Karnataka Election-2023: ಅಂತ್ಯವಾಯ್ತು ನಾಮಿನೇಷನ್ ಪರ್ವ! ಕಣದಲ್ಲಿದ್ದಾರೆ ಬರೋಬ್ಬರಿ 4 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು

Nomination : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ನಿಮಿತ್ತ ಕಳೆದ ಒಂದು ವಾರದಿಂದಲೂ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಭರದಿಂದ ಸಾಗುತ್ತಿತ್ತು. ಆದರೀಗ ನಿನ್ನೆಗೆ(ಗುರುವಾರ 20) ಈ ನಾಮಿನೇಷನ್ (Nomination) ಪರ್ವ ಮುಕ್ತಾಯವಾಗಿದೆ. ಈ ಒಂದು ವಾರದಲ್ಲಿ ಬರೋಬ್ಬರಿ 4 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

ಹೌದು, ಕರ್ನಾಟಕ ವಿಧಾನಸಭೆಗೆ ದಿನಗಣನೆ ಶುರುವಾಗಿದೆ. ನಾಮಪತ್ರ ಸಲ್ಲಿಕೆಯೂ ಬಿರುಸಿನಿಂದ ಸಾಗುತ್ತಿದ್ದು, ಗುರುವಾರ ನಾಮಪತ್ರ ಸಲ್ಲಿಸುವ ಗಡುವು ಮುಕ್ತಾಯಗೊಂಡಿದೆ. ಅಂದಹಾಗೆ ಏಪ್ರಿಲ್ 13ರಿಂದ ಏಪ್ರಿಲ್ 20ರ ವರೆಗೆ ಬರೋಬ್ಬರಿ 4,435 ನಾಮಪತ್ರ ಸಲ್ಲಿಕೆಯಾಗಿದ್ದು, ಏಪ್ರಿಲ್ 21 ರಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿಗಳು ನಾಮಪತ್ರಗಳ ಪರಿಶೀಲನೆ
ನಡೆಸಲಿದ್ದಾರೆ. ನಾಳೆ ಮಧ್ಯಾಹ್ನ ಮೂರು ಗಂಟೆಯ ನಂತರ ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಸಿಂಧುವಾದ ನಾಮಪತ್ರಗಳು ಹಾಗೂ ತಿರಸ್ಕೃತಗೊಂಡ ನಾಮಪತ್ರಗಳ ವಿವರವನ್ನು ಪ್ರಕಟಿಸಲಿದ್ದಾರೆ.

ಅಂದಹಾಗೆ ನಾಮಪತ್ರ ವಾಪಸ್ ಪಡೆಯಲು ಇನ್ನೂ 4 ದಿನ ಬಾಕಿ ಇದೆ. ಕೊನೆಯ ದಿನ ಸಾಕಷ್ಟು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಹೆಬ್ಬಾಳದಲ್ಲಿ ಕಟ್ಟಾ ಜಗದೀಶ್, ಬೈರತಿ ಸುರೇಶ್, ಬ್ಯಾಟರಾಯನಪುರದಲ್ಲಿ ಕೃಷ್ಣ ಬೈರೇಗೌಡ, ಶಾಂತಿನಗರದಲ್ಲಿ ಎನ್.ಎ ಹ್ಯಾರಿಸ್, ಪುಲಕೇಶಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಸೇರಿ ಹಲವರು ನಾಮಪತ್ರ ಸಲ್ಲಿಸಿದ್ದಾರೆ.

ಇನ್ನು ತುಮಕೂರಿನಲ್ಲಿ (Tumakuru) ಪಕ್ಷೇತರರಾಗಿ ಸೊಗಡು ಶಿವಣ್ಣ, ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರರಾಗಿ, ಕುಂದಗೋಳದಲ್ಲಿ ಐ.ಎಸ್ ಚಿಕ್ಕನಗೌಡರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್‌ನ ಮೂವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಶಿರಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ ಕೊನೆಯ ದಿನ ಬಿ-ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದಾರೆ.

ಇದೆಲ್ಲದರ ನಡುವೆ ಬಹಳಷ್ಟು ಅಭ್ಯರ್ಥಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಒಂದಕ್ಕಿಂತ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಾಮ ಪತ್ರ ವಾಪಸ್ ಪಡೆಯಲು ಏ.24ರ ಮಧ್ಯಾಹ್ನ ಮೂರು ಗಂಟೆಯವರೆಗೂ ಕಾಲಾವಕಾಶವಿರಲಿದೆ. ಆ ನಂತರ ಚುನಾವಣಾ ಕಣದಲ್ಲಿ ಅಂತಿಮವಾಗಿ ಉಳಿಯುವ ಅಭ್ಯರ್ಥಿಗಳ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ: 4th list of JDS candidates released : ಜೆಡಿಎಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ! 13 ಅಭ್ಯರ್ಥಿಗಳ ಹೆಸರು ಘೋಷಿಸಿದ ದಳಪತಿಗಳು!

Leave A Reply

Your email address will not be published.