆಯ ಜೀವಕ್ಕೇ ಅಂಟಿಕೊಂಡು ಬಂದ ಖಯಾಲಿ. ನಿಮಗೆ ಜೀವನದಲ್ಲಿ ಯಶಸ್ಸು ಬೇಕಾ? ಹಾಗಿದ್ರೆ ಏನು ಮಾಡಬೇಕೆನ್ನುವುದನ್ನು ಈ ಮೂಲಕ ಸುಂದರವಾಗಿ ಹೇಳಿದ್ದಾರೆ ರವಿ ಬೆಳಗೆರೆ.(Ravi Belagere Quotes)
ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದು ಕೊಂಡವರು ಮೊದಲು ಬಳಿಯಿರುವ ಒಂದೊಂದಾಗಿ ಬಲಿ ಕೊಡುತ್ತಾ ಹೋಗಬೇಕು. ನಮ್ಮ ಮೊದಲ ಶತ್ರು ನಿದ್ರೆ. ನಿದ್ದೆ ಎಂಬುದು, ಮಾಡಿದಷ್ಟೂ ಮತ್ತೆ ಮತ್ತೆ ತನ್ನೊಳಕ್ಕೆ ಸೆಳೆದುಕೊಳ್ಳುವ ಮಾಯಾವಿ. ಮೊದಲಿಗೆ ನಿಮ್ಮ ನಿದ್ರೆಯನ್ನು ಬಲಿ ಕೊಡಿ. ಅಫ್ ಕೋರ್ಸ್ – ಅನಗತ್ಯ ನಿದ್ದೆಯನ್ನು. ನಿದ್ದೆ ಕಂಟ್ರೋಲ್ ಮಾಡಿದಷ್ಟೂ ನಿಮಗೆ ಹೆಚ್ಚು ಸಮಯ ಮಿಗುತ್ತದೆ. ಎಲ್ಲಾ ಸಾಧಕರ, ಯಶಸ್ಸಿನ ಹುಡುಕಾಟದಲ್ಲಿ ಇರುವವರ, ದುಡ್ಡು. ಮಾಡಬೇಕೆಂದು ಬಯಸುವವರ ಮೊದಲ ಇನ್ವೆಸ್ಟ್ ಮೆಂಟ್ ಇದೇ ನಿದ್ದೆ ! ಅದಕ್ಕಾಗಿ ಅವರಿವರನ್ನು ಬೇಡಬೇಕಿಲ್ಲ, ಯಾರಿಗೋ ಅರ್ಜಿ ಹಾಕಿ ಪ್ರಾರ್ಥಿಸುತ್ತಾ ಕೂರಬೇಕಿಲ್ಲ; ಅದು ನಿಮ್ಮ ಬಳಿಯೇ ಇರುವ ಮಹಾ ಹೂಡಿಕೆ. ನಿದ್ದೆಯನ್ನು ಹಿತ ಮಿತವಾಗಿ ಮಾಡಿ ಉಳಿಸಿದ ಸಮಯವನ್ನು ಮುಂದಕ್ಕೆ ಸದುಪಯೋಗ ಪಡಿಸಿಕೊಳ್ಳಬೇಕಾಗುತ್ತದೆ.
ನಿದ್ದೆಯ ಹಾಗೆಯೇ, ನಿಮ್ಮ ಅನಗತ್ಯ ಆಟಗಳನ್ನು ಕಡಿಮೆ ಮಾಡಿ. ಸಿನಿಮಾದ ಕನಸಿನ ಲೋಕದಲ್ಲಿ ತೇಲಿ ಹೋಗುವ ಮನಸ್ಸನ್ನು ಕಂಟ್ರೋಲ್ ಮಾಡಿಕೊಳ್ಳಿ. ‘ ನನಗೆ ಇಷ್ಟ ‘ ಎಂದು ನೀವು ಮಾಡುವ ನಿಮ್ಮ ಹರಟೆ, ದಿಕ್ಕು ದೆಸೆ ಇಲ್ಲದ ತಿರುಗಾಟ, ಬರ್ತ್ ಡೇ ಪಾರ್ಟಿಗಳಲ್ಲಿ ಕಳೆದು ಹೋಗುವ ಮನಸ್ಸು ಮತ್ತು ಹಾಲಿಡೇ ಎಂಬ ‘ ರೆಸ್ಟ್ ಬೇಕಲ್ವಾ ಜೀವಕಕ್ಕೆ’ ಎಂಬ ಕಾಲಹರಣ – ಇವೆಲ್ಲವನ್ನೂ ನಿರ್ದಯ ಕಟುಕನ ತರಹ ಬಲಿ ಕೊಡಿ. ಆಗ ನಿಮ್ಮಲ್ಲಿ ಇನ್ನಷ್ಟು ‘ ಖಾಲಿ ಸಮಯ’ ಮಿಗುತ್ತದೆ. ಸಮಯ ಅನ್ನೋದು ಒಂದು ನಿಮ್ಮ ಬಳಿ ಇದೆ ಅಂದುಕೊಳ್ಳಿ: ಆಗ ತಾನೇ ನೀವು ಏನಾದರೂ ಕ್ರಿಯೇಟಿವ್ ಆಗಿ ಯೋಚಿಸಲು, ಹೊಸದನ್ನು ಅಥವಾ ಹಳೆಯದನ್ನೇ ಹೊಸ ಹೊಳಪಿನಿಂದ ಮಾಡಲು ಸಾಧ್ಯ ? ಹೀಗೆ ಅನಗತ್ಯಗಳ ಬಲಿ ಬೀಳುತ್ತಾ ಹೋದಂತೆ ನಿಮ್ಮ ಗೆಲುವು ಹತ್ತಿರಾಗುತ್ತಾ ಬರುತ್ತದೆ.
ಸಕ್ಸಸ್ ನ ಮೊದಲ ಹಂತವೇ ಟೈಮ್ ಮ್ಯಾನೇಜ್ ಮೆಂಟ್ ಎನ್ನುವುದನ್ನು ರವಿ ಬೆಳಗೆರೆಯವರು ಈ ಮೂಲಕ ಮನ ಮುಟ್ಟುವಂತೆ ಹೇಳಿದ್ದಾರೆ.