PM Modi- Kharge: ‘ಮೋದಿ ವಿಷ ಸರ್ಪ, ವಿಷ ಹೌದೋ ಅಲ್ಲವೋ ಎಂದು ನೆಕ್ಕಿ ನೋಡಿದರೆ ಸತ್ತು ಹೋಗ್ತಿರಿ’: ಬೆಳಿಗ್ಗೆ ಹೇಳಿಕೆ, ಸಂಜೆ ಕ್ಷಮೆ ಕೇಳಿದ ಖರ್ಗೆ
PM Modi- Kharge: ‘ಮೋದಿ ವಿಷದ ಸರ್ಪ ಇದ್ದಂತೆ’ ಎಂಬ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (PM Modi- Kharge) ಅವರ ಹೇಳಿಕೆ ವಿವಾದ ಸೃಷ್ಟಿಸುತ್ತಿರುವ ಹಾಗೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಏನಂದಿದ್ರು ಮಲ್ಲಿಕಾರ್ಜುನ ಖರ್ಗೆ ?
ಪ್ರಧಾನಿ ಮೋದಿ ವಿರುದ್ಧದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ವಿಷಾದ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ ಖರ್ಗೆ, ‘ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ನೋವಾಗಿದ್ರೆ ವಿಷಾದ ‘ ಎಂದು ತಿಳಿಸಿದ್ದಾರೆ.
ಗದಗ ಜಿಲ್ಲೆಯ ನರೇಗಲ್ ನಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆಯವರು, ‘ಮೋದಿ ಅಂದ್ರೆ ವಿಷದ ಹಾವಿದ್ದಂತೆ. ವಿಷ ಹೌದೋ, ಅಲ್ಲವೋ ಎಂದು ನೀವೇನಾದರೂ ನೆಕ್ಕಿ ನೋಡಲು ಹೋದರೆ ಸತ್ತು ಹೋಗ್ತಿರಿ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದರು.
ಅವರು ರೋಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲರ ನಿನ್ನೆ ಗುರುವಾರ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ ‘ಮೋದಿ ಒಬ್ಬ ಅಸೆಬುರುಕ ಮನುಷ್ಯ. ಯಾವುದಾದರೂ ಕುರ್ಚಿ ಖಾಲಿ ಇದ್ದರೆ ಅಲ್ಲಿ ಬಂದು ಕುಳಿತುಕೊಳ್ಳುತ್ತಾನೆ. ‘ತಿನ್ನಲ್ಲ, ತಿನ್ನೋಕೆ ಬಿಡಲ್ಲ’ ಅಂತ ಭಾಷಣ ಮಾಡುತ್ತಾನೆ. ಆದರೆ, ಶೇ 40 ರಷ್ಟು ಲಂಚ ತಿಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ರಾಜಕೀಯ ಮಾಡುತ್ತಾನೆ. ಆತ ದೇಶವನ್ನು ತನ್ನ ವಿಚಾರಧಾರೆಯಿಂದ ಹಾಳು ಮಾಡಲು ಬಂದಿದ್ದಾನೆ’ ಎಂದು ಏಕವಚನದಲ್ಲಿ ಖರ್ಗೆ ನಿಂದಿಸಿದ್ದರು.’ಸಂಸತ್‌ನಲ್ಲಿ ಪ್ರಶ್ನೆ ಮಾಡಿದರೆ 56 ಇಂಚಿನ ಎದೆ ಬಗ್ಗೆ ಹೇಳುತ್ತಾರೆ. ನಾವು ಆತನ ದೇಹದಾರ್ಡ್ಯತೆ ಕೇಳುತ್ತಿಲ್ಲ. ಅವರು ಮಾಡಿರುವ ಜನಪರ, ಅಭಿವೃದ್ಧಿಪರ ಕೆಲಸಗಳನ್ನು ಅಳತೆ ಮಾಡುತ್ತಿದ್ದೇವೆ’ ಎಂದು ಖರ್ಗೆ ಆ ಸಂದರ್ಭದಲ್ಲಿ ಹೇಳಿದ್ದರು.
ಬೆಳಿಗ್ಗೆ ಹೇಳಿಕೆ, ಮಧ್ಯಾಹ್ನ ಸಮಜಾಯಿಕೆ, ಸಂಜೆ ಕ್ಷಮೆ:
ಬೆಳಿಗ್ಗೆ ತಾವು ನೀಡಿದ ಸರ್ಪದ ಹೇಳಿಕೆಗೆ ಮಧ್ಯಾಹ್ನದ ಹೊತ್ತಿಗೆ ಸಮಜಾಯಿಷಿ ನೀಡಿದ್ದರು ಖರ್ಗೆ.’ ನಾನು ಮೋದಿಗೆ ಹಾಗೆ ಹೇಳಿಲ್ಲ, ಬಿಜೆಪಿಗೆ ಹೇಳಿದ್ದು ‘ ಅಂದಿದ್ದರು. ಖರ್ಗೆ ಹೇಳಿಕೆ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಅದು ದೊಡ್ಡ ವಿವಾದ ಆಗುವ ಲಕ್ಷಣ ಗೋಚರಿಸಿದ ಕೂಡಲೇ ಸಂಜೆ ಮಲ್ಲಿಕಾರ್ಜುನ ಖರ್ಗೆಯವರು ಕ್ಷಮೆ ಯಾಚಿಸಿದ್ದಾರೆ.
” ಬಿಜೆಪಿ-ಕಾಂಗ್ರೆಸ್ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಆರ್ಎಸ್ಎಸ್ ಮತ್ತು ಬಿಜೆಪಿ ಸಿದ್ಧಾಂತ ವಿಷಕಾರಿಯಾಗಿದೆ. ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ. ಯಾವುದೇ ವ್ಯಕ್ತಿ ಬಗ್ಗೆ ಮಾತನಾಡುವುದಾಗಲಿ ಅಥವಾ ಯಾರಿಗೂ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ” ಎಂದು ಖರ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.