FIR on V Somanna: ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮೇಲೆ FIR !
FIR on V Somanna: ಚಾಮರಾಜನಗರ: ಹೈ ವೋಲ್ಟೇಜ್ ಕ್ಷೇತ್ರ ವರುಣಾದಲ್ಲಿ ದಿನಕ್ಕೊಂದು ಹೊಸ ತಿರುವುಗಳು ಸೃಷ್ಟಿಯಾಗುತ್ತಿವೆ. ನಾಮಪತ್ರ ವಾಪಸ್ ಪಡೆಯಲು ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು) ಅವರಿಗೆ ಆಮಿಷ ಒಡ್ಡಿರುವ ಆಡಿಯೊ ತುಣುಕಿಗೆ ಸಂಬಂಧಿಸಿದಂತೆ ಸೋಮಣ್ಣ ಸೇರಿ ಇತರ ಮೂವರ ವಿರುದ್ಧ ಎಫ್‌ಐಆರ್ (FIR on V Somanna) ದಾಖಲಾಗಿದೆ.
ಆದರೆ ಈ ಎಫ್‌ಐಆರ್‌ನಲ್ಲಿ ಸೋಮಣ್ಣ ಅವರಿಗೆ ಸಂಬಂಧಿಸಿದಂತೆ ಯಾವುದೇ ವಿವರಗಳು ಇಲ್ಲ. ಅವರನ್ನು ‘ ಅಪರಿಚಿತ ‘ ಎಂದು ಉಲ್ಲೇಖಿಸಲಾಗಿದೆ. ಒಂದು ಟಿವಿಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಆಡಿಯೊದಲ್ಲಿ ಕೇಳಿ ಬಂದಿರುವ ಇನ್ನೆರಡು ಹೆಸರುಗಳಾದ ಸುದೀಪ್ ಮತ್ತು ನಟರಾಜು ಎಂಬವರ ವಿರುದ್ಧವೂ ಈಗ ಎಫ್‌ಐಆರ್ ದಾಖಲಿಸಲಾಗಿದೆ.
ಚುನಾವಣಾ ಪ್ರೈಯಿಂಗ್ ಸ್ಕಾಡ್‌ನ ಮ್ಯಾಜಿಸ್ಟ್ರೇಟ್ ಆಗಿರುವ ಡಾ.ಬಿ.ಆರ್.ಜಯಣ್ಣ ಅವರು ನೀಡಿರುವ ದೂರಿನ ಆಧಾರದಲ್ಲಿ ಚಾಮರಾಜನಗರ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸೋಮಣ್ಣ( ಅಪರಿಚಿತ)ರನ್ನು ಮೊದಲ ಆರೋಪಿ ಎಂದು ಉಲ್ಲೇಖಿಸಲಾಗಿದ್ದು, ನಟರಾಜು ಮತ್ತು ಸುದೀಪ್ ಕ್ರಮವಾಗಿ ಎರಡನೇ ಮತ್ತು ಮೂರನೇ ಆರೋಪಿಯಾಗಿದ್ದಾರೆ.
ಅವತ್ತು ವರುಣದಲ್ಲಿ ಚುನಾವಣಾ ನಾಮಪತ್ರ ಹಿಂಪಡೆಯುವ ಸಮಯದಲ್ಲಿ ಸಚಿವ ಸೋಮಣ್ಣ ಅವರು ಜೆಡಿಎಸ್ ನಾಯಕನಿಗೆ ನಾಮಪತ್ರ ಹಿಂಪಡೆಯಲು ಸೂಚಿಸಿ ಕರೆ ಮಾಡಿದ್ದರು ಎನ್ನಲಾಗಿತ್ತು. ನಾಮಪತ್ರ ವಾಪಸ್ ಪಡೆಯುವ ಕೊನೆ ದಿನ ಸಚಿವ, ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರು ಜೆಡಿಎಸ್‌ನ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಕರೆ ಮಾಡಿ ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ‘ ನಮ್ಮಸರ್ಕಾರ ಬರುತ್ತದೆ. ಗೂಟದ ಕಾರು ಕೊಡುತ್ತೇವೆ’ ಎಂದು ಹೇಳಿದ್ದ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸೋಮಣ್ಣ ಅವರು ಕರೆ ಮಾಡಿದ್ದನ್ನು ಜೆಡಿಎಸ್ ನಾಯಕ ಮಲ್ಲಿಕಾರ್ಜುನ ಸ್ವಾಮಿಯವರು ದೃಢಪಡಿಸಿದ್ದರು.
ಇದನ್ನೂ ಓದಿ: Jagadish Shettar: ಜಗದೀಶ್ ಶೆಟ್ಟರ್ ಬೆಂಬಲಿಸಿದ 27 ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಿಜೆಪಿ