Shivamogga Politics: ಈಶ್ವರಪ್ಪ – ಅಣ್ಣಾಮಲೈ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ !
Karnataka Election – 2023: ರಾಜ್ಯದಲ್ಲಿ ಚುನಾವಣಾ ಕಣ(Karnataka Election – 2023) ರಂಗೇರುತ್ತಿದ್ದಂತೆ ಪ್ರಚಾರ ಕಾರ್ಯಗಳು ಬಿರುಸು ಪಡೆದುಕೊಳ್ಳುತ್ತಿವೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕೆ. ಎಸ್. ಈಶ್ವರಪ್ಪ ಸಮ್ಮುಖದಲ್ಲಿ ಬಿಜೆಪಿ ಇಂದು ಸಮಾವೇಶ ನಡೆದಿದೆ. ಆ ಸಮಾವೇಶದಲ್ಲಿ ಕನ್ನಡದ ಬದಲಾಗಿ ತಮಿಳು ನಾಡಗೀತೆ ಪ್ರಸಾರವಾಗಿದೆ !
ಇವತ್ತಿನ ಸಮಾರಂಭದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಮತ್ತು ಕರ್ನಾಟಕ ಚುನಾವಣೆಯ ಸಹ ಉಸ್ತುವಾರಿ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ಶಿವಮೊಗ್ಗದಲ್ಲಿ ಭಾಗಿಯಾಗಿದ್ದರು. ಶಿವಮೊಗ್ಗದಲ್ಲಿನ ತಮಿಳು ಸಮುದಾಯದವರನ್ನು ಸೆಳೆಯಲು ಸಮಾವೇಶ ಏರ್ಪಡಿಸಲಾಗಿತ್ತು ಎನ್ನಲಾಗಿದೆ. ಈ ವೇಳೆ ಯಾರೋ ತಮಿಳು ನಾಡಗೀತೆ ಪ್ರಸಾರ ಮಾಡಿದ್ದಾರೆ.
ತಮಿಳು ನಾಡಗೀತೆ ಪ್ರಸಾರವಾಗುತ್ತಿದ್ದಂತೆ ವೇದಿಕೆ ಮೇಲಿನ ಎಲ್ಲ ಗಣ್ಯರು ಎದ್ದು ನಿಂತು ತಮಿಳು ನಾಡಗೀತೆಗೆ ಗೌರವ ಸಲ್ಲಿಸಿದ್ದಾರೆ. ಬಳಿಕ ಆದ ಎಡವಟ್ಟು ಗಮನಕ್ಕೆ ಬರುತ್ತಿದ್ದಂತೆ, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಈಶ್ವರಪ್ಪ, ತಮಿಳು ಹಾಡನ್ನು ಅರ್ಧಕ್ಕೆ ಮೊಟಕುಗೊಳಿಸಿ, ಕನ್ನಡದ ನಾಡಗೀತೆ ಹಾಕಿಸಿದ್ದಾರೆ. ನಿಮಗೆ ಕನ್ನಡ ನಾಡಗೀತೆ ಹಾಡಲು ಬರುವುದಿಲ್ಲವೇ ಎಂದು ಎಲ್ಲರಿಂದಲೂ ಕನ್ನಡದ ನಾಡಗೀತೆಯನ್ನು ಹಾಡಿಸಿದ್ದಾರೆ. ಆ ಕ್ಷಣಕ್ಕೆ ಇದು ನೆರೆದಿದ್ದ ಕಾರ್ಯಕರ್ತರಲ್ಲೂ ಕೊಂಚ ಇರಿಸು ಮುರಿಸಾಗಿತ್ತು. ಆದರೆ ಈಶ್ವರಪ್ಪನವರು ಎಚ್ಚೆತ್ತುಕೊಂಡು ಯಶಸ್ವಿಯಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.
ಈ ಬಾರಿ ಬಿಜೆಪಿಯಲ್ಲಿ ಟಿಕೆಟ್ ವಂಚಿತ ಈಶ್ವರಪ್ಪನವರು ಕೆಲ ದಿನಗಳ ಮುನಿಸು ಮರೆತು ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮೊನ್ನೆ ಶಿವಮೊಗ್ಗದಲ್ಲಿ ಏ.25ರಂದು ನಡೆದ ವೀರಶೈವ- ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಕೆಎಸ್ ಈಶ್ವರಪ್ಪ, ಪಕ್ಷಕ್ಕೆ ಒಂದೇ ಒಂದು ಮುಸ್ಲಿಂ ಮತವೂ ಬೇಡ ಎಂದು ಹೇಳಿದ್ದರು. ಮತಾಂತರ ಒಂದು ಬಹುದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಹಿಂದೂ ಧರ್ಮವನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ ಎಂದು ಈಶ್ವರಪ್ಪ ಗುಡುಗಿದ್ದರು. ಮುಸ್ಲಿಮರು ಬಿಜೆಪಿಯನ್ನು ವಿರೋಧಿಸುತ್ತಾರೆ ಎಂದಾದರೆ, ಅವರ ಮತಗಳು ನಮಗೆ ಬೇಕಿಲ್ಲ. ಆದರೆ ಬಿಜೆಪಿ ಎಂದಿಗೂ ಧರ್ಮದ ಆಧಾರದ ಮೇಲೆ ಜನರ ನಡುವೆ ವ್ಯತ್ಯಾಸ ಮಾಡುವುದಿಲ್ಲ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದರು.
ಇದನ್ನು ಓದಿ: Grave: ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕುವ ಪೋಷಕರು! ಕಾರಣ ತಿಳಿದರೆ ಖಂಡಿತ ಬೆಚ್ಚಿಬೀಳ್ತೀರ!!!