Harish Poonja: ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಶಾಸಕ ಆದ್ಮೇಲೆ ಆಗಿದ್ದಾರೆ ಬಡವ, ನಂಬಿದ್ರೆ ನಂಬಿ, ಬಿಟ್ರೆ ಬಿಡಿ !!!

Harish Poonja: ಈ ಸುದ್ಧಿ ಸತ್ಯ. ಆದ್ರೆ ಇದನ್ನು ನೀವು ನಂಬ್ತೀರಾ ಇಲ್ಲಾ ಬಿಡ್ತೀರಾ, ಅಥ್ವಾ ನಗ್ತೀರಾ ಅದು ನಿಮ್ಮಿಷ್ಟ. ವಿಷ್ಯ ಏನಪ್ಪಾ ಅಂದ್ರೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ (Belthangady) ಹಾಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ಅವರು ಶಾಸಕರಾದ ಮೇಲೆ ಅವರಿಗೆ ಬಡತನ ಆವರಿಸಿದೆ. ಅವರು ಶಾಸಕರಾಗಿ ಆಯ್ಕೆ ಆಗುವ ಮೊದಲು ಇವತ್ತಿಗಿಂತ ಶ್ರೀಮಂತರಿದ್ದರು. ಪಾಪ, ಈಗ ಅವರಿಗೆ ಬಡತನ ಒದಗಿ ಬಂದಿದೆ. ಇದು ನಾವು ಹೇಳಿದ್ದಲ್ಲ, ಇದು ಸ್ವತಃ ಅವರೇ ಚುನಾವಣಾ ನಾಮಪತ್ರ ಸಲ್ಲಿಕೆಯ ಸಂದರ್ಭ ಘೋಷಿಸಿಕೊಂಡ ಮಾಹಿತಿ !

ಸಾಮಾನ್ಯವಾಗಿ ಶಾಸಕ, ಮಂತ್ರಿ ಇತ್ಯಾದಿ ಆದಂತೆ ಜನಪ್ರತಿನಿಧಿಗಳ ಆಸ್ತಿಗಳು ಮಲೇರಿಯಾ ಜ್ವರದ ರೀತಿ ಏರುತ್ತದೆ. ಆದರೆ, ಬಹುಶಃ ಭಾರತದ ಇತಿಹಾಸದಲ್ಲಿ ಮೊದಲ ಬಾರಿ ಇರಬೇಕು: ಇವರೊಬ್ಬರ ಆದಾಯ ಕಳೆದ ಐದು ವರ್ಷಗಳಲ್ಲಿ ಇಳಿದಿದೆ. ಹರೀಶ್ ಪೂಂಜಾ ಶಾಸಕರಾದ ಕಾರಣಕ್ಕೆ ಅವರು ಬಡವರಾಗಿದ್ದಾರೆ ! ಈ ಸುದ್ದಿ ನಿಮಗೆ ಸಕತ್ ಕಾಮಿಡಿ ಅನ್ನಿಸಿದರೆ, ಅದ್ಕೆ ನಾವು ಜವಾಬ್ದಾರರಲ್ಲ !

ಶಾಸಕ ಹರೀಶ್ ಪೂಂಜಾ ಅವರ ಆದಾಯ 2016-17 ರಲ್ಲಿ ₹ 15.09 ಲಕ್ಷ ಇತ್ತು. ಈಗ ಅದು 2021-22 ರಲ್ಲಿ ₹ 8.38 ಲಕ್ಷಕ್ಕೆ ಇಳಿದಿದೆ !
ಅವರ ಒಟ್ಟು ಆಸ್ತಿ 2017-18 ರಲ್ಲಿ ₹2.61 ಕೋಟಿಯಷ್ಟಿತ್ತು. ಅದೂ ಕೂಡಾ 2022-23 ರಲ್ಲಿ ₹2.29 ಕೋಟಿಗೆ ಇಳಿಕೆಯಾಗಿದೆ !

ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭ ಸಲ್ಲಿಸಲಾದ ಅವರ ಅಫಿಡವಿಟ್ ಪ್ರಕಾರ, ಅವರ ಲೈಯಬಿಲಿಟಿಯು 2018 ರಲ್ಲಿ ₹ 1.51 ಕೋಟಿ ಇದ್ದದ್ದು, 2023 ರಲ್ಲಿ ₹ 1.06 ಕೋಟಿಗೆ ಇಳಿದಿದೆ.

ಪೂಂಜಾ ಅವರಿಗಿಂತ ಪತ್ನಿಯೇ ಶ್ರೀಮಂತೆ !
ಆದರೆ ಪೂಂಜಾ ಅವರ ಆದಾಯಕ್ಕೆ ವ್ಯತಿರಿಕ್ತವಾಗಿ, ಅವರ ಪತ್ನಿ ಸ್ವೀಕೃತಾ ಅವರ ಆದಾಯವು 2016-17 ರಲ್ಲಿ ₹ 7.57 ಲಕ್ಷ ಇದ್ದದ್ದು, 2021-22 ರಲ್ಲಿ ₹ 20.02 ಲಕ್ಷಕ್ಕೆ ಏರಿಕೆಯಾಗಿದೆ. ಆಕೆಯ ಚರ ಆಸ್ತಿಯು 2018 ರಲ್ಲಿ ₹ 36.88 ಲಕ್ಷದಿಂದ 2023 ರಲ್ಲಿ ₹97.55 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಆಕೆಯ ಆಸ್ತಿ 5 ವರ್ಷಗಳಲ್ಲಿ ಡಬಲ್ ಆಗಿದೆ. 2018 ರಲ್ಲಿ ಆಕೆ ಯಾವುದೇ ಹೊಣೆಗಾರಿಕೆಯನ್ನು ಹೊಂದಿರಲಿಲ್ಲ, ಆದರೆ ಈಗ ₹ 5 ಲಕ್ಷ ಎಂದು ಘೋಷಿಸಲಾಗಿದೆ.

ಹರೀಶ್ ಪೂಂಜಾ ಅವರು 2018 ಮತ್ತು 2023 ರಲ್ಲಿ ಸಲ್ಲಿಸಿದ ಆಸ್ತಿ ಮತ್ತು ಹೊಣೆಗಾರಿಕೆಗಳ ಮೇಲಿನ ಅಫಿಡವಿಟ್‌ಗಳನ್ನು ತಾಳೆ ಹಾಕಿ ನೋಡಿದಾಗ, ಅವರು ಹೊಂದಿರುವ ಸ್ಥಿರ ಆಸ್ತಿಗಳಲ್ಲಿ (Immovable Property) ಯಾವುದೇ ಬದಲಾವಣೆಗಳಾಗಿಲ್ಲ. ಇದರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 0.55 ಎಕರೆ ಕೃಷಿ ಭೂಮಿ ಇದ್ದು, ಇದರ ಮೌಲ್ಯ ₹ 8.32 ಲಕ್ಷ. ಉಳ್ಳಾಲ ತಾಲೂಕಿನಲ್ಲಿ ₹ 32 ಲಕ್ಷ ಮೌಲ್ಯದ 25,000 ಚದರ ಅಡಿ ವಿಸ್ತೀರ್ಣದ ಕೃಷಿಯೇತರ ಜಮೀನು ಇದೆ. ಅಲ್ಲದೆ, ಮಂಗಳೂರು ತಾಲ್ಲೂಕಿನಲ್ಲಿ ₹ 65 ಲಕ್ಷ ಮೌಲ್ಯದ 28,000 ಚದರ ಅಡಿ ವಿಸ್ತೀರ್ಣದ ಕೃಷಿಯೇತರ ಜಮೀನು ಹೊಂದಿದ್ದು, ಪತ್ನಿ ಸ್ವೀಕೃತಾ ಜತೆ ಜಂಟಿ ಮಾಲೀಕತ್ವ ಹೊಂದಿದ್ದಾರೆ.

ತಮ್ಮ ಚರ ಆಸ್ತಿಗಳಲ್ಲಿ (Movable Property) 2018 ರಲ್ಲಿ, ಏಳು ಬ್ಯಾಂಕ್ ಖಾತೆಗಳನ್ನು ಘೋಷಿಸಿದ್ದರು, ಅದರಲ್ಲಿ ರೂಪಾಯಿ 11 ರಿಂದ ರೂಪಾಯಿ 10,000 ವರೆಗೆ ಬ್ಯಾಲೆನ್ಸ್ ಇತ್ತು. ಅವರು ಈಗ ಐದು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅದರಲ್ಲಿ 824 ರೂಪಾಯಿಯಿಂದ ಹಿಡಿದು 6.97 ಲಕ್ಷದವರೆಗೆ ಬ್ಯಾಲೆನ್ಸ್ ಇದೆ. 2018 ರಲ್ಲಿ ಅವರು 74,500 ಮೌಲ್ಯದ 27 ಗ್ರಾಂ ಚಿನ್ನಾಭರಣ ಹೊಂದಿದ್ದರೆ, 2023 ರಲ್ಲಿ ಅವರು 9.89 ಲಕ್ಷ ಮೌಲ್ಯದ 179 ಗ್ರಾಂ ಚಿನ್ನಾಭರಣವನ್ನು ಹೊಂದಿದ್ದಾರೆ. ಅಲ್ಲದೆ ಅವರ ಬಳಿ 2.2 ಲಕ್ಷ ಮೌಲ್ಯದ ಐಫೋನ್ ಒಂದಿದೆ.
ಹರೀಶ್ ಅವರು ಪಿಕ್ಸ್‌ಗ್ರಾಮರ್ ಪ್ರಿ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ನಿರ್ದೇಶಕರಾಗಿದ್ದಾರೆ ಮತ್ತು ಮಂಗಳೂರಿನಲ್ಲಿರುವ ಸ್ವೀಕೃತ ಎಂಟರ್‌ಪ್ರೈಸಸ್‌ನಲ್ಲಿ ಕೂಡಾ ಪಾಲುದಾರರಾಗಿದ್ದಾರೆ.

ಹರೀಶ್ ಪೂಂಜಾ ಅವರ ಪತ್ನಿ ಸ್ವೀಕೃತಾ ಆಸ್ತಿ ವಿವರ:
ಇನ್ನು ಹರೀಶ್ ಪೂಂಜಾ ಅವರ ಪತ್ನಿ ಸ್ವೀಕೃತಾ ಅವರು ಮಂಗಳೂರಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯೊಂದರಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ. ಅವರು 2018 ರಲ್ಲಿ ಒಟ್ಟು ಏಳು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರು. ಅದರಲ್ಲಿ 536 ರೂಪಾಯಿಗಳಿಂದ ಹಿಡಿದು 2.88 ಲಕ್ಷದವರೆಗಿನ ಬ್ಯಾಲೆನ್ಸ್‌ ಇತ್ತು. ಈಗ ಅವರ ಬಳಿ ಇರುವ ಅಕೌಂಟ್ ಗಳಲ್ಲಿ 1,464 ರಿಂದ ಹಿಡಿದು 77,325 ರೂಪಾಯಿಗಳ ತನಕ ಬ್ಯಾಂಕ್ ಬ್ಯಾಲೆನ್ಸ್‌ ಇದೆ.

ಅಲ್ಲದೆ, ಹರೀಶ್ ಪೂಂಜಾ ಪತ್ನಿಯವರು, ತಾವು ಪಾಲುದಾರರಾಗಿರುವ ಸ್ವೀಕೃತ ಎಂಟರ್‌ಪ್ರೈಸಸ್‌ನಲ್ಲಿ 36.58 ಲಕ್ಷ ಷೇರು ಬಂಡವಾಳವನ್ನು ಹೊಂದಿದ್ದಾರೆ. ಅವರು 2018 ರಲ್ಲಿ ₹ 4,710 ರಿಂದ ₹ 1.5 ಲಕ್ಷದವರೆಗಿನ ಮ್ಯೂಚುವಲ್ ಫಂಡ್‌ಗಳು ಮತ್ತು ವಿಮಾ ಪಾಲಿಸಿಗಳಲ್ಲಿ ಒಂಬತ್ತು ಹೂಡಿಕೆಗಳನ್ನು ಘೋಷಿಸಿದ್ದರು. ಆದರೆ ಈ ಸಾರಿ ₹ 10,000 ಮತ್ತು ₹ 4 ಲಕ್ಷದವರೆಗಿನ ಮೊತ್ತಗಳಿರುವ ಒಟ್ಟು 11 ಹೂಡಿಕೆಗಳನ್ನು ಈಗ ಅವರು ಘೋಷಿಸಿದ್ದಾರೆ.

ಇದನ್ನೂ ಓದಿ: ಕಾರಿನ ಫುಟ್ ಬೋರ್ಡ್ ನಲ್ಲಿ ನೇತಾಡಿದ ಪ್ರಧಾನಿಯ ವಿರುದ್ಧ ದೂರು ನೀಡಿದ ತ್ರಿಶೂರ್ ನಿವಾಸಿ!!!

Leave A Reply

Your email address will not be published.