Infosys techie: ಬದನೆಕಾಯಿ ಬೆಳೆಯಲು ಇನ್ಫೋಸಿಸ್ ಕೆಲಸವನ್ನೇ ತೊರೆದ ಟೆಕ್ಕಿ! ಅಬ್ಬಬ್ಬಾ, ಈತನ ಗಳಿಕೆ ಕೇಳಿದ್ರೆ ಶಾಕ್ ಆಗ್ತೀರಾ!
Infosys techie : ಬದನೆಕಾಯಿ ಅಂದ್ರೆ ಎಲ್ಲರಿಗೂ ಸಸಾರ. ಅದರಲ್ಲೇನಿದೆ ಬದ್ನೆಕಾಯಿ ಅಂತ ಹೀಯಾಳಿಸೋದನ್ನು ನೀವು ಕೇಳಿರಬಹುದು. ಆದರೆ ಅದೇ ಪೌಷ್ಟಿಕಾಂಶಗಳ ಗಣಿ ಬದನೆಕಾಯಿ ಹಿಡ್ಕೊಂಡು, ಇಲ್ಲೊಬ್ಬರು ಸಾಫ್ಟ್ ವೇರ್ ಉದ್ಯೋಗಿ ದುಪ್ಪಟ್ಟು ದುಡಿತಿದ್ದಾರೆ ಅಂದ್ರೆ ನಂಬ್ತೀರಾ? ನಂಬಲೇ ಬೇಕು; ಕಾರಣ, ಇರೋ ಇನ್ಫೋಸಿಸ್ ನಂತಹ ಡ್ರೀಮ್ ಜಾಬ್ ಬಿಟ್ಟು ಅವರು ಬದನೆ ಸಸಿಯ ಬುಡಕ್ಕೆ ಹೋಗಿದ್ದಾರೆ.
ಹೌದು, ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆ ಮೇಲು ಅನ್ನುವ ಮಾತಿದೆ. ಅದರಂತೆ ಜೀವನೋಪಾಯಕ್ಕಾಗಿ ಹಲವು ದಾರಿಗಳಿವೆ. ಆದರೆ ಅಂತಹ ವಿದ್ಯೆಗಳನ್ನು ಬುದ್ಧಿವಂತಿಕೆಯಿಂದ ನಾವು ಬಳಸಿಕೊಳ್ಳಬೇಕಷ್ಟೆ. ಅದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಬ್ಬ ಟೆಕ್ಕಿಯ ನೈಜ ಕಥೆ ಎಲ್ಲರಿಗೂ ಸ್ಪೂರ್ತಿಯಾಗಿ, ಸಖತ್ ವೈರಲ್ ಆಗ್ತಿದೆ.
ಅವರ ಹೆಸರು ವೆಂಕಟಸಾಮಿ ವಿಘ್ನೇಶ್. ಇನ್ಫೋಸಿಸ್‌ನಲ್ಲಿ ( Infosys techie) ಒಂದು ಲೆಕ್ಕದಲ್ಲಿ ಕೈ ತುಂಬಾ ಸಂಬಳ ತೆಗೆದುಕೊಳ್ಳುವ ವೈಟ್ ಕಾಲರ್ ಜಾಬ್ ತೊರೆದು ಜಪಾನ್ ಗೆ ತೆರಳಿ, ಅಲ್ಲಿ ಬದನೆ ಕಾಯಿ ಕೃಷಿಯನ್ನು ಆರಂಭಿಸಿದರು. ಆದರೀಗ ಇವರು ಈ ಬದನೆ ಕಾಯಿಯ ಮೂಲಕವೇ ಇನ್ಫೋಸಿಸ್‌ನಲ್ಲಿ ಪಡೆಯುತ್ತಿದ್ದ ಸಂಬಳಕ್ಕಿಂತ ದುಪ್ಪಟ್ಟು ಗಳಿಕೆ ಮಾಡುತ್ತಿದ್ದಾರೆ.
ಅಂದಹಾಗೆ ವೆಂಕಟಸಾಮಿ ವಿಘ್ನೇಶ್ ತಮಿಳುನಾಡು ಮೂಲದವರಾಗಿದ್ದು, ಪೂರ್ಣಪ್ರಮಾಣದಲ್ಲಿ ಕೃಷಿ ಯಲ್ಲೇ ತೊಡಗಿಸಿಕೊಂಡ ಕುಟುಂಬಕ್ಕೆ ಸೇರಿದವರು. ಇನ್ಫೋಸಿಸ್‌ನಲ್ಲಿ ಕೆಲಸ ಸಿಕ್ಕಾಗ ವಿಘ್ನೇಶ್ ಅವರ ಪೋಷಕರು ಸಾಕಷ್ಟು ಸಂತೋಷಪಟ್ಟರು. ಆದಾಗ್ಯೂ, ಯುವ ಟೆಕ್ಕಿ ಶೀಘ್ರದಲ್ಲೇ ತನ್ನ ಕೆಲಸವನ್ನು ತೊರೆದು ಕೃಷಿಯ ಮೇಲಿನ ಪ್ರೀತಿಯನ್ನು ಮುಂದುವರಿಸಲು ನಿರ್ಧರಿಸಿದರು. ಕೊನೆಗೂ ಲಾಕ್‌ಡೌನ್ ಸಮಯದಲ್ಲಿ ವಿಘ್ನೇಶ್ ರೈತನಾಗಲು ನಿರ್ಧರಿಸಿ ತನ್ನ ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ ಹೇಳಿದರು.
ತಮ್ಮ ಈ ಹೊಸ ಕೆಲಸದ ಬಗ್ಗೆ ಹಾಗೂ ಗಳಿಕೆಯ ಬಗ್ಗೆ ಮಾತನಾಡಿದ ವೆಂಕಟಸಾಮಿ “ನಾನು ಯಾವಾಗಲೂ ಕೃಷಿಯಲ್ಲಿ ಆಸಕ್ತಿ ಹೊಂದಿದ್ದೆ, ಲಾಕ್‌ಡೌನ್ ಸಮಯದಲ್ಲಿ ನನ್ನ ಉತ್ಸಾಹವನ್ನು ಮುಂದುವರಿಸಲು ನನಗೆ ಅವಕಾಶ ಸಿಕ್ಕಿತು. ನಾನು ನನ್ನ ಕುಟುಂಬದ ತೋಟಗಳ ಕೆಲಸಗಳತ್ತ ಒಲವು ತೋರಲು ಪ್ರಾರಂಭಿಸಿದೆ. ಅದು ನಿಜವಾಗಿಯೂ ನನ್ನ ದಾರಿ ಎಂದು ಶೀಘ್ರದಲ್ಲೇ ಅರಿತುಕೊಂಡೆ” ಎಂದು ಹೇಳಿದ್ದಾರೆ.
ಅಲ್ಲದೆ “ಕೃಷಿಯಲ್ಲೇ ನನ್ನ ಬದುಕನ್ನು ಕಂಡುಕೊಳ್ಳಬೇಕೆಂದು ಬಯಸಿದ್ದ ನನಗೆ ಜಪಾನ್‌ನಲ್ಲಿ ಈ ರೀತಿಯ ಅವಕಾಶವಿದೆ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅಲ್ಲಿನ ಜಾಹೀರಾತೇ ನನಗೆ ತಿಳಿಸಿತು. ಇದರ ಬೆನ್ನಲೇ ಜಪಾನೀಸ್ ಭಾಷೆ ಮತ್ತು ಸಂಸ್ಕೃತಿಯಲ್ಲಿ ತರಬೇತಿಯನ್ನು ನೀಡುವ ನಿಹಾನ್ ಎಜುಟೆಕ್ ಎಂಬ ಸಂಸ್ಥೆಯ ಬಗ್ಗೆ ಸ್ನೇಹಿತರೊಬ್ಬರು ತನಗೆ ಹೇಳಿದರು. ನಂತರ ನೇರವಾಗಿ ನಾನಲ್ಲಿಗೆ ತೆರಳಿದೆ. ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ದೇಶದಲ್ಲಿ ಉದ್ಯೋಗಗಳನ್ನು ಹುಡುಕುವಲ್ಲಿ ಸಹಾಯ ಮಾಡಿತು” ಎಂದು ಹೇಳಿದರು.
ಬಳಿಕ ಮಾತನಾಡಿದ ಅವರು “ಇಲ್ಲಿ, ನಾನು ಕಂಪನಿಯ ಕ್ವಾರ್ಟರ್ಸ್‌ನಲ್ಲಿ ಉಚಿತವಾಗಿ ವಾಸಿಸುತ್ತಿದ್ದೇನೆ ಆದರೆ ನನ್ನ ಆಹಾರದ ಅವಶ್ಯಕತೆಗಳನ್ನು ನೋಡಿಕೊಳ್ಳಬೇಕು. ಜಪಾನ್‌ನಲ್ಲಿ ನಾನು ಶಾಶ್ವತವಾಗಿ ಉಳಿಯಲು ಯೋಜಿಸುವುದಿಲ್ಲ.ನನ್ನ ಅವಧಿ ಮುಗಿದ ನಂತರ, ಭಾರತಕ್ಕೆ ಹಿಂತಿರುಗುತ್ತೇನೆ ಮತ್ತು ಉದ್ಯೋಗದಲ್ಲಿ ಕಲಿಯುತ್ತಿರುವ ನವೀನ ಕೃಷಿ ತಂತ್ರಗಳನ್ನು ಇತರರಿಗೆ ಕಲಿಸುತ್ತೇನೆ” ಎಂದು ವಿಘ್ನೇಶ್ ಮನಿ ಕಂಟ್ರೋಲ್‌ಗೆ ತಿಳಿಸಿದ್ದಾರೆ.
ಇನ್ನು ಸಂಸ್ಥೆಗೆ ದಾಖಲಾದ ಆರು ತಿಂಗಳ ನಂತರ, ವಿಘ್ನೇಶ್ ಜಪಾನ್‌ನಲ್ಲಿ ಬದನೆಕಾಯಿ ಫಾರ್ಮ್‌ನಲ್ಲಿ ಕೃಷಿ ಕೆಲಸಗಾರನಾಗಿ ಸೇರಿದರು. ಅವರು ಈಗ ತಿಂಗಳಿಗೆ ಸುಮಾರು 80,000 ರೂಪಾಯಿಗಳನ್ನು ಗಳಿಸುತ್ತಾರೆ, ಆದರೆ ಅವರು ಇನ್ಫೋಸಿಸ್‌ನಲ್ಲಿ ತಿಂಗಳಿಗೆ 40,000 ರೂಪಾಯಿಗಳನ್ನು ಮಾತ್ರ ಪಡೆಯುತ್ತಿದ್ದರು.
ಇದನ್ನೂ ಓದಿ: ‘ಮೋದಿ ವಿಷ ಸರ್ಪ, ವಿಷ ಹೌದೋ ಅಲ್ಲವೋ ಎಂದು ನೆಕ್ಕಿ ನೋಡಿದರೆ ಸತ್ತು ಹೋಗ್ತಿರಿ’: ಬೆಳಿಗ್ಗೆ ಹೇಳಿಕೆ, ಸಂಜೆ ಕ್ಷಮೆ ಕೇಳಿದ ಖರ್ಗೆ